ಅತ್ಮೀಯ ಓದುಗರೇ.. ಇದು ಕನ್ನಡ ಕೃತಿಗಳ ಅರ್ಪಣೆ-ಸಮರ್ಪಣೆ ಪುಟಗಳ ಅಸಮಗ್ರ ಸಂಗ್ರಹ.
ಯಾವುದೇ ಪುಸ್ತಕ ಓದಲು ಆರಂಭಿಸುತ್ತಿದ್ದಂತೆ, ಮುಖಪುಟ, ಮುನ್ನುಡಿ, ಪರಿವಿಡಿ, ಬೆನ್ನುಡಿ, ಜೊತೆಗೆ ‘ಅರ್ಪಣೆ’ ಪುಟ ಗಮನ ಸೆಳೆಯುತ್ತದೆ.
ಅರ್ಪಣೆ ಎಂಬುದು ಯಾವುದೇ ವ್ಯಕ್ತಿ, ವಿಷಯ ಸ್ಮರಿಸುವ ಪುಟವಲ್ಲ. ಇದಕ್ಕಾಗಿ ಕೃತಜ್ಞತಾ ಪುಟ ಇದ್ದೇ ಇರುತ್ತದೆ. ‘ಅರ್ಪಣೆ’ ಪುಟದಲ್ಲಿ ಸಾಹಿತಿಗಳು ತಮ್ಮ ಕೃತಿಯನ್ನು ಯಾರಿಗೆ, ಹೇಗೆ, ಏಕೆ ಆರ್ಪಿಸಿದ್ದಾರೆ ಎಂಬುದು ಕುತೂಹಲಕಾರಿ.
ಅರ್ಪಣೆ ಒಂದು ಪದ, ಒಂದು ವಾಕ್ಯ, ಒಂದು ಪ್ಯಾರ ಅಥವಾ ಒಂದೆರಡು ಪುಟಗಳಾದರೂ ಇರಬಹುದು, ವ್ಯಕ್ತಿ, ಸಮಾಜ, ಸಿದ್ಧಾಂತ, ವೃತ್ತಿ ಹೀಗೆ ತಮ್ಮ ಅಂತರಂಗಕ್ಕೆ ಆಪ್ತವೆನಿಸುವ ವಿಷಯ, ವಸ್ತುಗಳಿಗೆ ಸಮರ್ಪಿಸುವ ಧನ್ಯತಾ ಭಾವ ಇದರಲ್ಲಿ ಕಾಣಬಹುದು.
ಇಂಥ ಧನ್ಯತಾ ಪುಟಗಳ ಸಂಗ್ರಹದ ಪ್ರಯತ್ನ ಇದಾಗಿದೆ. ಮೊದಲಿಗೆ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ‘ಶ್ರೀರಾಮಾಯಣ ದರ್ಶನಂ’ ಅರ್ಪಣಾ ವಾಕ್ಯಗಳಿಂದ ಆರಂಭಿಸಿ, ಉಳಿದ ಹಿರಿ-ಕಿರಿ ಸಾಹಿತಿಗಳ ಹೃದಯದ ಮಾತುಗಳನ್ನು ಒಂದೆಡೆ ತರುವ ಪ್ರಯತ್ನಪಡಲಾಗಿದೆ.

1. ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆರಂಭದಲ್ಲಿ, ಕುವೆಂಪು ಅವರು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡಿ, ಕಾವ್ಯದ ಮೂಲ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಶ್ರೀವೆಂಕಣ್ಣಯ್ಯನವರಿಗೆ
ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ
ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ.
ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ,
ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತ ಕೃತ್ಯನಂ
ಧನ್ಯನಂ ಮಾಡಿ. ನೀಮುದಯರವಿಗೈತಂದು
ಕೇಳಲೆಳಸಿದಿರಂದು. ಕಿರುಗವನಗಳನೋದಿ
ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ
ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ;
ರಾಮಾಯಣಂ ಅದು ವಿರಾಮಾಯಣಂ ಕಣಾ!”
ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ;
ದಿಟದ ಮನೆಗೈದಿದಿರಿ!
ಇದೊ ಬಂದಿರುವೆನಿಂದು
ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ,
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ
ಕೃಪೆಯಿಂದೆ.- ಪೂರ್ವದ ಮಹಾಕವಿಗಳೆಲ್ಲರುಂ
ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ:
ಸಂಘಕೆ ಮಹಾಧ್ಯಕ್ಷರಲ್ತೆ ನೀಂ? ಕಿರಿಯನಾಂ
ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ!
ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್
ಆಲಿಸಾ ಗುರುಕೃಪೆಯ ಶಿಷ್ಯ ಕೃತಿ ಸಂಕೀರ್ತಿಯಂ:
“ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀಕುವೆಂಪುವ ಸೃಜಿಸಿದೀ ಮಹಾಛಂದಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ!
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ!
ವಾಗರ್ಥ ರಥವೇರಿ, ಭಾವದಗ್ನಿಯ ಪಥಂ
ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ
ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು
ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ!
ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ;-
ಶ್ರೀ ರಾಮನಾ ಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;-
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ
ದೀಪ್ಯ ದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್!
ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್!
-ಶ್ರೀರಾಮಾಯಣ ದರ್ಶನಂ (ಮಹಾಕಾವ್ಯ)
-ಕುವೆಂಪು
2. ಸಿದ್ಧನ ವೆಂಕಟೇಶನ ವರ್ಗದ ಸಂತಾನ ಪರಂಪರೆಯಲ್ಲಿ ಮಂಜುನಾಥ ಪೈ ಎಂಬುವವರೊಬ್ಬರಿದ್ದರು. ಅವರಿಗೆ ಹತ್ತು ಗಂಡು ಮಕ್ಕಳು, ಆ ಹತ್ತು ಮಕ್ಕಳಿಗೂ ಹತ್ತು ಹತ್ತು ಮಕ್ಕಳು, ಅಂಥ ನೂರು ಮಕ್ಕಳಿಗೆ ತಂದ ಹೆಣ್ಣುಗಳೂ ಹೊರಗೆ ಕೊಟ್ಟ ಹೆಣ್ಣುಗಳೂ ವರ್ಷಕ್ಕೊಮ್ಮೆ ಈಯುವಾಗ ಬಾಣಂತನದ ಕೆಲಸಕ್ಕೆ ದೇಯಿ ಎಂಬ ಹೆಂಗಸು ಬರುತ್ತಿದ್ದಳು. ಕುಟುಂಬದ ಆ ತಲೆಮಾರಿನ ಮಕ್ಕಳ ಸಂಖ್ಯೆ ಸಾವಿರವಾದರೆ ಅದರಲ್ಲಿ ನೆಲಕ್ಕೆ ಬೀಳದಂತೆ ದೇಯಿ ಕೈಯಾರ ಹಿಡಿದುಕೊಂಡ ಮಕ್ಕಳ ಸಂಖ್ಯೆ ಏನಿಲ್ಲವೆಂದರೂ ಐನೂರಕ್ಕೆ ಕಡಿಮೆಯಾಗಲಾರದು.
ಗಂಡಾಗಲೀ ಹೆಣ್ಣಾಗಲೀ, ಪ್ರಸವದ ಕೋಣೆಯಿಂದ ಹೊರಗೆ ಬರುವಾಗ ಅವಳ ಮೋರೆಯ ಮೇಲೆ ಮೂಡುವ ಮುಗುಳ್ನಗೆಯನ್ನು ನೋಡಿಯೇ ತಿಳೀಯಬೇಕು. ಹುಟ್ಟಿದ ಮಗುವಿನ ದೇಖದೇಖಿ, ಅದರ ಕೊಳಕು ಬಟ್ಟೆಗಳ ಒಗೆಯುವಿಕೆ, ಬಾಣಂತಿಗೆ ಎಣ್ಣೆ ಪೂಸಿ, ಸ್ನಾನ ಮಾಡಿಸುವುದು, ಮಗು ಅತ್ತರೆ, ತಾಯಿಗೆ ಜ್ವರ ಬಂದರೆ ಅವರ ಆರೈಕೆ, ಇವೆಲ್ಲ ದೇಯಿಯ ಕೆಲಸಗಳಲ್ಲಿ ಕೆಲವು. ಒಂದು ಬಾಣಂತನ ಮುಗಿದ ತಕ್ಷಣ ಇನ್ನೊಂದು. ಒಂದು ಮನೆಯಿಂದ ಇನ್ನೊಂದು ಮನೆಗೆ, ಒಮ್ಮೊಮ್ಮೆ ತಾಯಿ ಮಗಳ ಬಾಣಂತನಗಳು ಒಟ್ಟಿಗೇ, ಹುಟ್ಟಿದ ಮಗುವಿನ ಮುಖದ ಮೇಲೆ ಒಂದು ನಗು ಮೂಡಿತೋ ದೇಯಿ ಇನ್ನೊಬ್ಬಳ ಪ್ರಸವದಲ್ಲಿ ಪಾಲ್ಗೊಳ್ಳಲು ನಿಗೂಢದಂತೆ ಮಾಯವಾಗಿ ಬಿಡುತ್ತಿದ್ದಳು.
