Front Matter-Kannada Book Dedication Collection | ಕನ್ನಡ ಪುಸ್ತಕಗಳ ಅರ್ಪಣೆಗಳ ಅಸಮಗ್ರ ಸಂಗ್ರಹ

77. ನೆಲ ನಂಬಿ ಬದುಕುತ್ತಾ

ಉತ್ತು, ಬಿತ್ತಿ, ಬೆಳೆ ತೆಗೆದು

‘ಸತೊಂಭತ್ತು’ ಕೋಟೀ ಜೀವರಾಶಿಗಳಿಗೆ

ಅನ್ನದಾತರಾದ

ನಾಡಿನ ಸ್ವಾಭಿಮಾನ ಸಂಸ್ಕೃತಿಯ

ಸಂಕೇತವೆನಿಸಿರುವ ಎಲ್ಲಾ

ರೈತ ಸಮುದಾಯಕ್ಕೆ

ಮತ್ತು

ರೈತ ಸಂಸ್ಕೃತಿ ತತ್ವ, ಸಿದ್ಧಾಂತಗಳ

ನೆಲೆಯಲ್ಲಿ ಬದುಕಿ ಇಲ್ಲವಾದ ನನ್ನ

ಅಪ್ಪನಿಗೆ

ತುಂಬು ಹೃದಯದಿಂದ

-ಗಂಗಡಿಕಾರ ಒಕ್ಕಲಿಗರು

-ಡಾ. ನಲ್ಲೂರು ಪ್ರಸಾದ್


78. ಭಂಗಿಗಳ ಬದುಕುವ ಹಕ್ಕುಗಳನ್ನು ಕಿತ್ತುಕೊಂಡ

ಕ್ರೂರ ವ್ಯವಸ್ಥೆಯ ವಿರುದ್ಧ ಮೈಮೇಲೆ ಮಲವನ್ನು

ಸುರಿದುಕೊಂಡು ಪ್ರತಿಭಟನೆ ಮಾಡಿದ ಹಾವೇರಿ

ಜಿಲ್ಲೆ, ಸವಣೂರಿನ ಭಂಗಿಗಳ ಪ್ರತಿಭಟನೆಯಿಂದ

ಇಡೀ ಮಾನವ ಕುಲವೇ ನಾಚಿಕೆಯಿಂದ

ತಲೆ ತಗ್ಗಿಸುವಂತಾಯಿತು.

ಇಂಥ ಘಟನೆಗಳು ಈ ಭೂಮಿ ಮೇಲೆ ಉಳಿಯದಂತೆ,

ಮುಂದುವರೆಯದಂತೆ

ಶ್ರಮಿಸುವ, ಹೋರಾಟ ಮಾಡುವ ಮಾನವಪ್ರೇಮಿಗಳಿಗೆ

-ಪರಂಪರೆಯ ನಕ್ಷತ್ರಗಳು (ಸಾಂಸ್ಕೃತಿಕ ಕಥನ)

ಸಂಪಾದಕ: ಲಕ್ಷ್ಮಣ್


79. ಹೆಚ್ಚು ಕಮ್ಮಿ ಕಳೆದ ಮೂರು ದಶಕಗಳಿಂದ

ನನ್ನ ಕಷ್ಟದ ದಾರಿಯ ಜೊತೆಗಾರನಾಗಿ

ನಾನು ಏರ ಬಯಸಿದ ಬೆಟ್ಟಗಳ ಮೆಟ್ಟಿಲಾಗಿ

ನನ್ನನ್ನು ಕೈಹಿಡಿದ ಬದುಕಿನ ಬೆರಳುಗಳಾಗಿ

ನಾನು ಪಡೆದ ಪದವಿ, ಪ್ರಶಸ್ತಿಗಳ ಶಿಲ್ಪಿಯಾಗಿ

ನನ್ನೆಲ್ಲಾ ಯಶಸ್ಸುಗಳ ಹಿಂದಿನ ಶ್ರಮದ ಬೆವರಾಗಿ

ಎಲ್ಲಕ್ಕಿಂತ ಹೆಚ್ಚು ಬಾಂಧವ್ಯದ ಬೆನ್ನೆಲುಬಾದ

ಹಾಗೂ ನನ್ನ ನೆಲದ ನಕ್ಷತ್ರಗಳ ಪ್ರೀತಿಯ ಅಂಕಲ್ ಆದ

ಶ್ರೀ ಪ್ರಸಾದ್ ಅವರಿಗೆ

ಈ ಕೃತಿ ಕೃತಜ್ಞತಾಪೂರ್ವಕವಾಗಿ

ಸಮರ್ಪಿತವಾಗಿದೆ.

