Karanam Pavan Prasad’s Grasta- Kannada book review | ಗ್ರಸ್ತ ಪುಸ್ತಕ ವಿಮರ್ಶೆ: ನಿಸ್ತಂತು ಶಕ್ತಿಯ ಜೀವತಂತು

grasta cover page

“ಆ ಆತ್ಮ ಇವರ ಆತ್ಮ ಎಂದು ಹೇಳುವುದೇ ತಪ್ಪು, ಅದೊಂದು ತಪ್ಪು ಕಲ್ಪನೆ ಇರುವುದು ಒಂದೇ ಆತ್ಮ…” ಹೀಗೆ ಕಾದಂಬರಿಯ ಆರಂಭದಲ್ಲೇ ಕಥಾನಕ ಹಾಗೂ ಮುಖ್ಯಪಾತ್ರದ ಪರಿಕಲ್ಪನೆ ಬಗ್ಗೆ ಸ್ಥೂಲವಾಗಿ, ಸೂಕ್ಷ್ಮವಾಗಿ ತಿಳಿಸಲಾಗಿದೆ.

ಕಾದಂಬರಿಯ ಕೊನೆ ಪುಟದಲ್ಲೂ ಇದೇ ವಿಷಯ ಪುನರಾರ್ತನೆಯಾಗುತ್ತದೆ. ಆದರೆ ಇಲ್ಲಿ ಆರಂಭವೇ ಕೊನೆ, ಕೊನೆಯೇ ಮತ್ತೆ ಆರಂಭ. ಈ ನಡುವೆ ನಾಯಕ ಅವಿನಾಶ ಎಂಬ ಪಾತ್ರವು ಸಂಸಾರ ಸಾಗರದಲ್ಲಿ ಮಿಂದೆದ್ದು, ರಾಗ, ದ್ವೇಷ, ಅಹಂಕಾರ, ಅಸಹಾಯಕತೆ, ಸಾಧನೆ, ನಿರ್ಮೋಹ, ನಿರ್ವಾಣ ಸ್ಥಿತಿ ತಲುಪುತ್ತದೆ.

ಇದು ಸಧ್ಯಕ್ಕೆ ಈ ಕಥಾನಕ ಅರ್ಥವಾದ ಬಗೆ, ಕೆಲ ಕಾಲ ಬಿಟ್ಟು ಮತ್ತೆ ಓದಿದಾಗ ಮತ್ತೊಂದು ರೀತಿ ಅರ್ಥ ಗೋಚರಿಸಬಹುದು. ಇದೇ ಇದರ ಹೆಗ್ಗಳಿಕೆ ಎನ್ನಬಹುದು. ಗ್ರಸ್ತದ ಬಗ್ಗೆ ನನ್ನ ಅನಿಸಿಕೆಗಳು, ಆಕ್ಷೇಪಗಳು, ಪ್ರಶ್ನೆಗಳು, ಕುತೂಹಲಗಳನ್ನು ಇಲ್ಲಿ ವಿಸ್ತಾರವಾಗಿ ನೀಡಲು ಪ್ರಯತ್ನಿಸಿದ್ದೇನೆ. ಇನ್ನೊಮ್ಮೆ ಓದಿದಾಗ ಇನ್ನಷ್ಟು ಪ್ರಶ್ನೆಗಳು ಏಳಬಹುದು. ಇದು ವಿಜ್ಞಾನಕ್ಕೂ ಸಂಬಂಧಿಸಿದ ಕೃತಿಯಾದ್ದರಿಂದ ವಿಜ್ಞಾನದ ವಿದ್ಯಾರ್ಥಿಯ ಮೊದಲ ಲಕ್ಷಣವೇ ಎಲ್ಲವನ್ನು ಪ್ರಶ್ನಿಸಿ, ಏಕೆ? ಹೇಗೆ? ಎಂದು ವಿಮರ್ಶಿಸಿ ಆಧಾರಸಹಿತವಾಗಿ ಯಾವುದೇ ವಿಷಯವನ್ನು ಅರ್ಥೈಸಿಕೊಳ್ಳುವುದು.

ಯಾವುದೇ ಕೃತಿಯಾದರೂ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಬೇಕು, ಪ್ರತಿ ಬಾರಿ ಓದಿದಾಗಲೂ ವಿಶೇಷ ಅರ್ಥ ಕೊಡುವ, ಮನಸ್ಸಿಗೆ ಮುದ ನೀಡುವ, ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತೆ ಇದ್ದರೆ ಸಾರ್ಥಕವೆನಿಸುತ್ತದೆ. ಈ ಮಟ್ಟಿಗೆ ಗ್ರಸ್ತ ಯಶಸ್ವಿಯಾಗಲು ಕಥೆಯ ವಿಷಯ ವಸ್ತು ಕಾರಣ ಎನ್ನಬಹುದು.

grasta cover page

ಮುಖಪುಟ ವಿನ್ಯಾಸ:

ಅಂದ ಹಾಗೆ, ಕಾನ್ಕೇವ್ ಮಾಧ್ಯಮ ಸಂಸ್ಥೆಯು ಪ್ರಕಟಿತ ಕೃತಿಗಳ ಪ್ರತಿ ಮುದ್ರಣಕ್ಕೂ ಹೊಸ ಮುಖಪುಟ ವಿನ್ಯಾಸ, ಕಾಗದ ಬಳಕೆ, ಪುಟ ವಿನ್ಯಾಸ, ಲಿಪಿ ಬಗ್ಗೆ ಆಸ್ಥೆ ವಹಿಸುತ್ತಿರುವುದು ಅಭಿನಂದನಾರ್ಹ.

