Nara Vanara -Kannada Book review | ಪ್ರದೀಪ್ ಕೆಂಜಿಗೆ ಬರೆದಿರುವ ನರ ವಾನರ ಕೃತಿ ವಿಮರ್ಶೆ

ಹೊಸ ಪ್ರಯತ್ನ, ಹೊಸ ಪ್ರಕಾರ ಈ ‘ನರ, ವಾನರ’

ವಿಜ್ಞಾನಿ, ಲೇಖಕ ಪ್ರದೀಪ್ ಕೆಂಜಿಗೆ ಅವರು ಮಹಾಪಲಾಯನ, ಅದ್ಭುತ ಯಾನ, bermuda triangle, papillon ಸರಣಿ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ. ಅವರ ಹೊಸ ಕೃತಿ ‘ನರ ವಾನರ’ ಯಾವ ಸಾಹಿತ್ಯ ಪ್ರಕಾರಕ್ಕೂ ಸಲ್ಲುತ್ತದೆ ಎಂಬುದು ನಿರ್ಧರಿಸುವುದು ಕಷ್ಟ. ಆದರೆ, ಇದೊಂದು ಸಂಶೋಧನಾ ಟಿಪ್ಪಣಿಗಳ ತಂತು ಬೆಸದ ಹೊಸ ಮಾದರಿ ಕೃತಿ ಎನ್ನಬಹುದು.

ಸಂಶೋಧಕರಾದ ಫ್ರಾನ್ಸ್ ಡಿ ವಾಲ್, ಜೇನ್ ಗುಡಾಲ್ ಸೇರಿದಂತೆ ಅನೇಕರು ಈಗಾಗಲೇ ಮಾಡಿರುವ ಸಂಶೋಧನೆಗಳ ಬಗ್ಗೆ ಮುನ್ನುಡಿಯಲ್ಲೇ ಲೇಖಕರು ತಿಳಿಸಿದ್ದಾರೆ. ಜೊತೆಗೆ ಬೋರ್ ಹೊಡೆಸದಂತೆ ಕಥೆ ಹೆಣೆದು ವಾನರರ ರಾಜಕೀಯ ಚಿತ್ರಣವನ್ನು ಪ್ರಸ್ತುತಪಡಿಸುವುದು ಸುಲಭವಾಗಿರಲಿಲ್ಲ ಎಂದಿದ್ದಾರೆ. ಆದರೆ ಮೊದಲ ಬಾರಿಗೆ ಪ್ರಾಣಿಗಳ ಲೋಕದ ಕುರಿತಂತೆ ಓದುತ್ತಿರುವವರಿಗೆ ಈ ಕೃತಿ ಅತ್ಯಗತ್ಯ ಕೈಪಿಡಿಯಾಗಬಲ್ಲುದು. ಇನ್ನು ವಾನರ ಜಗತ್ತಿನ ಗುಂಪುಗಾರಿಕೆ, ನಾಯಕ/ಕಿಯ ಆಯ್ಕೆ, ಒಳತಂತ್ರ, ರಾಜಕೀಯದ ಬಗ್ಗೆ ಓದುತ್ತಾ ಹೋದಂತೆ ಅರೇ! ಹೀಗೆಲ್ಲ ಇದ್ಯಾ! ಎಂದು ಅಚ್ಚರಿ ಮೂಡುತ್ತದೆ.

ನೀವು ಈಗಾಗಲೇ ಪ್ಲಾನೆಟ್ ಏಪ್ಸ್ ಸರಣಿ, ಜೇನ್ ಗುಡಾಲ್ ಸಾಕ್ಷ್ಯಚಿತ್ರಗಳು ಸೇರಿದಂತೆ ಡಿಸ್ಕವರಿ, ಅನಿಮಲ್ ಪ್ಲಾನೆಟ್, ಬಿಬಿಸಿ, ನ್ಯಾಷನಲ್ ಜಿಯೋಗ್ರಾಫಿಯಲ್ಲಿ ಚಿಂಪಾಂಜಿಗಳ ಲೋಕದ ಬಗ್ಗೆ ನೋಡಿ ಆನಂದ, ಅಚ್ಚರಿಪಟ್ಟು ಅರಿವು ಗಳಿಸಿದ್ದರೂ ‘ನರ ವಾನರ’ ಓದಲಡ್ಡಿಯಿಲ್ಲ.