ನಾನು ದೇಯಿಯನ್ನು ನೋಡುವಾಗ ಅವಳಿಗೆ ತುಂಬ ವಯಸ್ಸಾಗಿತ್ತಲ್ಲದೇ ನನ್ನಷ್ಟು ದೊಡ್ಡ ಮೊಮ್ಮಕ್ಕಳಿದ್ದರು. ಸ್ಥೂಲ ದೇಹ, ಅಗಲವಾದ ಮೋರೆ, ನೀರಸುಳಿಗಳಂತೆ ಸದಾ ಬೆಳಗುವ ಮುಗುಳ್ನಗೆ, ಗಜ್ಜುಗದಷ್ಟು ದೊಡ್ಡ ಕಣ್ಣುಗಳು, ಹುಟ್ಟಿದ ಮಗುವಿಗೆ ಬೆಚ್ಚನೆಯ ಆಸರೆ ಕೊಡುವ ದಪ್ಪನೆಯ ತೋಳುಗಳು, ಅಟ್ಟೆಕಾಲುಗಳು, ರವಿಕೆ ಇಲ್ಲದ ದಿನಗಳಲ್ಲಿ ನೀಲಿ ಕೈಮಗ್ಗದ ಸೀರೆಯೊಂದನ್ನು ಭುಜದ ಸುತ್ತ ಹೊದ್ದುಕೊಳ್ಳುತ್ತಿದ್ದರು. ಸಿದ್ದನ ವೆಂಕಟೇಶನ ವರ್ಗದ ಸಮಸ್ತ ಕೌಟುಂಬಿಕರೂ ಈ ಪ್ರಸವಭಾಗಿಗೆ ಋಣಿಯಾಗಿರಬೇಕು.
ಅಂಥ ಆ ದೇಯಿಗೆ ಈ ಕೃತಿ..ಅರ್ಪಣೆ
-ಸ್ವಪ್ನ ಸಾರಸ್ವತ (ಕಾದಂಬರಿ)
-ಗೋಪಾಲಕೃಷ್ಣ ಪೈ
3. ನನ್ನ ಭಾವನೆಗಳಿಗೆ, ವಿಚಾರಗಳಿಗೆ
‘ಬಿಸಿಲು, ನೀರು’ ಒದಗಿಸಿ, ಮಾಗಿಸಿ
ಅವುಗಳಿಗೊಂದು ಗಟ್ಟಿ ಆಕಾರ ಬರುವಂತೆ ಮಾಡಿದ
‘ಮೂಲ ಚೈತನ್ಯ’
ಅಣ್ಣ ಗೌರೀಶ ಕಾಯ್ಕಿಣಿ
ಅವರಿಗೆ
ಕೃತಜ್ಞತೆಯಿಂದ,
ಪ್ರೀತಿಯಿಂದ…ಅರ್ಪಣೆ
-ಕತೆಯಾದಳು ಹುಡುಗಿ (ಕಥಾ ಸಂಕಲನ)
-ಯಶವಂತ ಚಿತ್ತಾಲ
4. ಅವರ ನಿರೀಕ್ಷೆಯಂತೆ ಬದುಕದಿದ್ದರೂ
ಸಹಿಸಿಕೊಳ್ಳುತ್ತಲೇ ಇರುವ
ಅಪ್ಪ ಮತ್ತು ಅಮ್ಮನಿಗೆ…ಅರ್ಪಣೆ
-ಲೆಟ್ಸ್ ಬ್ರೇಕಪ್ (ಕಥಾ ಸಂಕಲನ)
-ಸಂಪತ್ ಸಿರಿಮನೆ
5. ಆತ್ಮೀಯರಾದ
ಕು. ಶಿ. ಹರಿದಾಸ ಭಟ್ಟರಿಗೆ
ಪ್ರೀತಿಯಿಂದ …ಅರ್ಪಣೆ