-ನೆಲದ ನಕ್ಷತ್ರಗಳ ನೆಂಟು (ವೃತ್ತಿ ಕಥಾನಕ)

-ಡಾ. ಶುಭದಾ ಹೆಚ್. ಎಸ್


80. ದಟ್ಸ್‌ಕನ್ನಡ ಡಾಟ್ ಕಾಂನ ಶ್ಯಾಮಸುಂದರ್

ಹಾಗೂ ಸಿಬ್ಬಂದಿ ವರ್ಗಕ್ಕೆ

-ಕಿಲಿಮಂಜಾರೋ (ಪ್ರವಾಸ ಕಥನ)

-ಪ್ರಶಾಂತ್ ಬೀಚಿ


81. ಶ್ರೀರಾಯನಗೌಡರು ಪಾಟೀಲ ತಲ್ಲೂರು

ಅವರ ಪುಣ್ಯಸ್ಮರಣೆಗೆ

-ಕಿತ್ತೂರು ಕಥನ

-ಡಾ. ಚೆನ್ನಕ್ಕ ಪಾವಟೆ


82. ನನ್ನಲ್ಲಿ ಸಾಶಿತ್ಯ-ಸಂಗೀತ-ಕಲೆ

ಅಭಿರುಚಿಗಳನ್ನು ಬೆಳೆಸಿದ

ಅಕ್ಕ ಲಲಿತ

ಭಾವ ವೈ.ಕೆ ಪುಟ್ಟಸೋಮೇಗೌಡ (ಬಿ.ಎ.ಎಸ್)

ಅಧ್ಯಕ್ಷರು, ಕರ್ನಾಟಕ ಲೋಕಸೇವಾ ಆಯೋಗ

ಅವರಿಗೆ ಪ್ರೀತಿ ಗೌರವಗಳೊಂದಿಗೆ

ಈ ಕೃತಿಯನ್ನು ಅರ್ಪಿಸಿದ್ದೇನೆ.

-ಹಿಮಾಲಯ ಸಂಚಾರ (ಪ್ರವಾಸ ಕಥನ)

-ಹೆಚ್. ಆರ್ ಕೇಶವಮೂರ್ತಿ


83. ಕನ್ನಡ ಸಾಹಿತ್ಯ ಲೋಕಕ್ಕೆ ಈ ಕೃತಿ ಅರ್ಪಿತ

-ಕನ್ನಡ ಸಾಹಿತಿಗಳ ಮಾಹಿತಿ

-ಸಂಕಲನ: ನೀಲಾ ಪಾಟೀಲ


84. ಕನ್ನಡದ ಆಸ್ತಿ ನೀವು ‘ಹಿರಿಯಣ್ಣ’ ಮಾಸ್ತಿ.

ಸನ್ನಡತೆ, ಸಜ್ಜನಿಕೆಗಳ ಸಾಕಾರಮೂರ್ತಿ.

ನನ್ನ ಮೈದಡವಿ ಹರಸಿದಿರಿ ‘ಯಶ ನಿನ್ನದಾಗಲೆಂದು’

ನಿಮ್ಮ ಮೊದಲ ಚಿತ್ರವನ್ನು ಕಂಡು

ಹೆಮ್ಮನದಿ ಮನದುಂಬಿ ಹೇಳಿದಿರಿ

ನಮ್ಮ ಸಾಹಿತಿಗಳೆಲ್ಲರ ಚಿತ್ರ ರಚಿಸೆಂದು ಅಂದು.

ನಿಮ್ಮಾಶಯ ಅದುವೆ ನನಗಾಣತಿಯಾಗಿ

ಒಮ್ಮನದಿ ಶ್ರಮಿಸಿ ಕಾಲುಶತಕಾವಧಿಯಲ್ಲಿ

ಸುಮ್ಮಾನದಿಂದಲೀ ಗ್ರಂಥ ನಿಮಗರ್ಪಿಸಿಹೆನಿಂದು

-ಚುಕ್ಕಿ ಚಿತ್ರಗಳಲ್ಲಿ ಶತ ಸಾಹಿತ್ಯ ಪ್ರತಿಭೆ

-ಮೋಹನ್ ವರ್ಣೇಕರ್


85. ಮಧ್ಯ ಕರ್ನಾಟಕದ

ಕಲೆ, ಸಾಹಿತ್ಯ, ಸಂಗೀತದ

ಜೀವನಾಡಿಗಳಾದ

ಹೋರಾಟ ಕಲಾವಿದರಿಗೆ

-ಮಧ್ಯ ಕರ್ನಾಟಕದ ಜಾನಪದ ಐಸಿರಿ

-ಸಂಪಾದನೆ: ಇಂದಿರಾ ಕೃಷ್ಣಪ್ಪ


86. ನಮ್ಮ ತಂದೆ

ಶಿವರಾಮ ಕಾರಂತ

ಮತ್ತು

ತಾಯಿ ಲೀಲಾ ಕಾರಂತ

ಅವರ ಅಮರ ನೆನಪಿಗೆ

-ಕಾರಂತರ ಸುಳಿಯಲ್ಲಿ

-ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾರಾವ್ (ಅನುವಾದ: ವಿಶ್ವೇಶ್ವರ ಭಟ್)