ಮುಖಪುಟ ವಿನ್ಯಾಸ, ಮುದ್ರಣ ಗುಣಮಟ್ಟ:

ಶಾಂತಿನಿಕೇತನ ಕಲಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಮಾರ್ಗದರ್ಶಕರು ರಚಿಸಿರುವ ರೇಖಾಚಿತ್ರಗಳು, ಮುಖಪುಟಕ್ಕೆ ಬಳಸಲಾಗಿರುವ ಚಿತ್ರ, ಕಿರೀಟ ತೊಟ್ಟ ಚಿಂಪಾಂಜಿಯ ಕಣ್ಣುಗಳು ಕಾಡುತ್ತವೆ. ಪ್ರತಿಷ್ಠಿತ ಸಂಸ್ಥೆ ಪುಸ್ತಕ ಪ್ರಕಾಶನದ ಕೃತಿ ಎಂದ ಮೇಲೆ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದೇ ರೀತಿ, ಮುದ್ರಣದ ಗುಣಮಟ್ಟ, ಫಾಂಟ್ ಬಳಕೆ, ಒಳಪುಟ ವಿನ್ಯಾಸ ಎಂದಿನಂತೆ ಅಚ್ಚುಕಟ್ಟಾಗಿದೆ. ಆದರೆ, ಕಾಗುಣಿತ ದೋಷಗಳು, ಪದ ಬಳಕೆ ವ್ಯತ್ಯಾಸ ಎಗ್ಗಿಲ್ಲದಂತೆ ನುಗ್ಗಿ, ಆಭಾಸ ಉಂಟು ಮಾಡಿದ್ದಂತೂ ನಿಜ.

ಪುಟ್ಟ ಅಧ್ಯಾಯಗಳ ಮೂಲಕ ಚೊಕ್ಕ ನಿರೂಪಣೆ:

೧೩ ಅಧ್ಯಾಯಗಳ ಪುಟ ತಿರುಗಿಸುವ ಮುನ್ನ ಅಗತ್ಯವಾಗಿ ‘ಮುನ್ನುಡಿ’ಯನ್ನು ಒಂದೆರಡು ಬಾರಿ ಓದಿಕೊಂಡು ಮುಕ್ತ ಮನಸ್ಸಿನಿಂದ ಕಥೆ ಓದಲು ಶುರು ಮಾಡಿದರೆ, ವಾನರರ ಲೋಕ ಅದ್ಭುತವಾಗಿ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ. ವಾನರ ಲೋಕದ ‘ರಾಜಕೀಯ’ ಪ್ರಚಂಚ ಹಾಗೂ ಅದಕ್ಕೆ ಪೂರಕ ಹಿನ್ನೆಲೆ ಹಾಗೂ ಮಾಹಿತಿ ಮೂಲಕ ಕಥೆ ಸಾಗುತ್ತದೆ. ಇದು ಹೊಸ ಮಾದರಿಯ ಓದುಗ ಹಾಗೂ ಲೇಖಕರ ನಡುವಿನ ಸಂವಾದ ಎನ್ನಬಹುದು. ಇಲ್ಲಿ ‘ರಾಜಕೀಯ’ ವಿಷಯಕ್ಕೆ ಮಾತ್ರ ಆದ್ಯತೆ ಕೊಟ್ಟಿದ್ದು, ಪ್ರಾಣಿಗಳ ಪ್ರತಿಕ್ರಿಯೆ(Instincts), ನಡವಳಿಕೆ, ಸಂವಹನ ತಂತ್ರದ ಬಗ್ಗೆ ಹೆಚ್ಚಿನ ಒತ್ತು ನೀಡಿ, ಕಥಾರೂಪವನ್ನು ವಿಸ್ತರಿಸದೇ ಇರುವುದು ಸೂಕ್ತವೆನಿಸಿತು.