ಗ್ರಸ್ತ -ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ. ಈ ಕಾದಂಬರಿಯನ್ನು ಮೊದಲ ಪ್ರಕಟಣೆಯಲ್ಲೇ ಓದಿದ್ದೆ, ಅಂದಿನ ಮುಖಪುಟ ವಿನ್ಯಾಸ ಅಷ್ಟಾಗಿ ರುಚಿಸಿರಲಿಲ್ಲ. ಪ್ರಸ್ತುತ ನಾಲ್ಕನೇ ಆವೃತ್ತಿಗಾಗಿ ಮದನ್ ಸಿಪಿ ಅವರು ಮಾಡಿರುವ ವಿನ್ಯಾಸ ಅರ್ಥಪೂರ್ಣವಾಗಿದೆ. ‘ಪ್ರವೇಶ’ದಲ್ಲಿ ಬರೆದಿರುವ ವಾಕ್ಯಗಳನ್ನು ಓದಿಕೊಂಡು ವಿನ್ಯಾಸ ನೋಡಿದಾಗ ಬರುವ ಭಾವನೆ, ಕಲ್ಪನೆ, ಅರ್ಥವೇ ಬೇರೆ. ಕಥಾನಕ ಪೂರ್ಣಗೊಳಿಸಿದ ಬಳಿಕ ಮುಖಪುಟ ಗೋಚರಿಸುವ ಬಗೆ ಇನ್ನೊಂದು ರೀತಿ. ವಿಜ್ಞಾನ, ತಂತ್ರಜ್ಞಾನ, ತತ್ತ್ವಜ್ಞಾನ, ವಿದ್ಯುತ್ ಲೋಕದಲ್ಲಿ ವಿಹರಿಸಬೇಕಿರುವುದರಿಂದ ಒಂದಷ್ಟು ದೃಷ್ಟಾಂತ ಸಹಿತ ಚಿತ್ರಗಳು, ಸರ್ಕ್ಯೂಟ್ ಗಳನ್ನು ಅಗತ್ಯವಿದ್ದಷ್ಟು ಬಳಸಬಹುದಾಗಿತ್ತು.

ಅಕ್ಷೇಪ, ಅನಿಸಿಕೆಗಳು:

ಕಥೆ, ಪರಿಕಲ್ಪನೆ, ಪ್ರಾದೇಶಿಕತೆ, ಕಥೆ ಘಟಿಸಿದ ಕಾಲಘಟ್ಟ, ಸಮಕಾಲೀನ ತಂತ್ರಜ್ಞಾನ ಬಳಕೆಯ ಉಲ್ಲೇಖ, ಪರಿಸಮಾಪ್ತಿ ಅಲ್ಲದೆ ತಕ್ಕಮಟ್ಟಿಗೆ ನಿರೂಪಣೆಗೆ ಫುಲ್ ಮಾರ್ಕ್ಸ್ ನೀಡಬಹುದು. ಆದರೆ, ಪಾತ್ರಗಳ ಮಹತ್ವ, ವ್ಯಕ್ತಿತ್ವದಲ್ಲಿನ ಗೊಂದಲ, ಬದಲಾವಣೆ ಬಗ್ಗೆ ಇನ್ನಷ್ಟು ಸ್ಪಷ್ಟತೆ ಕಾಣಿಸಬಹುದಾಗಿತ್ತು. ಪ್ರತಿ ಪಾತ್ರವೂ ಇನ್ನಷ್ಟು ವಿಸ್ತರಿಸಿ ಬೃಹತ್ ಗ್ರಂಥವಾಗಿಸುವ ಬದಲು ಕಾದಂಬರಿಯ ಸೀಮಿತ ಚೌಕಟ್ಟಿನಲ್ಲಿ ಇಡಲಾಗಿದೆ ಎಂದುಕೊಳ್ಳಬಹುದು. ನಾಯಕ ತನ್ನನ್ನು ತಾನು ಅರಿತು ಕಂಡುಕೊಂಡ ಬದಲಾವಣೆಯ ಪ್ರಕ್ರಿಯೆ, ಎಲ್ಲಾ ಪಾತ್ರಗಳಿಗೂ ಸಾಧ್ಯ ಎಂಬುದನ್ನು ವಾಚ್ಯವಾಗಿ, ಸೂಚ್ಯವಾಗಿ ಅಥವಾ ಸನ್ನಿವೇಶದ ಮೂಲಕ ತೋರಿಸಿದ್ದರೆ .. ‘ಪೂರ್ಣಾತ್ ಪೂರ್ಣ ಮದುಚ್ಯುತೇ’ ಎನ್ನಬಹುದಾಗಿತ್ತು.