-ಆಕಾಶಕ್ಕೊಂದು ಕಂದೀಲು? (ಕಾದಂಬರಿ)
-ವ್ಯಾಸರಾಯ ಬಲ್ಲಾಳ
6. ನನ್ನೆದೆಗೆ ಮೊದಲಕ್ಷರ ಬಿತ್ತಿದ, ಬದುಕಿನುದ್ದಕ್ಕೂ ಕಷ್ಟ
ಕೋಟಲೆಗಳನ್ನಷ್ಟೇ ಕಂಡು, ಸುಖ ಬರುವ ಹೊತ್ತಿಗೆ
ಅದನ್ನು ಅನುಭವಿಸಲಾರದ ಸ್ಥಿತಿಗೆ ತಲುಪಿದ
ನನ್ನಮ್ಮನಿಗೆ ಅಶ್ರುಬಿಂದುವಿನೊಂದಿಗೆ ಸಮರ್ಪಣೆ
-ಯಾವುದೀ ಹೊಸ ಒಗಟು? (ಕಾದಂಬರಿ)
-ಸಸಿಹಿತ್ಲು ಪಿ. ಸುಬ್ರಮಣ್ಯ
7. ನನ್ನ ನೆನಪುಗಳ ಬಹುಪಾಲು
ತುಂಬಿ ಹೋಗಿರುವ ನನ್ನ ಅಜ್ಜ-ಅಜ್ಜಿಯವರಾದ
ಶ್ರೀ ಶಂಕರಪ್ಪ-ಶ್ರೀಮತಿ ಪಾರ್ವತಮ್ಮ
ಹಾಗೂ
ಶ್ರೀ ಜನಾರ್ದನಯ್ಯ-ಶ್ರೀಮತಿ ಕಲ್ಯಾಣಮ್ಮ
ಇವರಿಗೆ ಅರ್ಪಣೆ
-ಎನ್ನ ಭವದ ಕೇಡು (ಕಾದಂಬರಿ)
-ಎಸ್ ಸುರೇಂದ್ರನಾಥ್
8. ಯಶೋದಾಗೆ…ಅರ್ಪಣೆ
-ಅಂತರಂಗದ ಅತಿಥಿ (ಕಾದಂಬರಿ)
-ಕೆ.ಟಿ ಗಟ್ಟಿ
9. ನನ್ನ ಹೆಸರಿನ ಮೊದಲರ್ಧ ನನ್ನ ಬಾಳಿನ ಮಿಗಿಲರ್ಧ ಆಗಿರುವ ಜ್ಯೋತಿ-ಗೆ…ಅರ್ಪಣೆ
-ನದಿ ನೆನಪಿನ ಹಂಗು (ಕಾದಂಬರಿ)
-ಜೋಗಿ
10. ಪಶ್ಚಿಮಘಟ್ಟದ ತಪ್ಪಲಿನಲ್ಲಿ
ಮಹಾಮಳೆಯಿಂದ ಅವಘಡಗಳು ಸಂಭವಿಸಿ,
ಹಳ್ಳಿಹಳ್ಳಿಗಳ ಬದುಕಿನ ಸಂಕೋಲೆಗಳೇ ತುಂಡರಿದಾಗ
ಮಾನವೀಯವಾಗಿ ಸ್ಪಂದಿಸಿದ ಎಲ್ಲಾ ಸಹೃದಯ ಮನಸ್ಸುಗಳಿಗೆ
ಮತ್ತು ಬದುಕು ಕಳೆದುಕೊಂಡ ಸಂತ್ರಸ್ಥ ಕುಟುಂಬಗಳಿಗೆ… ಅರ್ಪಣೆ
-ಒಂದು ಮಹಾಮಳೆಯ ಕಥೆ (ಕಾದಂಬರಿ)
-ನಾಗರಾಜ ಕೂವೆ.