ಹಾಲೆಂಡ್ ದೇಶದ ಮೃಗಾಲಯದಲ್ಲಿ ನಡೆದ ಒಂದು ಚಿಂಪಾಂಜಿ ಕೊಲೆ ಸುತ್ತಮುತ್ತ ಸಾಗುವ ಕಥೆ ಇದಾಗಿದೆ. ವಿಜ್ಞಾನಿ ಫ್ರಾನ್ಸ್ ದಿ ವಾಲ್ ನಡೆಸಿದ ತನಿಖೆ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಮಾನವರಂತೆ ಚಿಂಪಾಂಜಿಗಳು ಕೂಡಾ ರಾಜಕೀಯ ಚಿತಾವಣೆ ಮಾಡುತ್ತವೆಯೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ನಂತರ ರಾಜಕೀಯ ಕುರಿತ ವಿಶ್ಲೇಷಣೆ ಜೊತೆಗೆ ವಾಟರ್ ಗೇಟ್ ಹಗರಣದ ಕಥೆ ಅಮೆರಿಕದ ರಾಜಕೀಯದ ಚಿತ್ರಣ ನೀಡುತ್ತದೆ ಆದರೆ, ಇದು ಈ ಕಥೆಗೆ ಹೇಗೆ ಪೂರಕವಾಗಿದೆ ಎಂಬುದು ಮುಂದಿನ ಅಧ್ಯಾಯಗಳನ್ನು ಓದಿದಾಗ ತಿಳಿಯುತ್ತದೆ. ಹಗರಣದಲ್ಲಿ ಭಾಗಿಯಾಗಿದ್ದ ಅಧ್ಯಕ್ಷ ನಿಕ್ಸನ್ ರಾಜಕೀಯ ಪತನದ ಬಗ್ಗೆ ತಿಳಿದು ಬರುತ್ತದೆ. ಇದೇ ರೀತಿ ರಾಜಕೀಯ ಸಂಚಿಗೆ ಚಿಂಪಾಂಜಿ ಲೂಯಿಟ್ ಬಲಿಯಾಗಿದ್ದೇ? ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ.

ಗೋಂಬೆ ಎಂಬ ಗೊಂಡಾರಣ್ಯದಲ್ಲಿ:

ಮುಂದಿನ ಅಧ್ಯಾಯದಲ್ಲಿ ಜೇನ್ ಗುಡಾಲ್ ಬಗ್ಗೆ ಪರಿಚಯ ಮಾಡಿಕೊಡುತ್ತಾ, ಡಾ. ಲೀಕಿ ಅವರ ಕಾಲದ ವಂಶವಾಹಿ ಅಧ್ಯಯನದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಗೋಂಬೆ ನದಿ ಪ್ರದೇಶದ ಅರಣ್ಯದಲ್ಲಿ ತಪಸ್ಸಿಗೆ ಕುಳಿತಂತೆ ಜೇನ್, ಚಿಂಪಾಂಜಿಗಳನ್ನು ವೀಕ್ಷಿಸುವ ಪರಿ ನೆನಸಿಕೊಂಡರೆ ಮೈಜುಂ ಎನಿಸುತ್ತದೆ. ತಮ್ಮ ಗಡಿಯೊಳಗೆ ಕಾಲಿಟ್ಟ ಆಗುಂತಕ ಜೇನ್ ಳನ್ನು ಚಿಂಪಾಂಜಿಗಳು ವೀಕ್ಷಿಸುವ ರೀತಿ, ಜೇನ್ ಹಾಗೂ ಚಿಂಪಾಂಜಿಗಳ ನಡುವಿನ ಮೊದಲ ಸಂವಹನೆ, ಆಕೆ ಕಂಡುಕೊಂಡ ಸತ್ಯ ಓದುಗರ ಹುಬ್ಬೇರುವಂತೆ ಮಾಡುತ್ತದೆ.

