Lets Breakup -‘ ಇಲ್ಲಿರೋದು ಬರೀ ಪ್ರೀತಿಗೆ ಸಂಬಂಧಿಸಿದ ಕಥೆಗಳಲ್ಲ’ ಎಂದು ಮುನ್ನುಡಿಯಲ್ಲೇ ಲೇಖಕರು ಬರೆದಿದ್ದಾರೆ. ಮುನ್ನುಡಿ ಓದಿದ ಬಳಿಕ ಈ ಕಥಾ ಸಂಕಲನದಲ್ಲಿ ಇನ್ಯಾವ ರೀತಿ ಬ್ರೇಕಪ್ ಕಥೆಗಳಿವೆ ಎಂಬ ಕುತೂಹಲ ಮೂಡದೇ ಇರದು. ನಂಬಿಕೆ, ಸಂಬಂಧಗಳ ಬೆಸುಗೆಯಾಗಿರುವ ಜೀವನದಲ್ಲಿ ಯಾವೆಲ್ಲ ರೀತಿ ಬ್ರೇಕಪ್ ಸಂಭವಿಸಬಹುದು ಎಂಬುದನ್ನು ಇಲ್ಲಿ ಕಾಣಬಹುದು.
ಕೆಲವು ಕಥೆಗಳು ನಿಜಕ್ಕೂ ಕಾಡುತ್ತವೆ, ಕೆಲವು ಸುಮ್ಮನೆ ಓದಿಸಿಕೊಂಡು ಹೋಗುತ್ತವೆ, ಒಂದೆರಡು ಕಥೆಗಳ ಅಂತ್ಯ ಕುತೂಹಲಕಾರಿಯಾಗಿವುದಂತೂ ಸತ್ಯ. ಮುಖಪುಟ ವಿನ್ಯಾಸ ಸರಳವಾಗಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಹೊಸ ಹೊಸ ಲೇಖಕರ ಕಥೆ, ಕವನ, ಕಾದಂಬರಿಗಳನ್ನು ಪ್ರಕಟಿಸುವ ಧೈರ್ಯ ಮಾಡುತ್ತಿರುವ ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗೆ ಮೆಚ್ಚುಗೆ ಸೂಸಬೇಕಾಗುತ್ತದೆ. ಆದರೆ, ಕಥಾ ಸಂಕಲನದಲ್ಲಿ ‘ಸ್ಪೆಲ್ಲಿಂಗ್ ಮಿಸ್ಟೇಕ್’ ಬಗ್ಗೆ ಪ್ರಕಾಶಕರು ಹೆಚ್ಚಿನ ಗಮನ ಹರಿಸಿದರೆ ಒಳಿತು.
ಪುಸ್ತಕ: ಲೆಟ್ಸ್ ಬ್ರೇಕಪ್ (ಕಥಾ ಸಂಕಲನ).
ಲೇಖಕರು: ಸಂಪತ್ ಸಿರಿಮನೆ.
ಪ್ರಕಾಶನ: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ.
ಪುಸ್ತಕ ಕೊಳ್ಳಲು ಸಂಪರ್ಕಿಸಿ: ನಂದೀಶ್- 99025 90303.
ಪುಟಗಳು:124.
ಬೆಲೆ: 120.
ಮುಖಪುಟ ವಿನ್ಯಾಸ: ಮದನ್ ಸಿ.ಪಿ.

ಲೆಟ್ಸ್ ಬ್ರೇಕಪ್ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ವಿವಿಧ ಬಗೆಯ ಸಂಬಂಧ-ಸಂಕೋಲೆಗಳು, ಒಬ್ಬರ ಬಗ್ಗೆ ಇನ್ನೊಬ್ಬರ ನಿಲುವು, ಬದಲಾವಣೆ ಬಯಸಿ ತುಳಿವ ಹೊಸ ಹಾದಿ, ಹಳೆ ನೆನಪು, ಬಂಧ ಕಳಚಿಕೊಳ್ಳುವ ಪರಿಸ್ಥಿತಿ ಜೀವನದಲ್ಲಿ ಎದುರಾಗದೆ ಇರದು. ಇಂಥ ಪರಿಸ್ಥಿತಿಗಳನ್ನು ತನ್ನ ಗ್ರಹಿಕೆ, ವಿಶ್ಲೇಷಣೆ ಮೂಲಕ ಸರಳವಾಗಿ ಕಥೆ ರೂಪದಲ್ಲಿ ಲೇಖಕರು ನೀಡುವಲ್ಲಿ ಸಫಲರಾಗಿದ್ದಾರೆ.
