“ಒಮ್ಮೆ ಗೆಲ್ಲುವ ಅಭ್ಯಾಸ ಕರಗತವಾಗಿ ಬಿಟ್ಟರೆ ಆಮೇಲೆ ಜಗತ್ತು ನಿಮ್ಮ ಮುಂದೆ ಸೋತು ನಿಲ್ಲುತ್ತದೆ.”.
ಜಗತ್ತು ಮೆಚ್ಚುವ ನಾಯಕನಿಗೆ ಯಾವ ವಿಶೇಷ ಗುಣಗಳು ಇರಬೇಕು. ನಂ.1 ಆಗಬೇಕಾದರೆ ಏನು ಮಾಡಬೇಕು? ಇದು ಸಹಜವಾಗಿ ಕನಸು ಕಾಣುವ ಹದಿಹರೆಯದ ವೃತ್ತಿಪರರನ್ನು ಕಾಡುವ ಸಾಮಾನ್ಯವಾದ ಆದರೆ ಮಹತ್ತರವಾದ ಪ್ರಶ್ನೆ. ಮೊದಲ ನಾಯಕ ಎಂದರೆ ಯಾರು? ಸ್ವಂತ ಬೆಳವಣಿಗೆಗೆ ಇತರರನ್ನು ಮೆಟ್ಟಿಲಾಗಿಸಿಕೊಂಡು ಮೇಲಕ್ಕೆ ಏರುವವನೋ? ಅಥವಾ ಎಲ್ಲರನ್ನು ಬೆಳೆಸಿ ತಾನು ಬೆಳೆದು ಹೊಸ ವ್ಯವಸ್ಥೆ ರೂಪಿಸುವವನೋ? ಒಂದರ್ಥದಲ್ಲಿ ಎರಡು ಮಾರ್ಗಗಳು ಅವಶ್ಯಕ. ಆದರೆ, ಸಾಧನೆಯ ಹಾದಿಯ ಆರಂಭದಲ್ಲೇ ಆಯ್ಕೆ ಮಾಡಿಕೊಂಡರೆ ಉತ್ತಮ. ಜೊತೆಗೆ ನಿಮ್ಮ ಜೀವನದಲ್ಲಿ ‘ಯಶಸ್ಸು’ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಿಕೊಂಡರೆ ಮುಂದಿನ ಹಾದಿ ಸುಗಮ..
ಆತ್ಮ ವಿಶ್ವಾಸ:
“ಆತ್ಮವಿಶ್ವಾಸವೇ ಜಯದ ಮೊದಲ ಗುಟ್ಟು“-R.W ಎಮರ್ಸನ್
ವಿದ್ಯಾರ್ಥಿ ಜೀವನದಲ್ಲಿಯಾಗಲಿ, ವೃತ್ತಿಯಲ್ಲಿಯಾಗಲಿ ಯಶ ಸಂಪಾದಿಸಬೇಕಾದರೆ ಮೊದಲಿಗೆ ಬೇಕಾದ್ದು ಆತ್ಮವಿಶ್ವಾಸ. ಯಶಸ್ಸು ಎಂದರೆ ಬರೀ ಹಣ, ಅಧಿಕಾರ ಗಳಿಸುವುದಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಆತ್ಮವಿಶ್ವಾಸದಿಂದ ಎಲ್ಲಾ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿ ಸಂತೃಪ್ತಿ ಹಾಗೂ ಕ್ರಿಯಾಶೀಲ ಬದುಕು ಕಳೆಯುವ ಉತ್ತಮ ಜೀವನಶೈಲಿ ಉಳ್ಳವನೇ ನಿಜವಾದ ನಾಯಕ. ‘ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ ಹಾಗಾಗಿ ಯಾರು ಯಾವ ಕಂಪೆನಿಗೂ ಶಾಶ್ವತವಲ್ಲ. ನಿಮ್ಮ ಆಯ್ಕೆ ಸ್ವಂತ ಬೆಳವಣಿಗೆಯಾದರೆ ನೀವು ಈಗ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಯನ್ನು ಮೆಟ್ಟಿಲಾಗಿಸಿಕೊಂಡು ಮುಂದುವರೆಯಿರಿ, ಉತ್ತಮ ಅವಕಾಶ ದೊರೆತಾಗ, ಬದಲಾವಣೆ ಅಗತ್ಯ ಎನಿಸಿದಾಗ ಹಿಂಜರಿಯದೆ ಹೊಸ ಹಾದಿ ಹಿಡಿಯಿರಿ. ಆತ್ಮ ವಿಶ್ವಾಸ ಇದ್ದವನು ನಿರ್ಣಯಗಳನ್ನು ಸೂಕ್ತ ರೀತಿಯಲ್ಲಿ ತೆಗೆದುಕೊಳ್ಳಬಲ್ಲ.