ಮುಖ್ಯವಾಗಿ ಈ ಕಥೆಗೆ ಪೂರಕ ಅಂಶವಾದ ‘ವ್ಯತಿರಿಕ್ತ ಸಾಮಾಜಿಕ ನಡವಳಿಕೆ’, ಡಾ. ನಿಷಿಡಾ ಅವರು ತಿಳಿಸಿದಂತೆ ಚಿಂಪಾಂಜಿ ‘ರಾಜಕಾರಣ’ ದ ಬಗ್ಗೆ ತಿಳಿಯುತ್ತಿದ್ದಂತೆ ಕಥೆಯ ಆರಂಭದಲ್ಲಿ ತಿಳಿಸಿರುವ ಕೊಲೆಯನ್ನು ಓದುಗರು ಇನ್ನೊಂದು ಆಯಾಯದಿಂದ ನೋಡುವಂತೆ ಮಾಡುತ್ತದೆ.

ಪಾತ್ರವರ್ಗದ ಪರಿಚಯವೇ ಮಾಡದೆ ಒಂದು ಘಟನೆ ಅಥವಾ ಕೊಲೆಯ ಹಿನ್ನೆಲೆ ಹಾಗೂ ಅದು ಕೊಲೆಯೇ ಹೌದು ಎಂಬುದನ್ನು ದೃಢಪಡಿಸಲು ಬೇಕಾದ ‘ಉದ್ದೇಶ’ದ ಅಂಶಗಳನ್ನು ಕ್ಲುಪ್ತವಾಗಿ ತಿಳಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಕೊಲೆ ಹಾಗೂ ಕೊಲೆಯ ಉದ್ದೇಶದ ಸುಳಿವು ಮಾತ್ರ ಇಲ್ಲಿ ತನಕ ಸಿಗುತ್ತದೆ ಇನ್ಮುಂದೆ ಆರ್ನ್ ಹ್ಯಾಂ ಪ್ರಾಣಿ ಸಂಗ್ರಹಾಲಯದಲ್ಲಿನ ವಿಭಿನ್ನ, ವಿಶಿಷ್ಟ ವ್ಯಕ್ತಿತ್ವದ ಚಿಂಪಾಂಜಿಗಳ ಪರಿಚಯವನ್ನು ಮುಂದಿನ ಅಧ್ಯಾಯ ವಿಷದಪಡಿಸುತ್ತದೆ.

ಪಾತ್ರವರ್ಗ:

ನಾಲ್ಕನೇ ಅಧ್ಯಾಯದಲ್ಲಿ ಚಿಂಪಾಂಜಿಗಳು ಹೇಗೆ ವಿಭಿನ್ನ, ವಿಶಿಷ್ಟ ನಡವಳಿಕೆ, ಸಂವಹನ ಕ್ರಿಯೆ ಹೊಂದಿವೆ ಹಾಗೂ ತಮ್ಮ ಗುಂಪಿನ ಸದಸ್ಯರೊಟ್ಟಿಗೆ ಹೇಗೆ ವರ್ತಿಸುತ್ತದೆ ಎಂದು ಹೇಳುತ್ತಾ ಈ ಕಥೆಯ ಪಾತ್ರ ಪರಿಚಯ ಮಾಡಿಕೊಡಲಾಗಿದೆ.

ಬಿಗ್ ಮಾಮ ರೀತಿ ವ್ಯಕ್ತಿತ್ವವನ್ನು ಎಲ್ಲಾ ಸ್ತರ ವರ್ಗಗಳಲ್ಲಿ, ಪ್ರದೇಶಗಳಲ್ಲಿ ಕಾಣಬಹುದಾಗಿದ್ದು ನಾವು ಕಂಡ ವ್ಯಕ್ತಿಗಳಿಗೆ ಹೋಲಿಸಿ ನೋಡುವಂತೆ ಮಾಡುತ್ತದೆ. ಗೊರಿಲ್ಲಾ ಎಂಬ ಚಿಕ್ಕಮ್ಮ ಅನುಭವಿಸಿದ ತಾಯಿತನದ ಕಷ್ಟ ನಷ್ಟಗಳು ಅದಕ್ಕೆ ತಂಡ ಹೇಗೆ ಪರಿಹಾರ ಒದಗಿಸಿ ಒಂದು ಕ್ರಾಂತಿಕಾರಿ ಬದಲಾವಣೆ ತಂದರು ಎಂಬುದು ಗಮನಾರ್ಹ ಮಾನವ ಸಮಾಜದ ಎಷ್ಟೋ ಸಮಸ್ಯೆಗಳಿಗೂ ಸರಳವಾಗಿ ಪರಿಹಾರವಿರುತ್ತದೆ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿಕೊಂಡು ಬದುಕುವುದೇ ಸೂಕ್ತ ಎಂಬ ತಿಳಿವನ್ನು ಈ ಪ್ರಸಂಗ ತಿಳಿಸುತ್ತದೆ.

