Cosmic Connection: Poem on Journey through Space and Soul | ಕವನ: ಏಕಮೇವಾದ್ವಿತೀಯಂ ಸರ್ವಂ ಜಗತ್

ಏಕಮೇವಾದ್ವಿತೀಯಂ ಸರ್ವಂ ಜಗತ್


೧೩ ಶತ ಕೋಟಿ ವರುಷಗಳ ಹಿಂದಿನ ಕಾಲವದು

ಏನಿತ್ತು ಆವಾಗ, ಕಾಲದ ಪರಿಧಿಯಿರಲಿಲ್ಲ
ಅಂತರಿಕ್ಷವಿರಲಿಲ್ಲ, ಇದ್ದದ್ದೆಲ್ಲ ಒಂದೇ
ಏಕಮೇವಾದ್ವಿತೀಯಂ ಎನಿಸಿದೊಂದೇ

ಮಹಾಸ್ಫೋಟಕ್ಕೆ ಸಿಲುಕಿದೇತಕೋ ಅವನೇ ಬಲ್ಲ
ವಿಸ್ತರಿಸುತ್ತಾ ಹೋದ, ಬೆಳೆಯುತ್ತಾ ಹೋದ
ಅದಿ ಇಲ್ಲ, ಅಂತ್ಯವಿಲ್ಲ, ಲೆಕ್ಕವಿಡಲು ಕಾಲವೇ ಇಲ್ಲ
ಅನಾಹತ ನಾದವೇ ಮೊದಲಾಗಿದ್ದಾಗ ಕಂಡಳವಳು

ಆತನೋ ನಿರಾಕರಣೆಯ ಪ್ರತಿರೂಪ,
ಆಕೆಯೋ ಆಕರ್ಷಣೆಯ ಅದ್ವಿತೀಯ ರೂಪ,

ಬಿಂದು ಮಾತ್ರ ಸಂಕೇತವೇ ಸತ್ಯವಾದರೂ
ತದ್ವಿರುದ್ಧ ಶಕ್ತಿಗಳ ಸಂಗಮ ಅನಿವಾರ್ಯವಾಯಿತು
ಸಮ್ಮಿಳನ ವಿದಳನದ ಸಂಘರ್ಷದಿಂದ
ಕೋಟಿ ವಿಶ್ವಗಳ ಉಗಮ ಸಾಕಾರವಾಯಿತು.

ದ್ರವ್ಯ ಪ್ರತಿ ದ್ರವ್ಯಗಳ ಮಂಥನದಲ್ಲಿ ದ್ರವ್ಯ ಉಳಿಯಿತು
ದ್ರವ್ಯದಿಂದ ಕಣ, ಕಣಗಳು ಕೂಡಿ ವಸ್ತು, ವಸ್ತುಗಳ ಅಣು
ಅಣುಗಳ ಸಮ್ಮಿಳನದಿಂದ ಜೀವ ಉತ್ಪಾದನೆಯಾಯಿತು.
ಆದರೆ, ಗಾಢಾಂಧಕಾರವೇ ಎಲ್ಲೆಡೆ ಮನೆ ಮಾಡಿತ್ತು.

ರಕ್ತವರ್ಣಮಯವಾಗಿ ಕಂಡಿತು ವಾಯುಭರಿತ ಪ್ರದೇಶವೆಲ್ಲ
ಸರಿದೂಗಿಸಲು ಪಂಚಭೂತಗಳ ಸಾಕ್ಷಾತ್ಕಾರವಾಯಿತು
ವಾಯು, ನೀರು, ಗುರುತ್ವ, ಕೆಂಪು ಬೆಳಕು, ನಕ್ಷತ್ರ ಕಾಣಿಸಿತು
ಕಾಲ, ಅಂತರಿಕ್ಷ, ಜೀವ ಅಭಿವೃದ್ಧಿಕಾರಕ ಕಣ ಎಲ್ಲವೂ
ಅವನ-ಅವಳ ನಡುವಿನ ಸಂಘರ್ಷದಿಂದಲೇ

ನಕ್ಷತ್ರ ಪುಂಜಗಳು ಬಂದವು, ಹೋದವು
ಪುಟ್ಟ ಸರೋವರಗಳು ಸೃಷ್ಟಿಯಾದವು
ಕನಸಿನ [ಪರಿಧಿ]
ಜಾ
ರು
ವಾ

{ಗುರುತ್ವದ ಶಕ್ತಿಗೆ} <ಸಿಲುಕಿತು>

ಸಾವಿರ ಸೂರ್ಯಗಳು ಉದಯಿಸಿತು
ದ್ಯಾವಾ + ಪೃಥ್ವಿಯ ಸಂಗಮಕೆ
ಜೀವ ಉಗಮಿಸಿತು
ಜೀವ ಜೀವಗಳ ನಡುವೆ ಶಕ್ತಿ
ವಿನಿಮಯವಾಯ್ತು, ವಿಕಾಸವಾಯಿತು.

ನನ್ನೆಲ್ಲ ಹುಚ್ಚುತನಕ್ಕೆ ಕಿಚ್ಚಿಗೆ
ನಿನ್ನ ನಗೆಯೇ ಕಾರಣವಾಯ್ತು

ಎರಡು ನೂರಾ ತೊಂಭತ್ತಾರು
ಕದ್ದಿಂಗಳ ಕಂಡಿರುವ ನನ್ನ
ಹೃದಯದಿ ನೀ ಮಾತ್ರ
ಬೆಳದಿಂಗಳು ಮೂಡಿಸಿದೆ
-ಮಲೆನಾಡಿಗ

Leave a Reply

Your email address will not be published. Required fields are marked *