ಸೆಮಿ ಕಂಡೆಕ್ಟರ್ ಬಗ್ಗೆ ಒಂದು ವಾಕ್ಯನೂ ಇಲ್ಲ ಎಂಬುದು ಸಖೇದಾಶ್ಚರ್ಯಕರ ಸಂಗತಿಯಾಗಿದೆ. ನಿಸ್ತಂತು ವಿದ್ಯುತ್ ಅಸ್ತಿತ್ವ ಹಾಗೂ ದರ್ಶನದ ಬಗ್ಗೆ ತಿಳಿಸುವುದಷ್ಟೇ ಉದ್ದೀಶ್ಯವಾಗಿ, ಗೊತ್ತಿದ್ದು, ಸೆಮಿ ಕಂಡೆಕ್ಟರ್(ಅರೆ ವಾಹಕ)ಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದು ಅರ್ಥೈಸಿಕೊಳ್ಳಬಹುದೇ? ಸಣ್ಣ ಎಲ್‌ಇಡಿಯಿಂದ ಸೂಪರ್ ಕಂಪ್ಯೂಟರ್ ತನಕ ಬಳಕೆಗೆ ಅಗತ್ಯವೆನಿಸಿರುವ ಸೆಮಿಕಂಡೆಕ್ಟರ್ ವಾಹಕ, ಸಂವಾಹಕ, ದತ್ತಾಂಶ ಸಂಸ್ಕರಣ ವ್ಯವಸ್ಥೆ ಹೀಗೆ ಈ ಕಥೆಯಲ್ಲಿ ಬರುವ ವಿದ್ಯುತ್ ನಿರ್ವಾಹಣೆಗೆ ಸಹಕಾರಿ. ಹಲವು ರೂಪದಲ್ಲಿ ಇದ್ದರೂ ಅತ್ಯಾಧುನಿಕ ಉಪಕರಣ ಸೃಷ್ಟಿ ಹಾಗೂ ಸ್ಥಿತಿಗೆ ಅರೆವಾಹಕ ಅಗತ್ಯ.

ವಿದ್ಯುತ್ (ಬ್ರಹ್ಮ ಎಂದು ಕಲ್ಪಿಸಿಕೊಂಡರೆ) ಸೃಷ್ಟಿ ಸಾಧ್ಯವಿಲ್ಲ. ಅದಕ್ಕೆ ಹುಟ್ಟಿಲ್ಲ, ಸಾವಿಲ್ಲ, ನಿಸ್ತಂತು ವಿದ್ಯುತ್ ಎಂಬುದು ಆವಿಷ್ಕಾರವಲ್ಲ ಎಂದು ನಾಯಕ ಹೇಳಿದ್ದನ್ನು ಸ್ಮರಿಸಬಹುದು. ಇಂಥ ಯಾವುದೇ ವಿದ್ಯುತ್ ನಿಯಂತ್ರಣಕ್ಕೆ ಹಾಗೂ ಅತ್ಯಾಧುನಿಕ ಉಪಕರಣ ತಯಾರಿಕೆಗೆ ಅರೆವಾಹಕ ಬೇಕೇ ಬೇಕು.

ಈ ಬಗ್ಗೆ ಪ್ರಶ್ನಿಸಲು ಕಾರಣವೂ ಇದೆ. ಇಲ್ಲಿ ಉಲ್ಲೇಖಿಸಲಾಗಿರುವ ವಿದ್ಯುತ್ ವಾಹನ ಹಾಗೂ ಕಥೆಯ ಅಂತ್ಯದಲ್ಲಿ ರೇಡಿಯಂಟ್ ಎನರ್ಜಿ ರಿಸೀವರ್(ವಿಕಿರಣ ಹಾಗೂ ಹೈಡ್ರಾಲಿಕ್ ಆಂಟೆನಾ ಮೂಲಕ ನಿಸ್ತಂತು ವಿದ್ಯುತ್ ಪ್ರಕಟವಾಗುವ ಪ್ರಯೋಗ ಯಶಸ್ವಿಯಾಗುವುದು (ಈ ಸಂದರ್ಭದಲ್ಲಿ ಅವಿನಾಶ ಪರಮಸತ್ಯವನ್ನು ಕಂಡುಕೊಂಡ ಸ್ಥಿತಿ) ಒಂದು ಹಂತವಾದರೆ, ಮುಂದೇನು ಎಂಬ ಪ್ರಶ್ನೆ ಮೂಡುತ್ತದೆ. ಈ ವಿದ್ಯುತ್ ನಿಯಂತ್ರಣಕ್ಕೆ ಡೇಟಾ ಪ್ರೊಸಿಸಿಂಗ್ ವ್ಯವಸ್ಥೆಗೆ ಸೆಮಿಕಂಡೆಕ್ಟರ್ ಉಪಕರಣಗಳು ಅಗತ್ಯವಲ್ಲವೇ? ಈ ಬಗ್ಗೆ ಮುಂದಿನ ಭಾಗದಲ್ಲಿ ನಿರೀಕ್ಷಿಸಬಹುದೇ? ಎಲ್ಲೆಡೆ ಇರುವ ವಿದ್ಯುತ್ ನಿಯಂತ್ರಣ ಹಾಗೂ ಬಳಕೆ ಬಗ್ಗೆ ವಿಸ್ತೃತ ಸಾಧ್ಯಾಸಾಧ್ಯತೆ ವಿವರ ಕುತೂಹಲಕಾರಿಯಾಗಬಹುದು.