ಒಟ್ಟಾರೆ ಈ ಕಥಾನಕದುದ್ದಕ್ಕೂ ನಮ್ಮ ಸಾಮಾಜಿಕ ಅರಿವು, ವೈಚಾರಿಕ ಮನೋಭಾವವನ್ನು ಪ್ರಶ್ನಿಸುವ ಕೆಲಸ ಹಾಗೂ ಅದಕ್ಕೆ ಸೂಕ್ತ ಪರಿಹಾರವನ್ನು ತಿಳಿಸುವ ಮಾರ್ಗ ತೋರುತ್ತದೆ

ಮುಂದಿನ ಎರಡು ಅಧ್ಯಾಯಗಳಲ್ಲಿ ಚಿಂಪಾಂಜಿಗಳ ನಾಯಕ ಪಟ್ಟಕ್ಕಾಗಿ ನಡೆಯುವ ಹೋರಾಟ ಪ್ರಕ್ರಿಯೆ ಹಾಗೂ ಯುದ್ಧದ ನಂತರದ ಪರಿಣಾಮಗಳನ್ನು ಕಾಣಬಹುದು. ಈ ಅಧ್ಯಾಯ ಓದುವಾಗ ಒಳ್ಳೆ ಗ್ಯಾಂಗ್ ವಾರ್ ಸಿನಿಮಾದ ದೃಶ್ಯಗಳನ್ನು ನೋಡಿದ ಅನುಭವ ಮೂಡುತ್ತದೆ. ನಾಯಕತ್ವಕ್ಕಾಗಿ ಚಿಂಪಾಂಜಿಗಳು ಮೈ ಕೈ ನೋಯಿಸಿಕೊಳ್ಳುವುದಷ್ಟೇ ಅಲ್ಲದೆ ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳುವುದರ ಬಗ್ಗೆ ಓದಿದರೆ ಆಶ್ಚರ್ಯ ಮೂಡುತ್ತದೆ. ಅಧಿಕಾರ ಅಥವಾ ನಾಯಕ ಪಟ್ಟ ಬಿಡದೆ ರಾಜಕಾರಣಿಗಳು ಮೈತ್ರಿ ಸಂಚು ಹೂಡುವುದು, ಪಟ್ಟ ದೊರೆತ ನಂತರ ಹೊಸ ನಾಯಕನ ವರಸೆ ಎಲ್ಲವೂ ಚಿಂಪಾಂಜಿಗಳ ಸಮಾಜದಂತೆ ಮಾನವ ಸಮಾಜದಲ್ಲೂ ಕಾಣಬಹುದಾಗಿದೆ. ಕಿಂಗ್ ಆಗದಿದ್ದಾಗ ಕಿಂಗ್ ಮೇಕರ್ ಆಗಿ ಪ್ರಸ್ತುತನಾಗಿ ಉಳಿಯುವ ಏರಾನ್ ಪಾತ್ರ ಇಲ್ಲಿ ಉಲ್ಲೇಖಾರ್ಹ.

ಉರುಳಿದ ದಾಳ, ಚಾಣಕ್ಯ ತಂತ್ರ, ಕಾಂತಾರ ಕುರುಕ್ಷೇತ್ರ ಅಧ್ಯಾಯಗಳಲ್ಲಿ ನಾಯಕತ್ವಕ್ಕಾಗಿ ನಡೆಯುವ ಒಳ ಒಪ್ಪಂದ, ಬಹುಮತಕ್ಕಾಗಿ ಹಾತೊರೆಯುವ ರಣ ಉತ್ಸಾಹಿಗಳು, ಏರಾನ್-ಲೂಯಿಟ್ ನಡುವಿನ ಕಾಳಗ, ನಿಕ್ಕಿ ಪ್ರವರ್ಧಮಾನಕ್ಕೆ ಬಂದ ಎನ್ನುವಷ್ಟರಲ್ಲಿ ಆಗುವ ಬದಲಾವಣೆ ಮರೆಯುವಂತಿಲ್ಲ