11. ಮುದ್ದಿನ ಮೊಮ್ಮಕ್ಕಳು
ವೈಶಾಲಿ ಹಾಗೂ ಅಭಿನಂದನ್
ಇವರಿಗೆ
ಪ್ರೀತಿ-ವಾತ್ಸಲ್ಯಗಳಿಂದ
-ಕೇಂದ್ರ ವೃತ್ತಾಂತ(ಕಾದಂಬರಿ)
-ಯಶವಂತ ಚಿತ್ತಾಲ
12. ನನ್ನ ಬದುಕಿನ ಅಂಗಳದಲ್ಲಿ ದೀವಿಗೆಯಾಗಿ ಉರಿದು ಬೆಳಕು ನೀಡುವ ಇವರಿಗೆ
ಶ್ರೀ ಹಳೆಮನೆ ಭೀಮನಗೌಡ ಅಣ್ಣ
ಶ್ರೀ ಹಳೆಮನೆ ಬಸವರಾಜಪ್ಪ ಗುಂಡಪ್ಪ ಅಣ್ಣ
ಶ್ರೀ ಹಳೆಮನೆ ಸಿದ್ದರಾಮಪ್ಪ ಅಣ್ಣ
ಶ್ರೀ ಹಳೆಮನೆ ರಾಜಶೇಖರ (ಅಣ್ಣನ ಮಗ)
-ಸವಾರಿ (ಕಥಾ ಸಂಕಲನ)
-ಅಮರೇಶ ನುಗಡೋಣಿ
13. ತನ್ನವೇ ಜೀವ ಹಿಂಡುವ
ನೂರೆಂಟು ಹಳವಂಡಗಳ ನಡುವೆಯೂ
ನನ್ನ ಬದುಕು ಕಟ್ಟಲು ನಿಂತ ಹಠಯೋಗಿನಿಯಂತೆ
ನನ್ನೊಳಗಿನ ಕನಸಿನ ಬಲೂನಿಗೆ
ನಿರಂತರವಾಗಿ ಉಸಿರು ತುಂಬುತ್ತಾ
ನನ್ನೆಲ್ಲಾ ಯಮಯಾತನೆಗಳಿಗೆ
ತನ್ನ ಅಮೃತಹಸ್ತದಿಂದ
ಸದಾ ಜೀವಂತಿಕೆಯ ಮುಲಾಮು ಹಚ್ಚುತ್ತಾ
ಅನುದಿನವೂ ಪೀಡಿಸಿ ಕಾಡಿಸಿ ಕತೆಗಳನ್ನು ಬರೆಸಿ
ಓದಿ ತಿದ್ದಿ ತೀಡಿಸಿ
ಭರಪೂರ ಖುಷಿಪಡುವ
ನನ್ನ ಅತ್ಮಬಂಧುವಿಗೆ… ಅರ್ಪಣೆ
-ಕಾಟಿಹರದ ತಿರುವು (ಕಥೆಗಳು)
-ಕಾರ್ತಿಕಾದಿತ್ಯ ಬೆಳ್ಗೋಡು
14. ಪ್ರಣಿತ ಮತ್ತು ಪ್ರಭವ-ರಿಗೆ
-ಗುಣ (ಕಾದಂಬರಿ)
-ಗುರುಪ್ರಸಾದ್ ಕಾಗಿನೆಲೆ
15. ‘ನಮ್ಮ ತವಕ ತಲ್ಲಣಗಳಿಗೆ’
ದನಿಯಾದ
ಕೆ.ವಿ ಸುಬ್ಬಣ್ಣನವರ
ನೆನಪಿಗೆ
-ಪಿಂಜರ್ (ಕಾದಂಬರಿ)
-ಅಮೃತಾ ಪ್ರೀತಮ್ (ಕನ್ನಡಕ್ಕೆ: ಎಲ್.ಸಿ ಸುಮಿತ್ರಾ)
16. ಈ ಕೃತಿ ಮೂಲಭೂತವಾದಿಗಳ ಉರಿದಿಟ್ಟಿಗೆ ಬಿದ್ದು
ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ರಕ್ಷಣೆಗೆ ಧಾವಿಸಿದ ಕನ್ನಡದ
ಪ್ರಗತಿಪರ ಮನಸ್ಸುಗಳಿಗೆ ಈ ಮರುಕೃತಿ ಅರ್ಪಿತ
-ಗಾಂಧಿ ಬಂದ (ಕಾದಂಬರಿ)
-ಎಚ್ ನಾಗವೇಣಿ
17. ಮಾಲತಿಗೆ-ಪ್ರೀತಿಯಿಂದ
