Jenukal Gudda-Sakleshpur – Mudigere Trek-tales Part 1 | ಜೇನುಕಲ್ಲು ಗುಡ್ಡ – ಚಾರಣ…ಕಥನ -1

ಹೀಗೊಂದು ಆರೋಹಣ… ಜೇನುಕಲ್ಲು ಗುಡ್ಡ – ಎತ್ತಿನ ಭುಜ ಚಾರಣ ಕಥನ

-ಕಿರಣ್ ರಾಜ್, ಅಂಕೋಲ (nayakkiranraj@gmail.com)

ವರುಷವೊಂದು(2011) ಅಸ್ತಮಿಸುವ ವೇಳೆಯಲ್ಲಿ ಚಾರಣಕ್ಕೆ ಸಿದ್ಧವಾಗಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಂತ ನಮ್ಮ ಗುಂಪು ಹೊಸ ವರುಷದ ಹೋರಾಟಕ್ಕೆ ಸನ್ನದ್ಧವಾದಂತೆ ತೋರುತ್ತಿತ್ತು. ರವಿ ಮತ್ತು ಸುಂಡಿಯನ್ನು ಬಿಟ್ಟರೆ ಉಳಿದ ಏಳು ಜನರ ಪರಿಚಯ ಕೂಡ ನನಗಿರಲಿಲ್ಲ.

ಶಾಸ್ತ್ರಾಚಾರದಂತೆ ಹೆಸರುಗಳು ವಿನಿಮಯವಾದವು, ಮರುಕ್ಷಣದಲ್ಲಿ ಮರೆತು ಕೂಡ ಹೋದವು! ಎರಡು ದಿನಗಳ ಹಾದಿಯಲ್ಲಿ ಮನದೊಳಗೆ ಗಟ್ಟಿಯಾಗುತ್ತವೆ ಬಿಡು ಎಂದು ನಾನು ಸುಮ್ಮನಾದೆ. ಗೋಪಿ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದರೆಂದು ತೋರುತ್ತದೆ, ಎರಡು ದಿನಗಳಿಗೆ ಸಾಕಾಗುವಷ್ಟು ಹಣ್ಣುಗಳು, ಒಣ ಹಣ್ಣುಗಳು ನಮ್ಮೆಲ್ಲರ ಬೆನ್ನಿಗೇರಿದವು.

ರಾತ್ರಿ ಒಂಭತ್ತುವರೆಯ ಬಸ್ಸನ್ನು ತಪ್ಪಾಗಿ ಹತ್ತಿ ಇಳಿದ ನಂತರ, ಹತ್ತು ಗಂಟೆಯ ಕರ್ನಾಟಕ ಸಾರಿಗೆ ಬಸ್ಸಿನ ಕೊನೆಯ ಆಸನಗಳು ನಮ್ಮ ಸೇವೆಗೆ ಸಿದ್ಧವಾಗಿದ್ದವು! ಹಳ್ಳ ಕೊಳ್ಳಗಳ ಪರಿವೆಯಿಲ್ಲದೆ ಮುನ್ನುಗ್ಗುತ್ತಿದ್ದ ಬಸ್ಸು ನಮ್ಮನ್ನು ಮೂಡಿಗೆರೆಯಲ್ಲಿ ಎಸೆದದ್ದಷ್ಟೇ ಗೊತ್ತು. ಆವಾಗಷ್ಟೇ ಎದ್ದೇಳುತ್ತಿದ್ದ ಮೂಡಿಗೆರೆ ನಮ್ಮ ಹೊಟ್ಟೆಗೆ ಮೋಸ ಮಾಡಲಿಲ್ಲ. ಟೀ, ಇಡ್ಲಿ, ಕಾಫಿಗಳ ಸಮಾರಾಧನೆಯ ವೇಳೆಗೆ ಚಾರಣದ ಜನಪ್ರಿಯ ಪಾತ್ರ ಫರ್ನಾಂಡಿಸ್…ಜೂಲಿಯನ್ ಫರ್ನಾಂಡಿಸ್ ಅವರ ಪ್ರವೇಶವೂ ಆಯಿತು.