87. ವೇದಾಂತ ತತ್ವಜ್ಞಾನವನ್ನು ಕುರಿತ

“ಗೋವಿಂದ ಭಾಷ್ಯ” ವ್ಯಾಖ್ಯಾನವನ್ನು ಅಷ್ಟು ಸೊಗಸಾಗಿ ನಿರೂಪಿಸಿದ ಶ್ರೀಲ ಬಲದೇವ ವಿದ್ಯಾಭೂಷಣ ಅವರಿಗೆ ಅರ್ಪಿತ

-ಭಗವದ್ಗೀತಾ ಯಥಾರೂಪ

-ಅನುವಾದ: ಪ್ರೊ ಎಲ್ ಎಸ್ ಶೇಷಗಿರಿರಾವ್


88. ವಿಶ್ವ ವಿಖ್ಯಾತ ವಿದ್ವಾಂಸರು, ಶ್ರೇಷ್ಠ ಸಂಶೋಧಕರು, ಪ್ರಾಚ್ಯ ವಿದ್ಯಾವಿಶಾರದರು ಭಾರತೀಯ ಜ್ಞಾನಪೀಠ ಸಾಹಿತ್ಯಿಕ ಬಹುಮಾನದ ಬೃಹದ್ ನಿಧಿಯ ನಿರ್ಮಾಣಕ್ಕೆ ಪ್ರೇರಕರು ಶ್ರವಣಬೆಳಗೊಳದಲ್ಲಿ ಜರುಗಿದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಂತ ಸದೃಶ ಪವಿತ್ರಾತ್ಮರು ಅದ

ಡಾ. ಆದಿನಾಥ ನೇಮಿನಾಥ ಉಪಾಧ್ಯೆ (ಎಂ.ಎ.ಡಿ. ಲಿಟ್)

ಅವರ ದಿವ್ಯಸ್ಮೃತಿಗೆ

-ತೀರ್ಥಂಕರ ಮಹಾವೀರ

-ಮಿರ್ಜಿ ಅಣ್ಣಾರಾಯ


89. ಕನ್ನಡದಲ್ಲಿ ದೇವರ ಪೂಜೆಯನ್ನು ನಡೆಸುವುದರ

ಆದ್ಯ ಪ್ರವರ್ತಕರೂ, ‘ಕನ್ನಡದ ಪೂಜಾರಿ’

ಎಂಬ ಅನ್ವರ್ಥಕ ಹೆಸರಿನಿಂದ

ಕನ್ನಡನಾಡಿನ ಉದ್ದಗಲ ಪ್ರಸಿದ್ಧರೂ,

ನನ್ನ ಆಪ್ತಮಿತ್ರರೂ ಆದ

ಶ್ರೀ ಹಿರೇಮಗಳೂರು ಕಣ್ಣನ್

ಅವರಿಗೆ ಗೌರವಪೂರ್ವಕವಾಗಿ ಈ ಗ್ರಂಥವನ್ನು ಸಮರ್ಪಿಸುತ್ತಿದ್ದೇನೆ.

-ಕನ್ನಡದಲ್ಲಿ ಶ್ರೀ ಸತ್ಯನಾರಾಯಣ ಪೂಜೆ

-ಶಿಕಾರಿಪುರ ಹರಿಹರೇಶ್ವರ


90. ದಿ. ಶಿಂಗಾರಮ್ಮ ಮತ್ತು ರಾಮಸ್ವಾಮಿ ಐಯ್ಯಂಗಾರ್ ಅವರಿಗೆ ಸಮರ್ಪಣೆ

-ಶ್ರೀರಂಗ ರಂಗನಾಥಸ್ವಾಮಿ ವೈಭವ

-ಸಂಗ್ರಹ: ಜಿ. ಲಕ್ಷ್ಮೀನರಸಿಂಹನ್


91. ನನಗೆ ತುಂಬ ಮಮತೆ ಮತ್ತು ಮಾರ್ಗದರ್ಶನವನ್ನು ನೀಡಿದ

ಕಂಚಿಯ ಪರಮಾಚಾರ್ಯ

ಶ್ರೀ ಚಂದ್ರಶೇಖರೇಂದ್ರಸರಸ್ವತಿ ಸ್ವಾಮಿಗಳ

ಸವಿ ಸ್ಮರಣೆಗೆ ಸಮರ್ಪಿತ

-ಕಂಚಿಯ ಪರಮಾಚಾರ್ಯರು

-ಎಂ.ವೈ ಘೋರ್ಪಡೆ, ಅನುವಾದ:ಎಸ್. ಆರ್ ರೋಹಿಡೇಕರ್


92. ಈ ಕೃತಿಯನ್ನು ನನ್ನ ವೈದ್ಯಕೀಯ ಆತ್ಮೀಯ ಮಿತ್ರರಾದ ಡಾ. ಕೆ.ಕೆ ಪ್ರಸಾದ್

ಅವರಿಗೆ ಅತ್ಯಂತ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇನೆ.