-ಶಿಕಾರಿ (ಕಾದಂಬರಿ)
-ಯಶವಂತ ಚಿತ್ತಾಲ
18. ಸೊಸಾಕು ಕೊಬಾಯಾಶಿ
ಅವರ ನೆನಪಿಗೆ
ಸಮರ್ಪಿತ
-ತೊತ್ತೊ-ಚಾನ್ (ಸೃಜನಶೀಲ ಕಲಿಕೆ)
-ತೆತ್ಸುಕೊ ಕುರೊಯಾನಾಗಿ (ಅನುವಾದ: ವಿ. ಗಾಯತ್ರಿ)
19. ನಮ್ಮನ್ನೆಲ್ಲಾ ಪೊರೆವ ತಾಯಿ ಪಶ್ವಿಮ ಘಟ್ಟಕ್ಕೆ
-ದೇವಭೂಮಿಯ ಮಹಾಪತನ
-ವಿಜು ಬಿ (ಕನ್ನಡಕ್ಕೆ: ಕಾರ್ತಿಕಾದಿತ್ಯ ಬೆಳ್ಗೋಡು)
20. ಬಯಲುಸೀಮೆಯ ಹಳ್ಳಿಗಾಡಿನ ಅನಕ್ಷರಸ್ಥ
ಹೆಣ್ಣುಮಕ್ಕಳ ಅನುಭವಗಳನ್ನು, ದಂತಕತೆಗಳನ್ನು
ಹಂಚಿಕೊಂಡ, ಯಾರನ್ನು ಕಂಡರೂ ತಟ್ಟನೆ
ಮರುಗುವ ಈ ಕತೆಯ ತಾಯಿ ಹೃದಯದ
‘ಗುಂಡಮ್ಮ’ ನಂತಹ ವಿಶಾಲ ಮನಸ್ಸಿನ
ನನ್ನಮ್ಮನಿಗೆ –ಪ್ರೀತಿಯಿಂದ ಅರ್ಪಣೆ
-ಯಾದ್ ವಶೇಮ್ (ಕಾದಂಬರಿ)
-ನೇಮಿಚಂದ್ರ
21. ಲೋಕದ ಶೋಕವ ತಗ್ಗಿಸಿದ ಶಾಕ್ಯಮುನಿ
ಗೌತಮ ಬುದ್ಧ
ನಿನ್ನ ಚರಣಕಮಲಗಳಿಗೆ
-ರೇಷ್ಮೆ ಬಟ್ಟೆ (ಕಾದಂಬರಿ)
-ವಸುಧೇಂದ್ರ
22. ‘ಅನಂತ’ವಾದ್ದನ್ನೆಲ್ಲಾ ‘ಅಂಗೈ’ನ ಚೌಕಟ್ಟಿನಲ್ಲಿ
ಅಡಗಿಸಿದ
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರಿಗೆ
-ಯುಗೇ ಯುಗೇ (ಕಥಾ ಸಂಕಲನ)
-ಸತ್ಯಕಿ
23. ನಮ್ಮಲ್ಲಿ ನಿಸರ್ಗದ ಅರಿವಿನ ದಿಗಂತವನ್ನು ವಿಸ್ತರಿಸಲು ನೆರವಾದ
ಮದುಮಲೈಕಾಡಿನ ಬುಡಕಟ್ಟು ಜನಾಂಗದ
ಚಿನ್ನ, ಬೊಮ್ಮ, ಕೃಷ್ಣ ಹಾಗೂ
ಬಂಡೀಪುರದ ಮೂರ್ತಿಯಂತೆ
ಅಜ್ಞಾತವಾಗುಳಿದಿರುವ
ಈ ನಾಡಿನ ಅಸಂಖ್ಯಾತ
ಜೀವ ವಿಜ್ಞಾನಿಗಳಿಗೆ…ಅರ್ಪಣೆ
-ಜೀವ ಜಾಲ
-ಕೆ. ಪುಟ್ಟಸ್ವಾಮಿ | ಕೃಪಾಕರ ಸೇನಾನಿ
24. ನನ್ನ ತಂದೆ ಬಿತ್ತಿದ ವಿಜ್ಞಾನ ಬೀಜವನ್ನು
ಅವರಷ್ಟೆ ಕಾಳಜಿ ವಹಿಸಿ ನನ್ನಲ್ಲಿ ಬೆಳೆಸಿ
ಆ ಸಸಿಯ ಹಸಿರಲ್ಲಿ ತನ್ನೆಲ್ಲ ‘ಹಸಿವ’ನ್ನೂ ಮರೆಯುತ್ತಿದ್ದ.