ಮುಂದಿನ ಒಂದು ಗಂಟೆಯ ಫರ್ನಾಂಡಿಸರೊಂದಿಗಿನ ಟಾಟಾ ಸುಮೋ ಪಯಣದ ಬಗ್ಗೆ ಒಂದು ಪ್ರತ್ಯೇಕ ಲೇಖನವನ್ನೇ ಬರೆಯಬಹುದು 😀 ನೀವೇನಾದರೂ ಮೂಡಿಗೆರೆಗೆ ಹೋದರೆ ಫರ್ನಾಂಡಿಸ್ ಅವರ ಸುಮೋದಲ್ಲಿ ಕುಳಿತುಕೊಳ್ಳಲೇ ಬೇಕು. ಮೂಡಿಗೆರೆ ನಮಗೆಲ್ಲ ಯಾವುದೋ ಊರೆನಿಸದೆ ಆಪ್ತ ಎನಿಸುವುದು ತೇಜಸ್ವಿಯವರ ಪುಸ್ತಕಗಳಿಂದ. ತೇಜಸ್ವಿಯವರನ್ನು ಬಿಟ್ಟರೆ ನನಗೀಗ ಮೂಡಿಗೆರೆ ಎಂದರೆ ನೆನಪಾಗುವುದು ಫರ್ನಾಂಡಿಸ್ ಮಾತ್ರ!

ಫರ್ನಾಂಡಿಸ್ ಅವರು ನಮ್ಮನ್ನೆಲ್ಲ ಭೈರವೇಶ್ವರ ದೇವಸ್ಥಾನದ ಬಳಿ ಇಳಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿ ಹೊರಟು ಹೋದರು. ಅವರ ಮಾತುಗಳು ಮಾತ್ರ ಚಾರಣದುದ್ದಕ್ಕೂ ಚರ್ಚೆಯಲ್ಲಿದ್ದವು. ಇದ್ದುದರಲ್ಲೇ ಸ್ವಚ್ಛತೆಯ ಬಗ್ಗೆ ಕಾಳಜಿಯಿದ್ದವರು ಹಲ್ಲುಜ್ಜುವುದರಲ್ಲಿ ನಿರತವಾಗಿದ್ದರೆ, ನಾವು ಗುಡಾರಗಳಿದ್ದ ಚೀಲಗಳನ್ನು ನಮ್ಮ ಬ್ಯಾಗ್ ಗಳಿಗೆ ಕಟ್ಟುತ್ತಿದ್ದೆವು.

ಮಹೇಶ ಮತ್ತು ಅಶ್ವಲ್ ನಕಾಶೆ ಓದುವುದರಲ್ಲಿ ನಿರತವಾಗಿದ್ದರು. ಅಲ್ಲಿಂದ ಒಂಭತ್ತು ಗುಡ್ಡಕ್ಕೆ ಹೋಗುವ ದಾರಿಯ ಒಗಟನ್ನು ಬಿಡಿಸಲು ಅವರು ಪ್ರಯತ್ನಿಸುತ್ತಿರುವಾಗಲೇ ನಮ್ಮ ಮಾರ್ಗದರ್ಶಕರಾದ ಮಂಜು ಮತ್ತು ಅಭಿ ಅವರ ಪ್ರವೇಶವಾಯಿತು. ಅತ್ತ ದೇವಸ್ಥಾನದ ಭಟ್ಟರು ಶೃತಿ, ಲತಾ ಮತ್ತು ಪುಟ್ಟಿ ಅವರಿಗೆ ಬೆಂಗಳೂರಿನಿಂದ ಬಂದ ಹುಡುಗರು ಮಾರ್ಗದರ್ಶಕರಿಲ್ಲದೆ ಕಾಡಿಗೆ ಹೋಗಿ ದಾರಿ ತಪ್ಪಿದ ಕಥೆ ಹೇಳುತ್ತಿದ್ದರು.