ಬದುಕು ಎಲ್ಲವೂ ಯಾಕೋ ಅಂದುಕೊಂಡಂತೆ ಸಾಗುತ್ತಿಲ್ಲ, ಜವಾಬ್ದಾರಿ ಹೊರೆ, ಏಕತಾನತೆಯ ಬೇಲಿ ಹಾರುವುದು ಹೇಗೆ? ಸಂಬಂಧಗಳ ವೈರುಧ್ಯಗಳ ನಡುವೆ ಸಂಭ್ರಮ ಸಾಧ್ಯವೆ? ಎಂಬ ಪ್ರಶ್ನೆಗಳನ್ನು ಎತ್ತಿರುವ ಯುವ ಐಟಿ ಉದ್ಯೋಗಿಯ ದಾಂಪತ್ಯ ಗೀತೆಯ ಮೊದಲ ಪರ್ವದಂತೆ ಇರುವ ಮೊದಲ ಕಥೆ- ‘ಎರಡನೇ ಬ್ರಹ್ಮಚರ್ಯ‘ ಅನೇಕರಿಗೆ ಇದು ಆಪ್ತವೆನಿಸಬಹುದು. ನಗರ ಬದುಕಿನ ಪರಿಚಯ ಇಲ್ಲದಿದ್ದರೂ ಈ ಕಥೆ ಸುಮ್ಮನೆ ಓದಲು ಅಡ್ಡಿಯಿಲ್ಲ.
ಸೆಕೆಂಡ್ ಹ್ಯಾಂಡ್– ಅಕ್ಕ ತಂಗಿ ನಡುವಿನ ಮನಸ್ತಾಪ, ದ್ವೇಷದ ಕಥೆ “ಈ ಸೇಡನ್ನು ಒಂದು ಸಾವಿರ ವರ್ಷ ಇಟ್ಕೋತೀನಿ”, ನಿಂದ ಇಲ್ಲಿ “ಎಲ್ಲಾ ಹಳೇದೇ. ಹುಟ್ಟಿದ ಮೇಲೆ ಒಂದೇ ದಿನಕ್ಕೆ ಈ ಜಗತ್ತೇ ಹಳೇದು” ಡೈಲಾಗ್ ಬರುವಷ್ಟರಲ್ಲಿ ಇಬ್ಬರಿಗೂ ತಮ್ಮ ತಪ್ಪಿನ ಅರಿವು ಮೂಡಿರುತ್ತದೆ. ಲೈಫು ಇಷ್ಟೇನೆ ಎಂದು ಅರಿವು ಮೂಡಿಸುವ ‘ಅರಿವಿನ’ ಕಥೆ ಇದು ಎನ್ನಬಹುದು.
ಇಷ್ಟ್ ಸಣ್ಣ ವಿಷಯಕ್ಕೆ ಅಷ್ಟೊಂದ್ ದ್ವೇಷನಾ? ಅದು ಸೆಕೆಂಡ್ ಹ್ಯಾಂಡ್ ಬಟ್ಟೆ ಸೆಕೆಂಡ್ ಜನರೇಷನ್ ಬರೋ ತನಕ ನಡೆಯುತ್ತೆ ಎಂದರೆ ನಂಬಕ್ಕೆ ಆಗಲ್ಲ ಎಂದು ಬೆಂಗಳೂರು ಅಥವಾ ನಗರವಾಸಿಗಳು ಹುಬ್ಬೇರಿಸಬಹುದು. ಆದರೆ, ಮಲೆನಾಡಿನಲ್ಲಿ ಊರು ಮನೆಗಳಲ್ಲಿ ಯಾವುದೋ ಸಮಾರಂಭದಲ್ಲಿ ಊಟಕ್ಕೆ ಮಿಡಿ ಉಪ್ಪಿನಕಾಯಿ ಹಾಕಿಲ್ಲ ಎಂಬ ಸಣ್ಣ ಕಾರಣಕ್ಕೆ ಆರಂಭವಾದ ಮುನಿಸು, ದ್ವೇಷ ದಶಕಗಳ ಕಾಲ ಬೆಳೆದು ಬಂದ ಉದಾಹರಣೆಗಳಿವೆ.
ಈ ಕಥಾ ಸಂಕಲನದ ಟಾಪ್ ಕಥೆ ಎಂದರೆ ಕಣ್ಮರೆ ಎನ್ನಬಹುದು. “ನಾನು ಏಕತಾನತೆಯ ವ್ಯಸನಿ” ಎಂದು ಲೇಖಕ ಹೇಳುವುದು ತನ್ನ ಬಗ್ಗೆ ಮಾತ್ರವಲ್ಲ, ಈ ನಗರದ ಬದಲಾಗದ ದುಃಸ್ಥಿತಿ ಬಗ್ಗೆ ಕೂಡಾ ಎಂದೆನಿಸದೇ ಇರದು. ಬಸ್ ನಿಲ್ದಾಣದಲ್ಲಿ ಕಂಡ ಯುವಕ ಒಂದು ದಿನ ಕಣ್ಮರೆಯಾಗುತ್ತಾನೆ. ಆತನನ್ನು ಹುಡುಕಲು ಹೊರಟಾಗ ಕಂಡು ಬರುವ ಬೆಂಗಳೂರಿನ ಚಿತ್ರಣದೊಂದಿಗೆ ಓದುಗರು ಪಯಣಿಸುವಂತೆ ಕಥೆ ಸಾಗುತ್ತದೆ.