ಹೇಗೆ ಅಪರಂಜಿ ಚಿನ್ನ, ಶುದ್ಧ ವಿದ್ಯುತ್ ಪ್ರಾಪಂಚಿಕ ಬಳಕೆಗೆ ಬರುವುದಿಲ್ಲ. ಹೀಗಾಗಿ, ಇಲ್ಲಿ ಹೇಳಿರುವಂತೆ ದ್ವೈತ ಭಾವದಿಂದ ಅದ್ವೈತ ಭಾವಕ್ಕೆ ತಿರುಗಿ ಮುಕ್ತಿ ಪಡೆಯುವುದೇ ಪರಮ ಗುರಿ ಎಂದೆನಿಸುತ್ತದೆ.

ಆದರೆ, ಪರಮಜ್ಞಾನ ಪ್ರಾಪ್ತಿಯಾದರೂ ಅಂದರೆ ‘ಜೀವೋ ಬ್ರಹ್ಮೈವ ನಪರಃ’ ಎಂಬ ಸತ್ಯ ಕಂಡುಕೊಂಡ ಅವಿನಾಶ, ರೇಖಾಳ ರಹಸ್ಯ ಬಹಿರಂಗ ಮಾಡಿದ ಸಂದರ್ಭದಲ್ಲಿ ಆಡುವ ಮಾತುಗಳ ಬಗ್ಗೆ ಆಕ್ಷೇಪವಿದೆ. ಇಲ್ಲಿ ಎಲ್ಲವೂ ಒಂದೇ ಆದ ಮೇಲೆ ಆಕೆ ಮಾಡಿದ ತಪ್ಪು ದೊಡ್ಡದು, ಘಾತುಕತನ, ಬಲಿ ಪಡೆದೇ ಎಂಬುದರಲ್ಲಿ ಅರ್ಥವಿಲ್ಲ. ಪ್ರತಿ ಘಟನೆ, ಕ್ರಿಯೆ ಹಿಂದೆ ಅರ್ಥ, ಪರಿಣಾಮ ಇರಲೇಬೇಕಲ್ಲ. ಪರಿಣಾಮವಿಲ್ಲದ ಸಂಗತಿಗಳ ಬಗ್ಗೆ ಅವಿನಾಶನ ಗಮನ ಎಂದಿಗೂ ಹಾಯಿಸಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

‘ಬಾಯಿ ಬಿಟ್ಟರೆ ವಿಚಿತ್ರ, ಮೌನವಾಗಿದ್ದರೆ ವಿಕ್ಷಿಪ್ತ’ ಎಂದು ಕ್ಯಾರೆಕ್ಟರ್ ಬಗ್ಗೆ ಹೇಳಿಕೊಂಡಿದ್ದರೂ, ನಾಯಕನಿಗೆ ಕೆಲವೆಡೆ ಅನಗತ್ಯ ಅಸಹನೆ, ಅನುಮಾನದ ಗುಣವನ್ನು ಅಂಟಿಸಿ, ಚಿತ್ರಿಸಿರುವ ಕಾರಣ ತಿಳಿಯಲಿಲ್ಲ, ತಾಯಿಯ ನಡವಳಿಕೆ ಬಗ್ಗೆ ಅನುಮಾನ, ಗೋಪಿನಾಥ್ ಮಗಳ ಕೆಟ್ಟ ನಡವಳಿಕೆ, ರೇಖಾ ಮಾತ್ರ ಪರಮ ಸಮಯ ಸಾಧಕಿ ಎಂದು ನಾಯಕ ಹೇಳುವಾಗಲೆಲ್ಲಾ, ಅಯ್ಯೋ ಇವೆಲ್ಲ ಗುಣಗಳು ಈತನಲ್ಲೂ ಇವೆ ಇವನೇನು ಮಹಾ ಸಾಚಾ ಎನಿಸುತ್ತದೆ. ಒಟ್ಟಾರೆ, ಒಂದು ಒಳ್ಳೆ ಕ್ಯಾರೆಕ್ಟರ್ ಅಥವಾ ಸಹಜ ವ್ಯಕ್ತಿತ್ವ ಇಲ್ಲಿ ಕಾಣಸಿಗುವುದೇ ಇಲ್ಲ. ಆದಾಗ್ಯೂ, ಕೊನೆಯಲ್ಲಿ ಅವಿನಾಶನ ಮೌನ, ಮಾತುಗಳು ಓದುಗರನ್ನು ಆತನನ್ನು ಆದರ್ಶ ರೀತಿಯಲ್ಲಿ ಕಾಣುವಂತೆ ಮಾಡುತ್ತದೆ.