ಗುರುವಿನ ಆಯ್ಕೆ:
ಈಗಾಗಲೇ ಅನೇಕಾನಕ ಯಶಸ್ವಿ ನಾಯಕರ ಚರಿತ್ರೆಯನ್ನು ಓದಿದವರಿಗೆ ಒಂದು ವಿಷಯ ಮನದಟ್ಟಾಗಿರುತ್ತದೆ. ಪ್ರತಿ ಯಶಸ್ವಿ ನಾಯಕನ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾನೆ. ದಾಸರ ವಾಣಿಯಂತೆ ಗುರುವಿನ ಗುಲಾಮನಾಗುವ ಕಾಲ ಇದಲ್ಲ. ಗುರುವಿನ ಆಯ್ಕೆ ಬಗ್ಗೆ ಶ್ರೀಕೃಷ್ಣ ಬೋಧಿಸಿದ್ದನ್ನು ಓದಿಕೊಳ್ಳಿ. ನಿಮಗೆ ಬೇಕಾದ ಗುರುವನ್ನು ಆರಿಸಿಕೊಳ್ಳಿ. ಯಶಸ್ವಿ ಉದ್ಯಮಿಗಳ ಜೀವನ ಚರಿತ್ರೆ ತಪ್ಪದೇ ಓದಿ, ಸಾಕ್ಷ್ಯಚಿತ್ರ ನೋಡಿ. ಈ ಎಲ್ಲಾ ಜೀವನ ಚರಿತ್ರೆಗಳಲ್ಲಿ ಗಮನಿಸಬೇಕಾದ ಸಾಮಾನ್ಯ ಸಂಗತಿ ಎಂದರೆ, ನಾಯಕನಾದವನು ಅವಕಾಶಗಳಿಗಾಗಿ ಕಾಯುವುದಿಲ್ಲ. ತನ್ನ ಗುರು ಅಥವಾ ಮಾರ್ಗದರ್ಶಕನನ್ನು ಬಳಸಿಕೊಂಡು ಅವಕಾಶ ಸೃಷ್ಟಿಸುತ್ತಾನೆ. ನಿಮ್ಮ ಗುರಿಗೆ ಸರಿ ಹೊಂದಬಲ್ಲ ಆದರ್ಶ ಗುರುವನ್ನೇ ಆರಿಸಿಕೊಳ್ಳಿ. ಬಿಲ್ ಗೇಟ್ಸ್ ನಂತೆ ಬೆಳೆಯಬೇಕು ಎಂದು ಕನಸು ಕಾಣುವವನು ಮಹಾತ್ಮಾ ಗಾಂಧೀಜಿ ಆದರ್ಶಗಳನ್ನು ಪಾಲಿಸಿಕೊಂಡು ಗುರಿ ಸಾಧಿಸುತ್ತೇನೆ ಎಂದರೆ ಅದೊಂದು ಪವಾಡವೇ ಸರಿ. ಗುರು ಜೊತೆಗೆ ಗುರಿ ಬಗ್ಗೆ ಸ್ಪಷ್ಟವಾಗಿರಿ.