ಅನಾಮಿಕನೊಬ್ಬನ ಹುಡುಕಾಟ ಮಾತ್ರವಲ್ಲದೆ ತನ್ನ ಬಗ್ಗೆ, ಬದಲಾಗುತ್ತಿರುವ ನಗರದ ಬಗ್ಗೆ ಹುಡುಕಾಟಕ್ಕೆ ತೊಡಗಿದಂತೆ ಕಾಣುತ್ತದೆ. ಒಂದು ಉತ್ತಮ ಕಿರುಚಿತ್ರಕ್ಕೆ ಹೊಂದಬಹುದಾದ ಕಥೆ, ಸನ್ನಿವೇಶವನ್ನು ಕಣ್ಮರೆ ಒದಗಿಸುತ್ತದೆ ಎನ್ನಬಹುದು.

ಲೆಟ್ಸ್ ಬ್ರೇಕಪ್– ಐಟಿ ಕಂಪನಿಗಳಲ್ಲಿ ಕಂಡು ಕೇಳಿ ಬರುವ ಸಾಮಾನ್ಯ ಪ್ರಸಂಗವೊಂದನ್ನು ಇಲ್ಲಿ ಲೇಖಕರು ಪ್ರಸ್ತುತಪಡಿಸಿರುವ ರೀತಿ ತುಂಬಾ ಚೆನ್ನಾಗಿದೆ. “ಹುಟ್ಟು ಮತ್ತು ಸಾವುಗಳ ಮಧ್ಯೆ ಮನುಷ್ಯ ಹೆಚ್ಚಿನ ಸಮಯ ವ್ಯರ್ಥ ಮಾಡುವುದು ಆಲೋಚನೆಗಳಲ್ಲಿಯೇ ಅಲ್ಲವೆ?” ಎಂಬ ಬದುಕಿನ ವೇದಾಂತ ವಾಕ್ಯದ ನಡುವೆ ಇಷ್ಟವಿಲ್ಲದ ಬಂಧದಿಂದ ಮುಕ್ತರಾಗಲು ಬಯಸುವವನ ಸ್ವಗತ ಇಲ್ಲಿದೆ. ಕಥೆ ಇನ್ನಷ್ಟು ವಿಸ್ತರಿಸಿ, ಇನ್ನೊಂದೆರಡು ಸನ್ನಿವೇಶ, ಹಳೆ ನೆನಪುಗಳನ್ನು ಪೋಣಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದೆನಿಸಿತು.
ಮಿಕ್ಕಂತೆ ಬಾಡಿಗೆ ಮನೆ ಸಂಘರ್ಷಗಳ ಗೋಡೆ ಬೀಳಿಸುವ ‘ರಂಪ’, ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದ ಅಗ್ನಿ ಆಕಸ್ಮಿಕ ನೆನಪಿಸುವ ‘ಸರಳು’ ನೈಜ ಘಟನೆ ಆಧಾರಿತ ಎಂದೆನಿಸುತ್ತದೆ.
“ಪರಿಪೂರ್ಣತೆ ಎಂಬುದಿಲ್ಲ, ಜಗತ್ತು ನಡೆಯುತ್ತಿರುವುದೆ ಹೊಂದಾಣಿಕೆ ಮೇಲೆ” ಎನ್ನುವ ಬಿಯರ್ ನೊರೆಯ ಕಥೆ ‘ಬೂದು ಬಣ್ಣದ ಮನುಷ್ಯ’, ಪಿಗ್ಮಿ ಕಲೆಕ್ಟರ್ ಕಥೆ ಇರುವ ‘ಜಮಾ’, ‘ಪದಬಂಧ’ ಕಥೆಯ ಅಂತ್ಯ ಉತ್ತಮವಾಗಿದೆ, ‘ಪತ್ತೆ’, ‘ಚುಚ್ಚುಮದ್ದು’ ಬಾಲ್ಯದ ನೆನಪು ಮೂಡಿಸುತ್ತದೆ.
ಒಟ್ಟಾರೆ, ಅನೇಕ ಕಥೆಗಳು ಹೆಚ್ಚು ಗಾಂಭೀರ್ಯತೆ ಇಲ್ಲದೆ ಓದಿಸಿಕೊಂಡು ಹೋಗುತ್ತದೆ. ಒಟ್ಟಾರೆಯಾಗಿ, ಕಥಾ ಸಂಕಲನ ಸಂಗ್ರಹ ಯೋಗ್ಯ. ಲೇಖಕ ಸಂಪತ್ ಅವರ ಮುಂದಿನ ಕಥೆಗಳು ವಿಸ್ತಾರಗೊಂಡು ಕಾದಂಬರಿ ರೂಪದಲ್ಲಿ ಹೊರಬರಲಿ ಎಂದು ಆಶಿಸುವೆ.