-ನಿಸರ್ಗ ಚಿಕಿತ್ಸೆ

-ಡಾ. ವಿ.ಎನ್ ಮೂರ್ತಿ


93. ಮೊತ್ತ ಮೊದಲ ಬಾರಿಗೆ ಗಣಕಗಳನ್ನು ಪರಿಚಯಿಸಿ

ಅವುಗಳ ಬಗ್ಗೆ ಆಸಕ್ತಿ ಮೂಡಿಸಿದ ನನ್ನ ಮೊದಲ

ಕಂಪ್ಯೂಟರ್ ಮೇಷ್ಟ್ರು ಶ್ರೀ ಬಿ ಎಸ್ ವಿಶ್ವನಾಥ ಅವರಿಗೆ

ಈ ಪುಸ್ತಕವನ್ನು ಅರ್ಪಿಸುತ್ತಿದ್ದೇನೆ

-ವೆಬ್ ವಿಹಾರ

-ಟಿ.ಜಿ ಶ್ರೀನಿಧಿ


94. ಒಂದಕ್ಷರ ಓದದೇ,

ಬದುಕಿನ ನೈಜಪಾಠ ಹೇಳಿಕೊಟ್ಟು,

ಉನ್ನತ ಶಿಕ್ಷಣ ಕಲಿಯಲು ಅವಕಾಶ

ಕಲಿಪಿಸಿಕೊಟ್ಟ ಅಮ್ಮ ಮತ್ತು ಅಪ್ಪಯ್ಯನಿಗೆ

-ಬಫರ್ ಜೋನ್ ಇದು ಯಾರ ಆವಾಸ? (ಕಾದಂಬರಿ)

-ರತ್ನಾಕರ ಗಡಿಗೇಶ್ವರ


95. ರೆವರೆಂಡ್ ಫಾದರ್ ಆಸ್ಟಿನ್ ಡಿ’ಸೋಜಾ ಅವರಿಗೆ

-ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು (ಅನುಭವ ಕಥನ)

-ಶಿವರಾಂ ಪೈಲೂರು


96. ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ

ಅಪಘಾತದಲ್ಲಿ ಅಸುನೀಗಿ

ಅಸ್ತೂ

ಅಂದ ನನ್ನ ‘ಅಪ್ಪ’

ಅಡ್ವೊಕೇಟ್

ಬಿ.ಕೆ ಸುಬ್ಬರಾಯರ

ಆತ್ಮಕ್ಕೆ

ಅಶ್ರುಗಳೊಡನೆ

ಅರ್ಪಣೆ

-ಕನ್ನಡಕ್ಕೊಬ್ಬನೇ ಕೈಲಾಸಂ

-ಬಿ. ಎಸ್ ಕೇಶವರಾವ್


97. ವಿಜಯ್ ಎಂಬ ಅದ್ಭುತ ಪ್ರತಿಭೆಯನ್ನು

ನನಗೆ ಪರಿಚಯಿಸಿದ ಹಿನ್ನೆಲೆ ಗಾಯಕಿ, ನಟಿ, ಸಂಗಾತಿ ಶರಣ್ಯಳಿಗೆ…

-ಅನಂತವಾಗಿರು (ಸಂಚಾರಿ ವಿಜಯ್ ಜೀವನ ಕಥನ)

-ಶರಣು ಹುಲ್ಲೂರು


98. ನನ್ನ ಎಲ್ಲ ತಿಕ್ಕಲುತನವನ್ನು ಸಹಿಸಿಕೊಂಡು,

ಕಳೆದ 25 ವರ್ಷಗಳಿಂದ ಬಾಳಸಂಗಾತಿಯಾಗಿ

ಕಾಪಾಡುತ್ತಿರುವ ‘ಅಮ್ಮ’ನಂಥಾ ಅಪರಂಜಿ ಗೆಳತಿ

ಗಾಯಿತ್ರಿಗೆ…

-ಗುರಿ ಹೆಗ್ಗುರಿ ಪಾತಾಳದಿಂದ ಆಕಾಶಕ್ಕೆ

-ಗಣೇಶ್ ಕಾಸರಗೋಡು


99. ನನ್ನ ಏಳಿಗೆಗೆ ಸರ್ವ ರೀತಿಯಲ್ಲೂ ಉತ್ತೇಜಿಸಿ

ನನ್ನನ್ನು ಈ ಹಂತಕ್ಕೆ ತರಲು ಕಾರಣರಾದ

ಪೂಜ್ಯ ಮಾತಾಪಿತೃಗಳಿಗೆ

-ಸಾರ್ಥ-ಕತೆ (ಆತ್ಮ ಕಥನ)