ನಿಮಗೆ ಯಾರು ಸ್ಪರ್ಧಿ:
ನೀವು ಯಶಸ್ವಿಯಾಗಬೇಕಾದರೆ ಯಾರೊಟ್ಟಿಗೂ ಸ್ಪರ್ಧಿಸಬೇಕಾಗಿಲ್ಲ. ಇತರರೊಡನೆ ಸ್ಪರ್ಧೆಗಿಳಿಯುವುದಕ್ಕಿಂತ ತನ್ನ ಸಾಮರ್ಥ್ಯಕ್ಕೆ ಸವಾಲೊಡ್ಡಬಲ್ಲ ಗುರಿಯನ್ನು ಸಾಧಿಸುವುದನ್ನು ಯಶಸ್ವಿ ನಾಯಕ ಹೆಚ್ಚು ಇಷ್ಟಪಡುತ್ತಾನೆ. ನಿಮ್ಮ ಪ್ರಯತ್ನದಲ್ಲಿ ಅನೇಕ ಬಾರಿ ಸೋಲುಂಟಾದರೂ ಧೃತಿಗೆಡದೆ ಮುನ್ನಡೆಯಿರಿ, ಆತ್ಮವಿಶ್ವಾಸ ನಿಮ್ಮೊಂದಿಗೆ ಇರುವುದರಿಂದ ನಿಮ್ಮ ಸೋಲು ಗೆಲುವಿನ ಮೆಟ್ಟಿಲಾಗಿ ಪರಿವರ್ತನೆಗೊಳ್ಳುತ್ತದೆ. ಹೆಚ್ಚು ಕಷ್ಟಗಳನ್ನು ಉಂಡ ನಂತರ ಅನುಭವಿಸುವ ಸುಖ ಶಾಶ್ವತವಾದದ್ದು. ತಾಳ್ಮೆಯಿಂದ ನಿಮ್ಮ ಗುರಿಯ ಕಡೆಗೆ ಗಮನಹರಿಸಿ.

ಟೈಮ್ ಮ್ಯಾನೇಜ್ ಮೆಂಟ್:
‘One of the greatest problems of the human mind is the structuring of time’ ಎಂಬ ಮಾತಿದೆ. ಸಮಯದ ಮಹತ್ವ ಅರಿತವನೇ ಜಾಣ. ಯಾವುದೇ ಯೋಜನೆಯಿರಲಿ, ಸಣ್ಣ ಪುಟ್ಟ ಕಾರ್ಯವಿರಲಿ, ಮೀಟಿಂಗ್ ಇರಲಿ, ಡೇಟಿಂಗ್ ಇರಲಿ ಸರಿಯಾದ ಟೈಮ್‌ಗೆ ಹಾಜರಾಗುವುದನ್ನು ಕಲಿಯಿರಿ. ಅದು ಹೇಗೆ? ಶಿಸ್ತಿನ ಟೈಮ್ ಟೇಬಲ್ ಅಳವಡಿಸಿಕೊಳ್ಳಿ. ಪ್ರತಿ ಕೆಲಸದ ಮಹತ್ವದ ಅರಿವಿರಲಿ, ಅರ್ಜೆಂಟ್ ಆಗಿ ಯಾವ ಕೆಲಸವನ್ನು ಮಾಡಬೇಡಿ. ತ್ವರಿತವಾಗಿ ಕೆಲಸ ಮಾಡಲು ಹೋದರೆ ಮನಸ್ಸಿನ ಮೇಲೆ ಹೆಚ್ಚಿನ ಒತ್ತಡ ಹೇರಿದಂತಾಗಿ ಸರಿಯಾದ ನಿರ್ಣಯಗಳು ಹೊರಬೀಳುವುದಿಲ್ಲ. ಎಷ್ಟು ಹೊತ್ತು ದುಡಿದಿರಿ ಎಂದು ಲೆಕ್ಕ ಹಾಕುವುದಕ್ಕಿಂತ ಎಷ್ಟು ಉತ್ಪಾದನಾತ್ಮಕವಾಗಿ ಕೆಲಸ ನಿರ್ವಹಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಕೆಲಸದ ಅವಧಿ ನಿಯಮಿತವಾಗಿರಲಿ ಉಳಿದ ಅವಧಿ ಕಲಿಕೆಗೆ ಮೀಸಲಿರಲಿ..