ಜಯಶ್ರೀ ಮನದ ಮಾತು ಕಥೆ

ಆರಂಭದಲ್ಲಿ ಆನಂದತೀರ್ಥರ ಆತ್ಮಹತ್ಯೆ ಕಾರಣದ ಬಗ್ಗೆ ಜಯಶ್ರೀ ಮನದ ಮಾತು ಕಥೆ ಹೇಗೆ ಮುಂದೇ ಸಾಗಲಿದೆ ಎಂಬುದನ್ನು ಸೂಚ್ಯವಾಗಿ ತೋರಿಸುತ್ತದೆ. ತನ್ನ ಮಗಳು ಜಯಶ್ರೀ ಯಾರೋ ಶೂದ್ರನನ್ನು ಮದುವೆಯಾದಳು ಎಂಬ ಕಾರಣಕ್ಕೆ ನೊಂದು ಮಾಧ್ವ ಬ್ರಾಹ್ಮಣ ಆನಂದತೀರ್ಥ ನೇಣಿಗೆ ಕೊರಳೊಡ್ಡಿದ್ದಾರೆ (ಮಗುಟ ಬಳಸಿರುವುದು, ಸಾವಿನಲ್ಲೂ ಆಚಾರ, ಮಡಿ ಬಿಡಲು ಒಪ್ಪದ ಮನಃಸ್ಥಿತಿ ಸೂಚಕ) ಎಂದೆನಿಸಿದರೂ ಜಯಶ್ರೀಗೆ ತನ್ನ ಅಪ್ಪನ ಧೂರ್ತ, ಆಷಾಢಭೂತಿ ನಡವಳಿಕೆಯ ಅರಿವಿರುತ್ತದೆ.

ಕಥಾನಕದಲ್ಲಿ ಮುಂದೆ ಬರುವ ಪ್ರಸಂಗಗಳಲ್ಲಿ ಇದೇ ರೀತಿ ಮೇಲ್ನೋಟಕ್ಕೆ ಹೀಗೆ ಇರಬಹುದು ಎನಿಸಿದರೆ, ಅದು ಬೇರೆಯದ್ದೇ ರೀತಿ ಒಳಾರ್ಥ, ರಹಸ್ಯವನ್ನು ಅಡಗಿಸಿಕೊಂಡಿದೆ ಎಂಬುದನ್ನು ಮನಗಾಣಬಹುದು.

ಮಧ್ಯಮ ವರ್ಗದ ಕುಟುಂಬದ ನಗರ ಜೀವನ, ಬದಲಾಗುತ್ತಿರುವ ಬೆಂಗಳೂರಿನ ಜೊತೆಗೆ ಬದುಕು ಬವಣೆ, ಕಷ್ಟ ನಷ್ಟದ ನಡುವೆ ಭರವಸೆಯೊಂದಿಗೆ ಬದುಕುವ ರೀತಿಯನ್ನು ಜಯಶ್ರೀ ಪಾತ್ರದ ಮೂಲಕ ಕಟ್ಟಿ ಕೊಡಲಾಗಿದೆ. ಇದರ ಜೊತೆಗೆ ಜಾತಿ, ಅಂತರ್ ಧರ್ಮೀಯ ವಿವಾಹದ ಬಗ್ಗೆ ಆಗಾಗ ವ್ಯಾಖ್ಯೆಯೂ ಇದೆ. ಕರ್ಮ ಸಿದ್ಧಾಂತ, ಕಷ್ಟಗಳ ನಡುವೆ ಬದುಕುವ ಬಗೆ(Survive) ಮತ್ತೆ ಮತ್ತೆ ಬೇರೆ ಬೇರೆ ಪಾತ್ರಗಳ ಮೂಲಕ ನಾಯಕನಿಗೆ ಗೋಚರಿಸುತ್ತದೆ.

ನಿರೂಪಣಾ ಶೈಲಿ

ಪ್ರತಿ ಹತ್ತು ಪುಟಕ್ಕೆ ಹೊಸ ಪಾತ್ರ, ಇಲ್ಲವೇ ಹೊಸ ಘಟನೆ ಮೂಲಕ ಕಥೆಯ ಓಘವನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಪ್ರೊ. ಗೋಪಿನಾಥ್ ಪಾತ್ರದ ಮೂಲಕ ಪೋಷಕ ಎಂಬ ವರ್ಗಕ್ಕೆ ಅರ್ಥ ಬರುವಂತೆ ಚಿತ್ರಿಸಲಾಗಿದೆ. ಆದರೆ, ಪ್ರತಿ ಪಾತ್ರಕ್ಕೆ ತನ್ನದೇ ಆದ ಚೌಕಟ್ಟು ಇದ್ದು, ಇದಕ್ಕೆ ನಾಯಕ ಅವಿನಾಶ ಏನೂ ಹೊರತಲ್ಲ. ದಾಕ್ಷಿಣ್ಯದ ಬಗ್ಗೆ ಜಾತಿ, ಮೀಸಲಾತಿಯ ಇತಿಮಿತಿ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ.