-ಎಂ.ಎ ಜಯರಾಮ್ ರಾವ್


100. ಜೀವದ ಜೊತೆಗೆ ತಿಳುವಳಿಕೆ ನೀಡಿ

ಒಬ್ಬ ಮನುಷ್ಯನನ್ನಾಗಿ ಮಾಡಿರುವ

ತಾಯಿ ಸುಲೋಚನ ಹಾಗೂ ತಂದೆ ಚಿಕ್ಕಣ್ಣ ದೇವರು

ವಿದ್ಯೆಯ ಜೊತೆಗೆ ಬುದ್ಧಿ ಹೇಳಿ

ಪ್ರಗತಿಯ ದಾರಿ ತೋರಿಸಿದ

ಚಿಕ್ಕಮ್ಮ ಪ್ರೇಮ ಹಾಗೂ ಚಿಕ್ಕಪ್ಪ ಷಡಾಕ್ಷರಿಯವರಿಗೆ

-ಲೇರಿಯೊಂಕ

-ಹೆನ್ರಿ ಆರ್ ಓಲೆ ಕುಲೆಟ್(ಅನುವಾದ: ಪ್ರಶಾಂಚ್ ಬೀಚಿ)


101. ಅಮ್ಮ, ಅಯ್ಯ ನಿಮ್ಮ ಆಶೀರ್ವಾದದ ಬಲವೇ ನಮಗೆಲ್ಲಾ ಶ್ರೀರಕ್ಷೆ

ನಮ್ಮ ಪೂಜ್ಯ ಮಾತಾಪಿತರ ಚರಣ ಸ್ಮರಣೆಯೊಂದಿಗೆ ಈ ಕಿರು ಕಾಣಿಕೆ

-ಅಯುರ್ವೇದ ನಿತ್ಯ ಜೀವನ ಆರೋಗ್ಯ ಸೂತ್ರಗಳು

-ಡಾ. ರಂಗೇಶ್ ಪರಮೇಶ್ ಆರ್

-ಡಾ ಜಯಪ್ರಕಾಶ್ ನಾರಾಯಣ್


102. ನನ್ನ ವಿದ್ಯಾಗುರುಗಳೂ,

ತಮ್ಮ ವಿದ್ವತ್ತು ಪ್ರತಿಭೆಗಳಿಂದ

ಸದ್ದುಗದ್ದಲವಿಲ್ಲದೆ ಕನ್ನಡ ಸಾರಸ್ವತ

ಸಂಪತ್ತನ್ನು ಹೆಚ್ಚಿಸಿರುವವರೂ,

ಮೈಸೂರು ವಿಶ್ವವಿದ್ಯಾಲಯದ

ಇಂಗ್ಲೀಷ್-ಕನ್ನಡ ನಿಘಂಟಿನ

ಪ್ರಧಾನ ಸಂಪಾದಕರೂ ಆದ

ಪ್ರೊ. ಎಂ ರಾಯರಾಯರಿಗೆ

ಭಕ್ತಿಯಿಂದ

-ಖಲೀಲ್ ಗಿಬ್ರಾನ್

-ಪ್ರಭುಶಂಕರ


103. ಮಾತೃ ಸಮಾನರಾದ ನನ್ನ ಅತ್ತೆ

ದಿವಂಗತ ಮರಿಯಮ್ಮ ಹಜ್ಜುಮ್ಮ

ಹಾಗೂ

ನನ್ನ ಮಾವನವರಾದ

ದಿವಂಗತ ಹಾಜಿ ಎಂ. ಮೊ‍‍‍ಐದೀನಬ್ಬ

ಇವರಿಗೆ ಗೌರವಾದರಗಳೊಡನೆ

-ಹೊತ್ತು ಕಂತುವ ಮುನ್ನ

-ನಾಡೋಜ ಡಾ. ಸಾರಾ ಅಬೂಬಕ್ಕರ್


104. ವಿಜಯ ಕರ್ನಾಟಕದಲ್ಲಿ

ಪ್ರಕಟವಾದ

ಬರಹಗಳನ್ನು

ಓದಿ ಮೆಚ್ಚಿದ

ಎಲ್ಲ ಓದುಗರಿಗೆ

ಈ ಪುಸ್ತಕ ಅರ್ಪಿತ

-ಅವಕಾಶ ಅಪಾರ

-ಟಿ. ಜಿ ಶ್ರೀನಿಧಿ


105. ಯುವ ಮನಸುಗಳನ್ನು ಬಡಿದೆಬ್ಬಿಸಿದ

ಹೊಸ ಕನಸು ಕಾಣಲು ಪ್ರೇರೇಪಿಸಿದ

ಭಾರತದೆಡೆಗೆ ಮತ್ತೊಮ್ಮೆ ಎಲ್ಲರೂ

ತಿರುಗಿ ನೋಡುವಂತೆ ಮಾಡಿದ

ಎಲ್ಲರ ಪ್ರೀತಿಯ

ದೇಶದ ಹೆಮ್ಮೆಯ

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮೇಷ್ಟ್ರಿಗೆ!