ಮರೆಯಾಗಿ ಹೋದ
‘ಚಿಂಪು’ಗೆ
-ಸಸ್ಯ ಸಗ್ಗ
-ಡಾ. ಕೆ. ಎನ್ ಗಣೇಶಯ್ಯ
25. ಭಾವಕೋಶದ ಭಾಗವೇ ಆದ
ಕೊಟ್ಟಿಗೆಹಾರ ಎಂಬ ಊರಿಗೆ
-ಕಣ್ಣ ಕನ್ನಡಿಯಲ್ಲಿ-೧
-ನಂದೀನ್ ಬಂಕೇನಹಳ್ಳಿ
26. ಅಗಣಿತ ಪತಂಗಗಳಿಗೆ
ಅನಾಮಿಕ ಬಾಲ ಸನ್ಯಾಸಿಗಳಿಗೆ
-ಜಮುನಾ ಮಾನ್ಷನ್ (ಕಥಾ ಸಂಕಲನ)
-ಕಾರ್ತಿಕಾದಿತ್ಯ ಬೆಳ್ಗೋಡು
27. ಈ ಪುಸ್ತಕಕ್ಕೆ ಪರೋಕ್ಷವಾಗಿ ಸ್ಫೂರ್ತಿ ನೀಡಿದ
ಹಾಗೂ
ತಾರಿಣಿ ಬರುವವರೆಗೂ ಅಣ್ಣನನ್ನು ನೋಡಿಕೊಂಡ
ಶ್ರೀಮತಿ ರಾಜೇಶ್ವರಿಗೆ
ಅಣ್ಣನನ್ನು ಕೊನೆಗಾಲದವರೆಗೂ ನೋಡಿಕೊಂಡ
ತಂಗಿ ತಾರಿಣಿಗೆ
ಅನಾರೋಗ್ಯದಲ್ಲೂ ಪದೇಪದೇ ಬಂದು ಕೈಲಾದಷ್ಟು
ನೋಡಿಕೊಳ್ಳುತ್ತಿದ್ದ ತಂಗಿ ಇಂದುಕಲಾಗೆ …ಅರ್ಪಣೆ
-ಅಣ್ಣನ ನೆನಪು
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ
28. ಪ್ರಕೃತಿ ಮತ್ತು ಪರಿಸರದ ಬಗ್ಗೆ
ನನಗೆ ಮೊದಲ ಕುತೂಹಲ
ಮೂಡಿಸಿದ
ನನ್ನ ತಂದೆಯವರಿಗೆ… ಅರ್ಪಣೆ
-ಪರಿಸರದ ಕಥೆ
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ
29. ಒಂದು ಗಂಟೆ ಬಾರಿಸದೆ
ನಾಲ್ಕಾಣೆ ಕಾಣಿಕೆ ಹಾಕದೆ
ತಲೆಮೇಲೆ ಹೂ ಪಕಳೆಯನ್ನೂ ಇಡದೆ
ನನ್ನೊಳಗೆ ದೇವರ ಮೂರ್ತಿಯಾಗಿರುವ
ಸಚಿನ್ ತೆಂಡೂಲ್ಕರ್‌ಗೆ…
-ತೇಜಸ್ವಿ ಬದುಕಿದ್ದಾರೆ
-ಕೀರ್ತಿ ಕೋಲ್ಗಾರ್
30. ನನ್ನ ಜೀವಕೆ ಜೀವ
ತುಂಬಿ ಬದುಕು ಬಂಗಾರವಾಗಿಸಿದ
ನನ್ನ ತೇಜಸ್ವಿಗೆ
-ನನ್ನ ತೇಜಸ್ವಿ
-ರಾಜೇಶ್ವರಿ ತೇಜಸ್ವಿ
31. ಗೆಳೆಯ ದಿ. ದೇವಣ್ಣ ಸುಬ್ರಾಯ ಪೈಗಳವರಿಗೆ
-ಚೋಮನ ದುಡಿ (ಕಾದಂಬರಿ)
-ಡಾ. ಶಿವರಾಮ ಕಾರಂತ