ಸಂಸ್ಕೃತ ಶ್ಲೋಕ, ಮಂತ್ರ ಬಳಕೆ ಸೂಕ್ತವೆನಿಸಿದರೂ ಜನ ಸಾಮಾನ್ಯರಿಗೆ ಇದು ಅನ್ಯಗ್ರಹ ಜೀವಿಗಳ ಭಾಷೆಯಂತೆ ತೋರುತ್ತದೆ. ಮಂತ್ರದ ಸಾರಾಂಶವನ್ನು ಕೆಲವೆಡೆ ಸರಳವಾಗಿ ವಿವರಿಸಲಾಗಿದೆ. ಆದರೆ, ಉದಾಹರಣೆಗೆ ‘ತೈತರೀಯ ಭೃಗುವಲ್ಲೀಯ ಅನುವಾಕ’ ಎಂದರೇನು, ‘ದರ್ಶನ’, ‘ಪರಿಷೇಚನ’ ಎಂಬ ಪದಗಳನ್ನು ಮೊದಲ ಬಾರಿಗೆ ಕೇಳುತ್ತಿರುವವರು ಹೇಗೆ ಅರ್ಥೈಸಿಕೊಳ್ಳಬೇಕೋ ಗೊತ್ತಿಲ್ಲ. ಎಲ್ಲವನ್ನು ವಾಚ್ಯವಾಗಿಸುವುದು, ಅತ್ಯಂತ ಸರಳಗೊಳಿಸಿ ತಿಳಿಸಲು ಇದು ಪಠ್ಯವಲ್ಲ, ಕಾದಂಬರಿ ಎಂದು ಲೇಖಕರು/ಪ್ರಕಾಶಕರು ಸಮರ್ಥಿಸಿಕೊಳ್ಳಬಹುದು, ಇರಲಿ. ಇನ್ನು ಪುಟ ೪೯ರಲ್ಲಿ ಗೋಪಿನಾಥರಿಂದ ಶ್ರದ್ಧೆಯ ಬಗ್ಗೆ ಸೂಕ್ತವಾದ ಮಾತುಗಳು ಬರುತ್ತವೆ. ಇಲ್ಲಿ ಶ್ರದ್ಧಾಸೂಕ್ತವನ್ನು ಕೊಟ್ಟಿದ್ದರೆ, ಇನ್ನಷ್ಟು ತೂಕ ಹೆಚ್ಚುತ್ತಿತ್ತು ಎಂಬುದು ನನ್ನ ಅಭಿಪ್ರಾಯ.

ಅವಿನಾಶನ ಕಾಲೇಜು ಅಧ್ಯಾಪಕ ವೃತ್ತಿ, ಪ್ರಾಯೋಗಿಕತೆಗೆ ಒಗ್ಗಿಕೊಳ್ಳದೆ ಪಠ್ಯಕ್ಕೆ ಜೋತುಬಿದ್ದ ವಿದ್ಯಾರ್ಥಿ ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಕೂಡಾ ಮಾತುಗಳಿವೆ. ಗೋಪಿನಾಥರ ಜೊತೆ ತಂತ್ರಜ್ಞಾನ ಕುರಿತಾದ ಚರ್ಚೆ, ರೇಖಾ ಜೊತೆ ಒಡನಾಟ, ಕಾಮದಾಟ, ಅದಿತಿ ಜನನ ರಹಸ್ಯ, ಸುಷ್ಮಾ ಬಗ್ಗೆ ಅವ್ಯಕ್ತ ಮೋಹ, ವಿದೇಶದಲ್ಲಿನ ಪ್ರಾಯೋಗಿಕ ಜ್ಞಾನ, ಭಾರತದಲ್ಲಿನ ಗ್ರಂಥ ಆಧಾರ, ವಿಜ್ಞಾನಿಯಾಗಿ ಭಾಷಣ, ಅಂತಿಮವಾಗಿ ಪ್ರಾಜ್ಞನಾಂ ಬ್ರಹ್ಮ, ಸರ್ವಂ ಖಲ್ವಿದಂ ಬ್ರಹ್ಮ ಎಂಬಂತೆ ಅವಿನಾಶ ಬೆಳಕು ಮೂಡಿಸಿ ದಿಗಂತದೆಡೆಗೆ ನಡೆದರೂ, ಮಿರೋಸ್ಲಾವ್ ಗೆ ಇಮೇಲ್ ಮಾಡುವುದರ ಬಗ್ಗೆ ರೇಖಾಳಿಗೆ ಹೇಳಿದ್ದು, ಕುತೂಹಲ ಹಾಗೂ ಕಥೆ ಮುಂದುವರೆಯಲಿದೆ ಎಂಬಂತೆ ಭಾಸವಾಗುತ್ತದೆ.