ಕಥೆಯ ಮೊದಲ ತಿರುವು:

ಚಾರಣದ ಮೊದಲ ತಿರುವಾಗಿ ಮಂಜು ಮತ್ತು ಅಭಿ, ಒಂಭತ್ತು ಗುಡ್ಡಕ್ಕೆ ಇಲ್ಲಿಂದ ಹೋಗುವುದು ಸಾಧ್ಯವೇ ಇಲ್ಲವೆಂದೂ, ಜೇನುಕಲ್ಲು ಗುಡ್ಡಕ್ಕೆ ಮಾತ್ರ ನಮ್ಮನ್ನು ಕರೆದೊಯ್ಯಬಹುದೆಂದೂ ಪಟ್ಟು ಹಿಡಿದರು. ಅವರು ಜೇನುಕಲ್ಲು ಗುಡ್ಡ ಬರೀ ಮೂರು ಕಿಲೋ ಮೀಟರ್ ಇದೆ ಎಂದಾಗ ನಾನು ಮತ್ತು ರವಿ “ಬೆಂಗಳೂರಿಂದ ಇಲ್ಲಿಗೆ ಬಂದು ಬರಿ ಮೂರು ಕಿಲೋ ಮೀಟರ್ ಚಾರಣ ಮಾಡಬೇಕಾ?” ಎಂದು ಗೊಣಗುತ್ತಾ ಹೊರಟೆವು. ಆದರೆ ನಮಗೆ ಮುಂದಿನ ನಿಜವಾದ ಸವಾಲುಗಳ ಅರಿವಿರಲಿಲ್ಲ!

ಹೊಸ ವರ್ಷದ ಮೊದಲ ಸೂರ್ಯ ರಶ್ಮಿಗಳು ನೆಲವನ್ನು ತಾಕುತ್ತಿರುವಂತೆ, ಆಕಾಶವನ್ನು ಚುಂಬಿಸುವ ಮಲೆನಾಡ ಶೃಂಗಗಳ ತಪ್ಪಲಲ್ಲಿ ನಮ್ಮ ಚಾರಣ ಪ್ರಾರಂಭವಾಯಿತು. ತಮಾಷೆಯ ಮಾತುಗಳು, ನಗೆಯ ಅಲೆಗಳು ಪರ್ವತಗಳ ಮಡಿಲಲ್ಲಿ ಪ್ರತಿಧ್ವನಿಗಯ್ಯುತ್ತಿರಲು ನಮ್ಮ ಪಯಣ ನಿಧಾನವಾಗಿ ಸಾಗುತ್ತಿತ್ತು. ಜೌಗು ಪ್ರದೇಶವೊಂದನ್ನು ದಾಟುವಾಗ ಹೂಳಿನಲ್ಲಿ ಹೂತುಹೋಗಿ ನಮ್ಮ ಬೂಟುಗಳಿಗೆಲ್ಲ ಕೆಸರಿನ ಅಭಿಷೇಕವೂ ಆಯಿತು. ಒದ್ದೆಯಾದ ಕಾಲುಚೀಲ ಬೂಟುಗಳ ಭಾರದೊಂದಿಗೆ ಭಾರವಾದ ಹೆಜ್ಜೆಗಳನ್ನಿಡುತ್ತಾ ಮೇಲೇರಲು ಪ್ರಾರಂಭಿಸಿದೆವು.

ನನ್ನ ಪ್ರೀತಿಯ, ಅಚ್ಚ ಬಿಳಿಯಾದ ಬೂಟು ತಿರುಗಿ ಬರಲಾಗದ ಬಣ್ಣಕ್ಕೆ ಬದಲಾಗಿತ್ತು. ಕಿತ್ತಳೆ, ಮೋಸಂಬಿ, ಖರ್ಜೂರಗಳ ಸೇವೆ ಧಾರಾಳವಾಗಿ ಸಾಗುತ್ತಿರಲು, ನಾವು ಜೇನುಕಲ್ಲು ಗುಡ್ಡದ ಬುಡವನ್ನು ತಲುಪಿದ್ದೆವು. ಅಷ್ಟೊತ್ತಿಗಾಗಲೇ ಎಲ್ಲರಿಗೂ ಸುಸ್ತು ಹೊಡೆದಿತ್ತು. ಆವಾಗಲೇ ನಮಗೆ ಮೂರು ಕಿಲೋ ಮೀಟರ್ ಬಗ್ಗೆ ಸಂಶಯ ಶುರುವಾಗಿದ್ದು 🙂 ನಾನು ಅಭಿಯನ್ನು ಕೇಳಿದರೆ ಮೂರು ಕಿಲೋ ಮೀಟರ್ ಸುಳ್ಳನ್ನು ಹೇಳಿಲ್ಲವೆಂದರೆ, ಗುಡ್ಡದ ಎತ್ತರವನ್ನು ನೋಡಿ ಬೆಂಗಳೂರಿನಿಂದ ಬಂದವರು ಚಾರಣವನ್ನು ಪ್ರಾರಂಭಿಸುವುದೇ ಇಲ್ಲವೆಂದ!

