ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ಮೂಲದ ಆಟಗಾರ ನಿಖಿಲ್ ಚೌಧರಿ ಆಯ್ಕೆಯಾಗಿರುವ ವಿಷಯ ಗೊತ್ತಿರಬಹುದು. ಸುಮಾರು 60 ವರ್ಷಗಳ ನಂತರ ಇಂಥದ್ದೊಂದು ಇತಿಹಾಸವನ್ನು ನಿಖಿಲ್ ಬರೆದಿದ್ದಾರೆ. ಮೆಕ್ಸಿಕನ್ ರೆಸ್ಟೋರೆಂಟ್ ಕೆಲಸದಿಂದ ಆಸ್ಟ್ರೇಲಿಯನ್ ಕ್ರಿಕೆಟ್ ಸ್ಟಾರ್ ತನಕ ನಿಖಿಲ್ ಚೌಧರಿ ಅಚ್ಚರಿಯ ಪಯಣ ಕುರಿತಂತೆ ಕರ್ನಾಟಕ ಮ್ಯಾಟರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ಲೇಷಣೆ ಇಲ್ಲಿದೆ:

ಭಾರತದಲ್ಲಿ ಐಪಿಎಲ್ ಹಬ್ಬ ಮುಗಿದು ಟಿ20 ವಿಶ್ವಕಪ್‌ಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ, ಆಸ್ಟ್ರೇಲಿಯಾ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಬಾಂಗ್ಲಾದೇಶ ವಿರುದ್ಧದ ಮುಂಬರುವ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡವು ಭಾರತದ ದೆಹಲಿಯಲ್ಲಿ ಹುಟ್ಟಿ ಬೆಳೆದ ನಿಖಿಲ್ ಚೌಧರಿ ಅವರನ್ನು ತನ್ನ ತಂಡಕ್ಕೆ ಆಯ್ಕೆ ಮಾಡಿದೆ.
ಈ ಮೂಲಕ 1964ರಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದ ರೆಕ್ ಸೆಲ್ಲರ್ಸ್ ಅವರ ನಂತರ, ಆಸೀಸ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಭಾರತದಲ್ಲಿ ಜನಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ 30 ವರ್ಷದ ನಿಖಿಲ್ ಪಾತ್ರರಾಗಿದ್ದಾರೆ.
ಪಂಜಾಬ್‌ನಿಂದ ಆಸ್ಟ್ರೇಲಿಯಾದವರೆಗೆ: ಸಿನಿಮಾ ಶೈಲಿಯ ಪಯಣ
ನಿಖಿಲ್ ಚೌಧರಿ ಮೂಲತಃ ದೆಹಲಿಯವರಾದರೂ ಪಂಜಾಬ್ ತಂಡದ ಪರವಾಗಿ ದೇಶಿ ಕ್ರಿಕೆಟ್ ಆಡುತ್ತಿದ್ದರು. ಇಂದು ವಿಶ್ವದಾದ್ಯಂತ ಮಿಂಚುತ್ತಿರುವ ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮ ಮತ್ತು ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರಂತಹ ದಿಗ್ಗಜರ ಜೊತೆಗೆ ಅವರು ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು.
ಆದರೆ, ನಿಖಿಲ್ ಅವರ ಜೀವನ ಬದಲಾಗಿದ್ದು 2020ರಲ್ಲಿ. ಕೋವಿಡ್ ಸಮಯದಲ್ಲಿ ಕ್ವೀನ್ಸ್‌ಲ್ಯಾಂಡ್‌ನಲ್ಲಿದ್ದ ತಮ್ಮ ಸಂಬಂಧಿಕರನ್ನು ನೋಡಲು ಹೋದಾಗ ಲಾಕ್‌ಡೌನ್‌ನಿಂದಾಗಿ ಅಲ್ಲೇ ಉಳಿಯಬೇಕಾಯಿತು.
ಸಂಘರ್ಷದ ಹಾದಿ: ಮೆಕ್ಸಿಕನ್ ರೆಸ್ಟೋರೆಂಟ್‌ನಿಂದ ಕ್ರಿಕೆಟ್ ಪಿಚ್‌ವರೆಗೆ
ಆಸ್ಟ್ರೇಲಿಯಾದಲ್ಲಿ ಬದುಕು ಕಟ್ಟಿಕೊಳ್ಳುವುದು ನಿಖಿಲ್‌ಗೆ ಸುಲಭವಾಗಿರಲಿಲ್ಲ. ಅಲ್ಲಿ ಉಳಿದುಕೊಳ್ಳಲು ಮತ್ತು ಆರ್ಥಿಕವಾಗಿ ಸಬಲರಾಗಲು ಅವರು ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ಮುಖ್ಯವಾಗಿ ಮೆಕ್ಸಿಕನ್ ರೆಸ್ಟೋರೆಂಟ್ ವೊಂದರಲ್ಲಿ ತರಕಾರಿ ಮತ್ತು ಮಾಂಸ ಕತ್ತರಿಸುವ ಕೆಲಸ ಮಾಡಿದರು. ಇದಲ್ಲದೆ, ಪೋಸ್ಟ್ ಮ್ಯಾನ್ ರೀತಿ ಮನೆ ಮನೆಗೆ ಪಾರ್ಸೆಲ್‌ಗಳನ್ನು ಕೆಲಸ ಮಾಡಿದರು. ಉಬರ್ ಕ್ಯಾಬ್ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದರು.
ಇಷ್ಟೆಲ್ಲಾ ಕೆಲಸಗಳ ನಡುವೆಯೂ ಕ್ರಿಕೆಟ್ ಮೇಲಿನ ಒಲವು ಕಡಿಮೆಯಾಗಲಿಲ್ಲ. ಪ್ರತಿದಿನ ಮೂರು ಗಂಟೆಗಳ ಕಾಲ ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಿಗೆ ಹೊಂದಿಕೊಳ್ಳಲು ಕಠಿಣ ಅಭ್ಯಾಸ ನಡೆಸಿದರು. ಇದರಿಂದಾಗಿ ಮುಂದೆ ಹೊಬಾರ್ಟ್ ಹರಿಕೇನ್ಸ್ ಜೆರ್ಸಿ ಧರಿಸಿ ಆಡುವ ಅವಕಾಶ ಸಿಕ್ಕಿತು.
ಬಿಗ್ ಬ್ಯಾಷ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾದರ ಗಮನ ಸೆಳೆದರು. ಮುಂದೆ ನಡೆದಿದ್ದು, ಇತಿಹಾಸ, ಈಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದ ಆಟಗಾರ ನಿಖಿಲ್ ಚೌಧರಿ ಅವರ ಸಾಧನೆ ಸ್ಪೂರ್ತಿದಾಯಕವಾಗಿದೆ.