ಹೆಚ್ಚು ಶ್ರಮ, ಕಡಿಮೆ ಫಲ:
ಇದು ಎಲ್ಲೆಡೆ ಕಂಡು ಬರುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಹಿರಿಯ ಅಧಿಕಾರಿಗಳ ಸಂಚಿಗೆ ಬಲಿಯಾಗಿ ನಿಮ್ಮ ಪರಿಶ್ರಮ ಅವರ ಜೋಳಿಗೆ ತುಂಬಿಸತೊಡಗುತ್ತದೆ. ಆದ್ದರಿಂದ, ಎಲ್ಲವನ್ನು ನೀವೇ ಮಾಡಬೇಕೆಂಬ ಹಂಬಲ ಬಿಟ್ಟುಬಿಡಿ, ನಿಮಗೆ ಸಾಮರ್ಥ್ಯ, ಪ್ರತಿಭೆ ಇದ್ದರೂ ಎಲ್ಲರ ಅಭಿಪ್ರಾಯ ಬಳಸಿ, ಟೈಮ್ ಮ್ಯಾನೇಜ್ ಮೆಂಟ್ ಬಳಸಿ ಹೆಚ್ಚು ಕಾಲ ಕೆಲಸಕ್ಕಿಂತ ಫಲಿತಾಂಶಯುಕ್ತ ಕಾರ್ಯಗಳತ್ತ ಮಗ್ನರಾಗಿ. ಶ್ರಮಕ್ಕೆ ತಕ್ಕ ಫಲ ಸಿಗದಿದ್ದಾಗ ಪ್ರಶ್ನಿಸಿ, ಪ್ರಶ್ನೆ ಕೇಳುವುದನ್ನು ಮರೆತರೆ, ವಿಷಯಗಳು ಅರ್ಥವಾಗುವುದಿಲ್ಲ. ವಿಷಯಗಳು ಅರ್ಥವಾಗದೆ ಅರಿವು ಹೆಚ್ಚಾಗುವುದಿಲ್ಲ. ಅರಿವು ಇಲ್ಲದೆ ಗಾಣದ ಎತ್ತಿನಂತೆ ದುಡಿಯುತ್ತಿದ್ದರೆ ಎಂದಿಗೂ ಮೇಲಕ್ಕೇರಲು ಸಾಧ್ಯವಿಲ್ಲ. ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಂಡು ಸಾಧಿಸುತ್ತಾ ಬನ್ನಿ, ಸಾಧನೆ ತಕ್ಕ ಫಲ ಸಿಕ್ಕಾಗ ಮಾತ್ರ ಮುಂದಿನ ಗುರಿಯತ್ತ ಗಮನಹರಿಸಿ.

ಅಭ್ಯಾಸಗಳು, ಜವಾಬ್ದಾರಿ:
ನಾನು ಏನೇನೋ ಸಾಧಿಸಬೇಕೆಂದುಕೊಂಡಿದ್ದೆ ಆದರೆ, ಸಂಸಾರ ಜವಾಬ್ದಾರಿ ಏನು ಮಾಡೋಕೆ ಆಗಲಿಲ್ಲ ಎನ್ನುವವರಿದ್ದಾರೆ. ಮತ್ತೆ ಕೆಲವರು ‘ನಾನು ಓದಿದ್ದೇ ಒಂದು, ಈಗ ಕೆಲ್ಸ ಮಾಡ್ತಾ ಇರೋದೇ ಇನ್ನೊಂದು, ಓದಿಗೂ ವೃತ್ತಿಗೂ ಸಂಬಂಧವೇ ಇಲ್ಲ’ಗೊಣಗುವುದನ್ನು ಬಿಡಿ. ಕುಟುಂಬ, ಗೆಳಯರು, ಸಮಾಜವನ್ನು ನಿಮ್ಮ ಸಾಧನೆಯ ಹಾದಿಗೆ ತಂದು ಬಿಡಿ. ನಿಮ್ಮ ಅಭಿರುಚಿಯನ್ನು ಅವರಿಗೆ ಆರ್ಥ ಮಾಡಿಸಿ, ಇಲ್ಲದಿದ್ದರೆ ಎಲ್ಲವನ್ನು ಧಿಕ್ಕರಿಸಿ ಗುರಿ ಸಾಧಿಸಿ, ನೆನಪಿಡಿ ಸಾಧಕನ ಹಿಂದೆ ಸಾವಿರ ಮಂದಿ ಇರುತ್ತಾರೆ. ದಿನನಿತ್ಯದ ಅಭ್ಯಾಸಗಳಲ್ಲಿ ಕೊಂಚ ಮಾರ್ಪಾಟು ಮಾಡಿಕೊಳ್ಳಿ. ದೈಹಿಕ ಕಸರತ್ತು, ಯೋಗ, ಧ್ಯಾನ ರೂಢಿಸಿಕೊಳ್ಳಿ, ಸಂಗೀತ ಆಲಿಸಿ, ಮನರಂಜನೆ, ತಿಳುವಳಿಕೆಗಾಗಿ ಜಗತನ್ನು ಶಿಶು ಸಹಜ ಕುತೂಹಲದಿಂದ ಸದಾ ನೋಡುತ್ತಿರಿ.