ಹೇಗೆ ತೆರೆಮರೆಯಲ್ಲೇ ಇದ್ದು ಕಿಂಗ್ ಮೇಕರ್ ರೀತಿ ಏರಾನ್ ತನ್ನ ಕಾರ್ಯ ಸಾಧಿಸಿಕೊಂಡ ಎಂಬುದು ನಮ್ಮ ಸಮಾಜದ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ತುಘಲಕ್ ದರ್ಬಾರ್ ನಡೆಸಿದ ನಿಕ್ಕಿಯನ್ನು ಮುಂದಿಟ್ಟುಕೊಂಡು ಏರಾನ್ ಹೇಗೆ ತನ್ನ ಸ್ಥಾನವನ್ನು ಮತ್ತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದನೇ ಓದಿ ತಿಳಿಯಬಹುದು ಇದರ ಜೊತೆಗೆ ಗೊಂಬೆಯ ಅರಣ್ಯ ಪ್ರದೇಶದಲ್ಲಿ ಸತತ ನಾಲ್ಕು ವರ್ಷಗಳ ಕಾಲ ಚಿಂಪಾಂಜಿಗಳು ಗುಂಪಿನ ನಡುವೆ ನಡೆದ ಭೀಕರ ಕಾಳಗ, ಗೆರಿಲ್ಲ ಯುದ್ಧ ತಂತ್ರ, ನಾಜಿ ಸೈನಿಕರ ಕ್ರೌರ್ಯ ಎಲ್ಲದರ ಬಗ್ಗೆ ಉಲ್ಲೇಖವಿದೆ

ಮಾನವ ವ್ಯಕ್ತಿಯಾಗಿ ಅಥವಾ ಎಷ್ಟು ಸ್ವತಂತ್ರ? ಅವನ ಬಾಹ್ಯ ಕ್ರಿಯೆಗಳು ಕೊನೆಗೆ ಆಲೋಚನೆಗಳು ಸಹ ಇನ್ಯಾವುದೋ ಶಕ್ತಿಗಳ ಪ್ರಭಾವ ನಿಯಂತ್ರಣ ನಿಯಂತ್ರಣದಲ್ಲಿ ಇರಬಹುದು ಲಕ್ಷಾಂತರ ತಲೆಮಾರುಗಳಿಂದ ಅವ್ಯಾಹತವಾಗಿ ಅಂತರ್ಗತವಾಗಿ ಹರಿದು ಬಂದಿರುವ ವಂಶವಾಹಿಗಳು ಅವನ ಮಾನಸಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ನಿಯಂತ್ರಕ ಶಕ್ತಿಗಳಾಗಿರಬಹುದು”

ಮಾನವ ಹಾಗೂ ಚಿಂಪಾಂಜಿಗಳು ವರ್ತನೆ ಕ್ರಿಯೆ ಹೋಲಿಸಿ ನೋಡಿದಾಗ ಈ ಮೇಲ್ಕಂಡ ಪ್ಯಾರದಲ್ಲಿರುವ ವಿಷಯವು ಚರ್ಚೆ ಹುಟ್ಟುಹಾಕುವುದಲ್ಲದೆ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸಲು ಪ್ರೇರೇಪಿಸುತ್ತದೆ.