ಚರ್ಚೆ, ಅಧ್ಯಯನ ಯೋಗ್ಯ ವಿಷಯಗಳು:

ಶಕ್ತಿ ಉತ್ಪಾದನಾ ಮಾರ್ಗಗಳು, ಭಾರತೀಯ ಗ್ರಂಥ, ವೇದೋಪನಿಷತ್ ಗಳಲ್ಲಿ ಕಾಣ ಸಿಗದ ಪ್ರಯೋಗಶೀಲತೆ, ಪಾಶ್ಚಿಮಾತ್ಯರು ಸಾಧಿಸಿದ ಬಗೆ, ಭಾರತದ ಮೆಟಾ ಫಿಕ್ಸಿಸ್ ಹಾಗೂ ಮೂಲ ವಿಜ್ಞಾನ ನಡುವಿನ ತಿಕ್ಕಾಟದ ಬಗ್ಗೆ ಚರ್ಚೆಯಿದೆ. ಇದರ ಇತಿಮಿತಿಗಳನ್ನು ಅವಿನಾಶನ ಭಾಷಣದಲ್ಲಿ ವಿವರವಾಗಿ ಕಾಣಬಹುದು.

ಇನ್ನು ಕಾದಂಬರಿಯುದ್ದಕ್ಕೂ ಅವಿನಾಶ ಅಲ್ಲದೇ ಉಳಿದ ಪಾತ್ರಧಾರಿಗಳಿಂದ ಅನೇಕ ಉಲ್ಲೇಖಾರ್ಹ ಮಾತುಗಳು ಬಂದಿವೆ. ಇವುಗಳ ಬಗ್ಗೆ ಭಾಷ್ಯ ಬರೆಯಬಹುದು. ವಿಜ್ಞಾನ ಎಂದರೆ ವಿಮರ್ಶನ ಶಕ್ತಿ, ವಿದ್ಯುತ್, ತಂತ್ರಜ್ಞಾನ, ಬ್ರಹ್ಮ, ಆತ್ಮ, ಸ್ಮೃತಿ.. ದ್ವೈತ, ಅದ್ವೈತ, ಶೂನ್ಯ ಸಿದ್ಧಾಂತ, ಸಮಯ, ಹುಟ್ಟು, ಸಾವು, ಸಂಬಂಧ ಹೀಗೆ ವಿಶೇಷಗಳು ಅನೇಕ ಅವುಗಳ ವಿಸ್ತಾರವೂ ಅಗಾಧ. ನಾನು ಟಿಪ್ಪಣಿ ಮಾಡಿಕೊಂಡಂತೆ ಕೆಲ ಸ್ಮರಣೀಯ ವಾಕ್ಯಗಳು ಹೀಗಿವೆ:

  • ಸಮಸ್ಯೆಯ ಸ್ವರೂಪಗಳು ಬದಲಾಗದೇ ಅದೇ ಸಮಸ್ಯೆಗಳು ನಿರಂತರವಾಗಿದ್ದರೆ ಮನುಷ್ಯ ಕೊಳೆಯುತ್ತಿದ್ದಾನೆ ಎಂದರ್ಥ. ಹೊಸ ಸಮಸ್ಯೆಗಳನ್ನು ಒಡ್ಡಿಕೊಳ್ಳುತ್ತಾ ಭೇದಿಸುತ್ತಾ ಸಾಗುವುದೇ ಬದುಕು.
  • ಯಾರ ದಾಕ್ಷಿಣ್ಯಕ್ಕೂ ಬೀಳದೇ ಬಾಳಬೇಕು
  • ಯಾವುದನ್ನು ಧಿಕ್ಕರಿಸದೇ, ಪೂರ್ಣವಾಗಿ ಸ್ವೀಕರಿಸದೇ ಸಮತೋಲಿತ ವಿವೇಚನೆಯೇ ಪ್ರಾಜ್ಞರ ಲಕ್ಷಣ
  • ತಂತ್ರಜ್ಞಾನ ಮುಂದುವರೆಯುತ್ತಿದೆ… ವಿಜ್ಞಾನ ನಿಂತಲ್ಲೇ ಇದೆ
  • ತಂತ್ರಜ್ಞಾನ.. ವಿಜ್ಞಾನದ ಉಪ ಉತ್ಪನ್ನವೇ ಹೊರತು ಅದೇ ಮೂಲವಲ್ಲ
  • ಹೊರಗಿನ ಪ್ರಪಂಚ ಬದಲಾಗಲಿ ಎಂದು ಕಾಯುವುದಲ್ಲಾ ನಮ್ಮೊಳಗಿನ ಬದಲಾವಣೆಯೇ ಪ್ರಪಂಚದ ಬದಲಾವಣೆ
  • ಭರವಸೆ ಇಲ್ಲದೇ ಜಗತ್ತಿನಲ್ಲಿ ಏನೂ ಸಾಗೋಲ್ಲ, ಜಗತ್ತಿನ ಚಲನಶೀಲತೆ ನಿಂತಿರುವುದೇ ಈ ಭರವಸೆ ಆಧಾರದಲ್ಲಿ
  • ಪಾರಮಾರ್ಥಿಕ ಆದರ್ಶಗವೂ ಲೋಕವ್ಯವಹಾರಕ್ಕೆ ಒಗ್ಗುವಂತಿರಬೇಕು, ಲೋಕಸಂಸಾರದ ವಾಸ್ತವಿಕೆಗೆ ದಾರಿ ತೋರಬಲ್ಲ ಪಾರಮಾರ್ಥಿಕತೆಯೇ ನಿಜವಾದ ತತ್ತ್ವಜ್ಞಾನ
  • ನಮ್ಮ ಹುಟ್ಟಿಗೆ ಕಾರಣಕರ್ತರು ಯಾರು ಎಂಬುದಕ್ಕೆ ಉತ್ತರವಿದೆ. ಆದರೆ, ನಮ್ಮ ಸಾವಿಗೆ ಕಾರಣಕರ್ತರಾರು ಎಂಬುದಕ್ಕೆ ಉತ್ತರವಿಲ್ಲ ಅಲ್ಲವಾ?.
  • ಹುಟ್ಟುವಾಗ ತಾಯನ್ನು ನರಳಿಸಿ, ಮಾತು ಹೊರಡದೆ ಜೀವವೇ ನರಳಿ, ದೇಹ ಬಲಿತಾಗ ಕಾಮಕ್ಕೆ ನರಳಿ, ಕಾಮ ತಣಿದಾಗ ಪ್ರೀತಿಗೆ ನೆರಳಿ, ಪ್ರೀತಿ ಬಲಿತಾಗ ಸಂಬಂಧದಲ್ಲಿ ನರಳಿ, ಆ ಬಂಧ ಬಿಡಲಾಗದೇ ನರಳಿ, ಕೊನೆಗೂ ಸಾವಿನಲ್ಲಿ ನರಳುತ್ತೇವೆ. ಈ ನರಳಿಕೆಯನ್ನೇ ಬುದ್ಧ ಶೂನ್ಯ ಎಂದದ್ದು.
  • ಹುಟ್ಟು ಎಂಬುದೇ ನರಳಿಕೆ, ಹುಟ್ಟಿದರೇ ತಾನೇ ಸಾವು! ಅದಕ್ಕಾಗಿಯೇ ಹುಟ್ಟಲೇಬಾರದು. ಪರಬ್ರಹ್ಮನಲ್ಲಿ ನರಳಿಕೆಯಿಲ್ಲ, ಏಕೆಂದರೆ ಪರಬ್ರಹ್ಮ ಹುಟ್ಟೇ ಇಲ್ಲ!
  • ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ
  • ದ್ವೈತ ಭೇದವು ಅದ್ವೈತ ಜ್ಞಾನದಲ್ಲಿ ಕೊನೆಗಾಣುತ್ತದೆ
  • ಪರಿಣಾಮ ಇಲ್ಲದ ಕೆಲಸಗಳಿಗೆ ಸಮಯ ಕೊಡುವುದು ವ್ಯರ್ಥ
  • ವಿಜ್ಞಾನ ಎಂದರೆ ವಿಮರ್ಶನ ಶಕ್ತಿ
  • ಕರ್ಮ ಸಿದ್ಧಾಂತವು ಜಗತ್ತಿನ ಸಹಜ ಧರ್ಮ ಸಮತೋಲನೆ ಕಾಯ್ದುಕೊಳ್ಳಲು ಹುಟ್ಟಿಕೊಂಡ ಕಲ್ಪನೆ.
  • ಆತ್ಮಕ್ಕೂ ವಿದ್ಯುತ್ತಿಗೂ ಸಾಮ್ಯತೆ ಇದೆ. ಆತ್ಮವಿದ್ದರೆ ಜೀವ, ವಿದ್ಯುತ್ ಇದ್ದರೆ ಬೆಳಕು. ಅಸಂಖ್ಯ ಸಾಧನ ಉಪಕರಣವಿದೆ, ಆದರೆ, ವಿದ್ಯುತ್ ಎಂಬುದು ಒಂದೇ ಆಗಿದೆ. ದೇಹಗಳು, ಸಾಧನಗಳು ಕೆಟ್ಟು ಸಾಯುತ್ತವೆ, ಆದರೆ, ಆತ್ಮಕ್ಕಾಗಲೀ, ವಿದ್ಯುತ್ತಿಗಾಗಲೀ ಸಾವಿಲ್ಲ.

ಮೇಲ್ಕಂಡ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು, ಸಂದರ್ಭ ಸಹಿತ ವಿವರಿಸಿ ಎಂದು ಪ್ರಶ್ನಿಸಿದರೆ, ಮತ್ತೊಂದು ಸಾವಿರ ಪುಟಗಳಿಗಾಗುವಷ್ಟು ಲೇಖನ ಬರೆಯಬಹುದು.

Leave a Reply

Your email address will not be published. Required fields are marked *