-ಚಂದ್ರಯಾನ

-ಶಿವಪ್ರಸಾದ್ ಟಿ. ಆರ್


106. ಪರಮಪೂಜ್ಯರು ನಮ್ಮ ತೀರ್ಥರೂಪರಾದ

ದಿವಂಗತ ಶ್ರೀ ನರಸಿಂಗರಾವ್ ಇವರ ಸ್ಮರಣಾರ್ಥವಾಗಿ

ಈ ಗ್ರಂಥವನ್ನು ಸಮರ್ಪಿಸಲಾಗಿದೆ

-ಕರಿಗಿರೀಶ ದೇವರಾಯನಪುರ್ಗ

-ಆದ್ಯ ರಾಮಾಚಾರ್ಯ


107. ಒಪ್ಪಪುಟ್ಟಿ ಪಲಯಲೆಕ ತೂವೊಂದು

ಮೋಕೆದ ಪೇರ ಕಡಲ್ ಡ್ ಮೀಪಾದ್

ದೇವೆರೆ ಪಾದ ಸೇರಿನ

ತಿಂಗಳೆ ರವೀಂದ್ರ ಹೆಗ್ಗಡ್ರೆನ

ಅಳಿದಾಂತಿ ನೆನೆಪುಗು

ಈ ಕಬಿತೊ ಒಪ್ಯಾವೆ

-ಪೊಡುಂಬ ತಿಂಮನ ಕಗ್ಗ

-ಡಿವಿಜಿ, ಅನುವಾದ: ಬಾಲಕೃಷ್ಣ ಶೆಟ್ಟಿ ಪೊಳಲಿ


108. ಶ್ರೀ ಡಬ್ಲ್ಯೂ. ಎಚ್. ಹನುಮಂತಪ್ಪ

ಇವರ ಸವಿನೆನಪಿಗಾಗಿ

-ವೇದ ವಾಙ್ಮಯ

ಮತ್ತು

ಉಪನಿಷತ್ತುಗಳು

-ಪ್ರೊ. ಸಾ.ಕೃ. ರಾಮಚಂದ್ರ ರಾವ್


109. ನನ್ನನ್ನು ಅತ್ಯಂತ ಸ್ನೇಹದಿಂದ ಕಾಣುತ್ತ

ಪ್ರೀತಿಯಿಂದ ಪ್ರೊತ್ಸಾಹಿಸುತ್ತ

ಅಭಿಮಾನದಿಂದ ಆದರಿಸಿದ

ಡಾ. ನಿರ್ಮಲಾ ದೇವಿ ಅವರಿಗೆ

-ಅಂತಃಕರಣ

-ಬಿ.ಎಸ್ ಕೇಶವರಾವ್


110. ಬದುಕಲ್ಲಿ ಕಂಡ ಬೆಳಕನ್ನು

ಅಕ್ಷರಕ್ಕಿಳಿಸಿ ಹಂಚಿಕೊಳ್ಳಲು

ಪ್ರೇರೇಪಿಸಿ, ಪ್ರೋತ್ಸಾಹಿಸಿದ

ಪತ್ರಕರ್ತ ಬಂಧುಗಳಿಗೆ

ಮತ್ತು

ಸನ್ಮಿತ್ರರಿಗೆ

-ನೋವು ನೀಗುವ ಕಾಯಕದಲ್ಲಿ ಕಂಡ ಬದುಕು ಬೆಳಕು

-ಡಾ. ಬಿ.ಟಿ ರುದ್ರೇಶ್


111. ಬೆಳವಾಡಿ ಗ್ರಾಮದ ದಿವಂಗತ ಹೆಚ್. ಎನ್. ತಿಪ್ಪೇಸ್ವಾಮಿ ಅವರಿಗೆ…

-ವೈದ್ಯನ ಹತ್ತು ಮುಖಗಳು

-ಡಾ. ಬಿ.ಟಿ ರುದ್ರೇಶ್


112. ಮನುಷ್ಯನನ್ನು ಕಾಲವು ಎಷ್ಟು ತರದಲ್ಲಿ ಕಾಡುತ್ತದೋ

ಎಷ್ಟು ತರದಲ್ಲಿ ಅವನನ್ನು ಪೀಡಿಸುತ್ತದೋ

ಮನಸ್ಸಿನ ಮೇಲೆ ಎಷ್ಟು ಅಧಿಪತ್ಯವನ್ನು ನಾನು ಸಂಪಾದಿಸುತ್ತಿದ್ದೆನೋ

ಆ ಎಲ್ಲಾ ಸ್ಥಿತಿಯನ್ನು ನಿವೀರ್ಯ ಮಾಡಲು

ನನ್ನನ್ನು ಘಟನೆ-ಸಂಘಟನೆಗಳ ಮಧ್ಯೆ ಕಾಲವು ನುಚ್ಚುನೂರು ಮಾಡುತ್ತಿತ್ತು