ಅಶ್ವಲ್, ನಾನು ಮತ್ತು ಮಹೇಶ ಜೇನುಕಲ್ಲು ಗುಡ್ಡದ ತುದಿಯೆಡೆಗೆ ಹತ್ತಲು ಪ್ರಾರಂಭಿಸಿದೆವು. ಆವಾಗಲೇ ನಮಗೆ ಅದೆಷ್ಟು ಕಡಿದಾದ ಪರ್ವತ ಎಂಬ ಅರಿವಾಗಿದ್ದು. ಕೈ ಕಾಲುಗಳನ್ನೆಲ್ಲ ಬಳಸಿ ತುದಿಯನ್ನು ತಲುಪಿದಾಗ ಪ್ರಪಂಚವನ್ನೇ ಗೆದ್ದಂಥ ಭಾವ! ಒಬ್ಬೊಬ್ಬರಾಗಿ ತುದಿಯನ್ನು ತಲುಪಿ ಕೇಕೆ ಹಾಕಿದ್ದಾಯಿತು.

ಎಲ್ಲಿ ನೋಡಿದರಲ್ಲಿ ಹಸಿರು, ಮಂಜನ್ನು ಹೊತ್ತು ತರುವ ತಂಗಾಳಿ, ಮರು ಕ್ಷಣದಲ್ಲೇ ಸೂರ್ಯನ ಉರಿ ಬಿಸಿಲು. ಯಾವುದೋ ಬೇರೆಯೇ ಲೋಕದಲ್ಲಿರುವಂಥ ಅನುಭವ. ಪ್ರಕೃತಿಯ ಸೌಂದರ್ಯದ ಮುಂದೆ ಮನಸ್ಸು ಮೂಕವಾಗುತ್ತದೆ. ಅಶ್ವಲ್ ಮತ್ತು ಮಹೇಶ ನಕಾಶೆ ತೆರೆದು ನಾವೆಲ್ಲಿದ್ದೇವೆ ಎಂದು ಹುಡುಕುವ ವ್ಯರ್ಥ ಪ್ರಯತ್ನದಲ್ಲಿದ್ದರೆ, ನಾನು ನಿಸರ್ಗ ಸಿರಿಯ ಭವ್ಯತೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ವ್ಯರ್ಥ ಪ್ರಯತ್ನದಲ್ಲಿದ್ದೆ.

ಎರಡನೇ ತಿರುವು: ಸ್ಚಲ್ಪ ವಿಶ್ರಾಂತಿ ಪಡೆದು, ವಾಪಸ್ಸು ಇಳಿಯೋಣವೆಂದು ಕುಳಿತಲ್ಲಿಂದ ಎದ್ದೆವು. ಮಂಜು “ಇಲ್ಲಿಂದ ಕೆಳಗಿಳಿಯಬೇಕು” ಎಂದು ತೋರಿಸಿದಾಗ, ಎಲ್ಲರ ಕೈ ಕಾಲುಗಳು ನಡುಗುತ್ತಿದ್ದವು! ಆಳವಾದ ಪ್ರಪಾತಕ್ಕೆ ಮುಖ ಮಾಡಿ ನಿಂತಿದ್ದ ಜೇನುಕಲ್ಲು ಗುಡ್ಡದ ಬಹುತೇಕ ಲಂಬವಾದ ಮೇಲ್ಮೈ ಮೇಲಿಂದ ಕೆಳಗಿಳಿಯಬೇಕಿತ್ತು, ಅಲ್ಲಿ ಕಾಲು ದಾರಿ ಕೂಡ ಇರಲಿಲ್ಲ!

ಮುಂದೇನಾಯ್ತು? …ಓದಿ..
[ಚಾರಣ-ಕಥನದ ಮುಂದಿನ ಭಾಗ ಓದಿ..]

Leave a Reply

Your email address will not be published. Required fields are marked *