ವಾನರಸ್ವಾಮಿ ಹಾಗೂ ಕೊನೆಯಲ್ಲಿ ಸಾಕ್ಷ್ಯಚಿತ್ರ ವೀಕ್ಷಿಸುವ ಚಿಂಪಾಂಜಿಗಳ ಪ್ರತಿಕ್ರಿಯೆ ಪ್ರಸಂಗಗಳು ಗಮನ ಸೆಳೆಯುತ್ತದೆ. ಈ ರೀತಿಯ ಸಣ್ಣ ಸಣ್ಣ ಕುತೂಹಲ ಕೆರಳಿಸುವ ಪ್ರಸಂಗಗಳನ್ನು ಸೂಕ್ತವಾಗಿ ಸೇರಿಸಬಹುದಾಗಿತ್ತು. ಇನ್ನು ಪ್ರೇಮ ಕಾಮ ಸಂಬಂಧಿಸಿದ ‘ಕಾಮನ ಕುಣಿತ’ ಅಧ್ಯಾಯದಲ್ಲಿ ಚಿಂಪಾಂಜಿಗಳಲ್ಲಿ ಕಾಮ ಹೇಗೆ ಅಗತ್ಯ ಅನಿವಾರ್ಯ ಎಂಬ ವಿವರಣೆ ಇದೆ. ಚಿಂಪಾಂಜಿಗಳ ನಾಯಕ ಪಟ್ಟಕ್ಕಾಗಿ ನಡೆಯುವ ಕಾಳಗ, ಅಧಿಕಾರ ಚಲಾಯಿಸಲು ರಾಜಕೀಯ ತಂತ್ರಗಳ ಜೊತೆಗೆ ಪ್ರೇಮ ಕಾಮ ಹೇಗೆ ಪೂರಕ ಎಂಬುದನ್ನು ಹೆಚ್ಚಾಗಿ ವಿವರಿಸಲಾಗಿದೆ

ಸಗೋತ್ರ ಸಂಬಂಧ ವಿರುದ್ಧ ಚಿಂಪಾಂಜಿಗಳು ಚಲಿಸುವುದು, ಮಾನವ ಸಮಾಜದಲ್ಲೂ ಹೆಚ್ಚು ಪ್ರಚಲಿತವಾಗಿದೆ. ಆದರೆ ಚಿಂಪಾಂಜಿಗಳ ಬಹುಪತ್ನಿತ್ವ ಸ್ವೇಚ್ಛ ಕಾಮ ಪದ್ಧತಿಗೆ ವಿರುದ್ಧವಾಗಿ ಮಾನವ ಸಮಾಜದಲ್ಲೋ ಏಕಪತ್ನಿತ್ವ ದಾಂಪತ್ಯ ಹೆಚ್ಚು ಅನುಸರಣೆಯಲ್ಲಿ ಇರುವುದು ಗಮನಾರ್ಹ ವಿಕಾಸ ಎನ್ನಬಹುದು.

ಇದಲ್ಲದೆ ಮೈ ಬಾಡಿ ಮೈ ಚಾಯ್ಸ್ ಎಂದು ಆಧುನಿಕ ನಾರಿಯರು ಘೋಷಿಸಿರುವುದನ್ನು ಚಿಂಪಾಂಜಿಗಳು ಅಘೋಷಿತವಾಗಿ ಪಾಲಿಸಿಕೊಂಡು ಬಂದಿರುವುದನ್ನು ಕಾಣಬಹುದು. ಅಂತ್ಯದಲ್ಲಿ ಲೂಯಿಟ್ ಅಂತ್ಯ ಹೇಗಾಯಿತು ಯಾಕಾಯ್ತು ಎಂದು ಕ್ಲುಪ್ತವಾಗಿ ವಿವರಿಸಲಾಗಿದೆ.

ಚಿಂಪಾಂಜಿಗಳ ಲೋಕದಲ್ಲಿ “ನಾಯಕನಿಗೆ ನಿವೃತ್ತಿ ಇಲ್ಲ’ ಎಂಬ ಮಾತಿದೆ. ಇದು ನಮ್ಮ ಹಲವು ರಾಜಕಾರಣಿಗಳಿಗೆ ಹೋಲಿಸಿ ನೋಡಬಹುದು. ಒಟ್ಟಾರೆ ನರ ವಾನರ ಓದಿ ಮುಗಿಸುತ್ತಿದ್ದಂತೆ ಚಿಂಪಾಂಜಿಗಳ ಬದುಕಿನ ಬಗ್ಗೆ ಹೊಸ ಅರಿವು ಮೂಡುವುದರಲ್ಲಿ ಸಂಶಯವಿಲ್ಲ.

-ಮಲೆನಾಡಿಗ

Leave a Reply

Your email address will not be published. Required fields are marked *