ಶಕ್ತ-ಅಶಕ್ತ…ಧರ್ಮ..ಅಧರ್ಮ

ಸತ್ಯ-ಅಸತ್ಯ…ಜಯ..ಅಪಜಯ

ಕಷ್ಟ-ಸುಖ..ಮಾನ–ಅವಮಾನ

ಜನನ-ಮರಣ ಎನ್ನುವ ದ್ವಂದ್ವಗಳ ಮಧ್ಯೆ ಜರುಗುವ ಸಂಘರ್ಷಣೆಯಲ್ಲಿ ಸಿಕ್ಕಿ ನುಚ್ಚು ನೂರಾದುದೇ

ನನ್ನ ಜೀವನ

ಇಂತಹ ಅದೃಷ್ಟಹೀನನ್ನು ಹಡೆದು, ಹೊಡೆದು, ಬಡಿದು ಒಂದು ಆಕೃತಿಯನ್ನಾಗಿ ಮಾಡಿ ನನಗೆ ವಿದ್ಯೆ ಕಲಿಸಿ, ನಾಲ್ಕಕ್ಷರ ಬರೆವಂತೆ ತಿದ್ದಿ ತೀಡಿ ಪ್ರೋತ್ಸಾಹಿಸಿದ ನನ್ನ ಗುರುಗಳೂ, ಪೂಜನೀಯರೂ, ನನ್ನ ಸ್ವರೂಪೋದ್ಧಾರಕರೂ ಆದ ನನ್ನ ದಿವಂಗತ ತಂದೆ ಗುರುರಾಜಪ್ರಿಯ ಇತ್ಯಾದ್ಯನೇಕ ಬಿರುದಾಂಕಿತ ಪಂಡಿತ್ ಹರಪನಹಳ್ಳಿ ಚಿಕ್ಕೇರೂರು ಗೋವಿಂದಾಚಾರ್ಯರ ಚರಣಾವಿಂದ ಗಳಲ್ಲಿ ನನ್ನ ಈ ಕಿರು ಹೊತ್ತಿಗೆಯನ್ನು ಅರ್ಪಿಸುತ್ತೇನೆ

-ಕಿರಣ್ ಬೇಡಿಯವರ ಆತ್ಮಕಥನ I dare ನನ್ನ ಸಾಹಸ

-ಪರ್ ಮೇಷ್ ಧಂಗ್ ವಾಲ್, ಕನ್ನಡಕ್ಕೆ: ಚಿಕ್ಕೇರೂರು ಧೀರೇಂದ್ರಾಚಾರ್ಯ


113. ಧಾರವಾಡ, ೧೯೭೩.

ಆಯೀ (ನನ್ನ ತಾಯಿ), ಬಾಪ್ಪಾ (ತಂದೆ) ಹಾಗೂ ನಾನು ಊಟ ಮಾಡುತ್ತಿದ್ದೆವು. ನನ್ನ ಚಿತ್ರ ‘ವಂಶವೃಕ್ಷ’ ಆಗಲೇ ತುಂಬ ಯಶಸ್ವಿಯಾಗಿ ಓಡಿ ಹಲವಾರು ಬಹುಮಾನಗಳನ್ನು ಗಳಿಸಿತ್ತು. ‘ಕಾಡು’ ಚಿತ್ರ ಮುಗಿಯುತ್ತ ಬಂದಿತ್ತು. ನಾನು ಪುಣೆಯ ಫಿಲ್ಮ್ ಹಾಗೂ ಟೆಲಿವಿಜನ್ ಸಂಸ್ಥಾನಕ್ಕೆ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಒಟ್ಟು ವಾತಾವರಣ ಆತ್ಮಾಭಿನಂದನೆಯಿಂದ ಬೀಗುತ್ತಿತ್ತು.

ಒಮ್ಮೆಲೆ ಆಯೀ ಬಾಪ್ಪಾನತ್ತ ನೋಡಿ, ‘ಮತ್ತು ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!’ ಎಂದಳು.

ಈ ವಿಧಾನ ಅನಪೇಕ್ಷಿತವಾಗಿ ಬಂದರೂ ಬಾಪ್ಪಾಗೆ ತಕ್ಷಣ ಅದರ ಮೊನೆ ಚುಚ್ಚಿತು. ಮುಖ ಕೆಂಪೇರಿ ‘ಆಂ…ಹೂಂ…ನಿನ್ನ ಐಡಿಯಾ – ನನ್ನದಲ್ಲ. ಈಗ ಯಾಕೆ ಅದೆಲ್ಲ?’ ಎಂದು ಊಟದ ತಟ್ಟೆಯಲ್ಲಿ ಮುಖ ಮರೆಮಾಡಿದ.