ಆದರೆ, ವಿಷಯಗಳಲ್ಲಿ ಮುಳುಗಬೇಡಿ. ಗುರಿ ಸಾಧನೆ ಎಂಬುದು ಒಂದೊಂದೇ ಮೆಟ್ಟಿಲು ಹತ್ತುವ ಕ್ರಿಯೆ. ಹಾಗಾಗಿ ಮುಂದಿಟ್ಟ ಹೆಜ್ಜೆ ಹಿಂದಿಡದೆ ಮುಂದುವರೆಯಿರಿ, ಹೆಚ್ಚೆಚ್ಚು ಸಾಧನೆ ಮಾಡಿದಂತೆ ಎಲ್ಲರು ಆಪ್ತರಾಗುತ್ತಾರೆ. ಯಶಸ್ವಿ ನಾಯಕರಾಗಿ ನಿಮ್ಮ ಕನಸಿನ ಜಗತ್ತನ್ನು ನಿರ್ಮಿಸಿ. ಅಥವಾ ಯಶಸ್ಸಿನ ಹಾದಿಯಲ್ಲಿ ನಿಮ್ಮ ಜೊತೆಗಿರುವವರನ್ನು ಬೆಳೆಸಿ ಹೊಸ ಹಾದಿ ತೋರಿದ ನೇತಾರರಾಗಿ. ಎಲ್ಲಕ್ಕಿಂತ ಗೆಲ್ಲುವ ನಂಬಿಕೆಯೊಂದಿಗೆ ಮುನ್ನುಗ್ಗಿ. ಒಮ್ಮೆ ಗೆಲ್ಲುವ ಅಭ್ಯಾಸ ಕರಗತವಾಗಿ ಬಿಟ್ಟರೆ ಆಮೇಲೆ ಜಗತ್ತು ನಿಮ್ಮ ಮುಂದೆ ಸೋತು ನಿಲ್ಲುತ್ತದೆ.
ಯಶಸ್ಸು ಎನ್ನುವುದು ನಿರಂತರ ಪ್ರಯತ್ನದ ಫಲ.
ಜಗತ್ತು ವೇಗವಾಗಿ ಬದಲಾಗುತ್ತಿರುವಾಗ, ಸದಾ ಹೊಸದನ್ನು ಕಲಿಯುವ ಹಸಿವು ನಾಯಕನಿಗೆ ಅತ್ಯಗತ್ಯ. ಇದು ಅವರನ್ನು ಪ್ರತಿ ಹಂತದಲ್ಲೂ ಬೆಳೆಯಲು ಮತ್ತು ಯಶಸ್ಸು ಸಾಧಿಸಲು ಸಹಾಯ ಮಾಡುತ್ತದೆ. ಯಶಸ್ಸು ಎನ್ನುವುದು ನಿರಂತರ ಪ್ರಯತ್ನದ ಫಲವಾಗಿದೆ. ನಿರಂತರವಾಗಿ ಕಲಿಯುವ ಮತ್ತು ಬೆಳೆಯುವ ಹಸಿವು ನಂ. 1 ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಯಶಸ್ಸು ಎಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಅರ್ಥವನ್ನು ಹೊಂದಿದೆ. ಯಶಸ್ಸು ಎಂದರೆ ಕೇವಲ ಹಣ ಮತ್ತು ಖ್ಯಾತಿಯನ್ನು ಗಳಿಸುವುದಷ್ಟೇ ಅಲ್ಲ, ಬದಲಾಗಿ ಸ್ವಂತ ಕನಸುಗಳನ್ನು ಸಾಧಿಸಿ, ಇತರರಿಗೂ ನೆರವಾಗುವುದೇ ಆಗಿದೆ ಎಂಬುದನ್ನು ಮರೆಯಬೇಡಿ.
[Note: ಇದು ದಶಕದ ಹಿಂದೆ ವಿಜಯ ಕರ್ನಾಟಕದ ಬೋಧಿವೃಕ್ಷದಲ್ಲಿ ಚಿಕ್ಕದಾಗಿ ಪ್ರಕಟವಾಗಿದ್ದ ಲೇಖನ, ಇಲ್ಲಿ ವಿಸ್ತರಿಸಿ ಪ್ರಕಟಿಸಿರುವೆ]
-ಮಲೆನಾಡಿಗ