ನನ್ನ ಕುತೂಹಲ ಕೆರಳಿತು. ಕೆದಕಿ ಕೇಳಿದೆ. ಆಗ ಆಯೀ ಹೇಳಿದಳು.

‘ನೀನು ಹೊಟ್ಟೆಯಲ್ಲಿದ್ದಾಗ, ನನಗೆ ಇನ್ನು ಮಕ್ಕಳು ಸಾಕು ಅನಿಸಿತು. ಮೂರು ಮಕ್ಕಳಿದ್ದಾರಲ್ಲ ಇನ್ನೂ ಯಾಕೆ? ಎಂದೆ. ಅದಕ್ಕಾಗಿ ಪುಣೆಯಲ್ಲಿಯ ಡಾ. ಮಧುಮಾಲತಿ ಗುಣೆ ಎಂಬ ಡಾಕ್ಟರ ಕ್ಲಿನಿಕ್ಕಿಗೆ ಹೋದೆವು’

‘ಮುಂದೆ ?’

‘ಆಕೆ ಬರತೇನೆ ಎಂದವಳು ಬರಲೇ ಇಲ್ಲ, ಸುಮಾರು ಒಂದು ತಾಸು ಹಾದಿ ಕಾಯ್ದು ಬೇಸತ್ತು ಬಂದು ಬಿಟ್ಟೆವು’

‘ಆಮೇಲೆ ?’

‘ಆಮೇಲೇನು? ಹೊರಳಿ ಆ ಕಡೆಗೆ ಹೋಗಲೇ ಇಲ್ಲ’

ನಾನು ಗರ ಬಡಿದವನಂತಾದೆ. ನನಗಾಐದು. ಆದರೂ ಮೂವತ್ತೈದು, ಆದರೂ ನಾನಿಲ್ಲದೆ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ನಾನು ಮಂಕಾಗಿ ಕೂತೆ. ನಾನಿಲ್ಲದ್ದು ಹೇಗಿರತಿತ್ತು? ಕೆಲ ಹೊತ್ತು ಎಲ್ಲಿ ಇದ್ದೇನೆ ಎಂಬುದೆ ಎಚ್ಚರವಿಲ್ಲದೆ ಆ ಇರವಳಿಯನ್ನೇ ದಿಟ್ಟಿಸುತ್ತ ಕೂತೆ. ಮರುಗಳಿಗೆಗೆ ಇನ್ನೊಂದು ವಿಚಾರ ಹೊಳೆದು ದಿಗ್ಭ್ರಾಂತನಾಗಿ ಕೇಳಿದೆ.

‘ಹಾಗಾದರೆ ತಂಗಿ –ಲೀನಾ –ಆಕೆಯನ್ನು ಹೇಗೆ–?

ಆಯೀ ಅರೆನಾಚುತ್ತ. ‘ಆಯ್ಯೋ ಆ ವರೆಗೆ ನಾವು ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆವು’ ಎಂದು ಖೊಳ್ಳನೆ ನಕ್ಕಳು.

ಬಾಪ್ಪಾ ತಾಟಿನೊಳಗಿಂದ ದೃಷ್ಟಿಯನ್ನೇ ಎತ್ತಿರಲಿಲ್ಲ.

ಅಂದು ಆ ಡಾಕ್ಟರರು ಕೊಟ್ಟ ಮಾತಿಗೆ ಸರಿಯಾಗಿ ಕ್ಲಿನಿಕ್ಕಿಗೆ ಬಂದಿದ್ದರೆ, ಈ ಆತ್ಮ-ಕತೆಗಳು ಮಾತ್ರವಲ್ಲ, ಇದರ ಉತ್ತಮ ಪುರುಷನಾದ ನಾನೇ ಇಲ್ಲಿರುತ್ತಿರಲಿಲ್ಲ.

ಆದ್ದರಿಂದ ಇವೆಲ್ಲವುಗಳ ಅಸ್ತಿತ್ವಕ್ಕೆ ಕಾರಣೀಭೂತಳಾದ ಆ ಡಾ. ಮಧುಮಾಲತಿ ಗುಣೆಯ ನೆನಪಿಗೆ ಈ ಆತ್ಮ-ಕತೆಗಳನ್ನು ಅರ್ಪಿಸಿದ್ದೇನೆ.

-ಆಡಾಡತ ಆಯುಷ್ಯ (ಆತ್ಮ ಕತೆಗಳು)

-ಗಿರೀಶ ಕಾರ್ನಾಡ