ಕನ್ನಡ ರಂಗಭೂಮಿ ಏಳಿಗೆಗೆ ಅಂತರ್ಜಾಲ ಬೆಂಬಲ | Internet is boost to Kannada theatre

Tughalaq Drama

ರಂಗಭೂಮಿ ಎಂಬುದು ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಚಿತ್ರಣ ತೋರಿಸಬಲ್ಲ ವೇದಿಕೆ. ನಾಟಕ ಎಂಬ ಸಂಸ್ಕೃತ ಪದದ ಆರ್ಥ ನೃತ್ಯಾಧಾರಿತ ಕಲೆ ಎಂಬುದಾಗಿದೆ. ಕಲ್ಪನಾಲೋಕಕ್ಕೂ, ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ನೃತ್ಯ ಕಲೆಗೆ ಇಂದು ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ಬೆಂಬಲ ಅತ್ಯಗತ್ಯ

ಕಲಾ ರಸಿಕರನ್ನು ಈ ಕಲ್ಪನಾವಿಲಾಸದಲ್ಲಿ ತೇಲಿಸಿ ವಾಸ್ತವದ ಅರಿವಿಗೆ ತಂದು ಕೂರಿಸುವುದು ರಂಗಕರ್ಮಿಗಳ ಕಾಯಕ. ಈ ಕಲೆಯ ಅಳಿವು ಉಳಿವು ಹಾಗೂ ಬೆಳೆಸಲು ಅನೇಕರು ಶ್ರಮಿಸಿದ್ದಾರೆ. ಇಂದು ಯುವ ಮನಸ್ಸುಗಳು ರಂಗದ ಬೆಳೆವಣಿಗೆಯತ್ತ ಚಿತ್ತ ಇರಿಸಿದ್ದಾರೆ. ರಂಗಸಜ್ಜಿಕೆ, ವಿನ್ಯಾಸ, ಸಂಯೋಜನೆಯ ಕಾರ್ಯನಿರತರು, ರಂಗಕರ್ಮಿಗಳು ಮಾತ್ರವಲ್ಲದೇ, ರಂಗಭೂಮಿಗಾಗಿ ತನು ಮನ ಧನವನ್ನು ಸಮರ್ಪಿಸಿರುವ ಹಾಗೂ ರಂಗವೇ ಬದುಕು ಕಲಿಸುವ ನೆಲೆ ಎಂದು ನಂಬಿರುವ ನಟ, ನಿರ್ದೇಶಕ ಇನ್ನಿತರ ವರ್ಗದವರೂ ಇವರಲ್ಲಿ ಸೇರುತ್ತಾರೆ. ನಾಟಕ ಎಂಬ ಮಾಯಾಲೋಕದಲ್ಲಿ ಪ್ರೇಕ್ಷಕರು ಮೈ ಮರೆತು ವಿಹರಿಸುವಂತೆ ಮಾಡಬಲ್ಲ ನಿರ್ದೇಶಕರ ಪರಂಪರೆಯೇ ನಮ್ಮ ರಂಗಭೂಮಿಯಲ್ಲಿದೆ.

ನಾಟಕವೆಂಬ ಅದ್ಭುತ ಕಲೆಯ ಅಳಿವು-ಉಳಿವಿಗೆ ರಂಗಮಂದಿರ, ಪ್ರೇಕ್ಷಕವರ್ಗ ಅತಿಮುಖ್ಯ. ಜೊತೆಗೆ ಪ್ರಚಾರ ಹಾಗೂ ನಾಟಕ ಕುರಿತ ಅರಿವು ಮೂಡಿಸುವ ಕೆಲಸ ಸೂಕ್ತವಾಗಿ ಆಗಬೇಕಿದೆ. ಬೆಂಗಳೂರಿನಲ್ಲಿ ರಂಗಮಂದಿರಗಳಿಗೇನು ಕೊರತೆಯಿಲ್ಲ. ನಾಟಕ ಕೇವಲ ಮನರಂಜನಾ ಮಾಧ್ಯಮವಾಗಿರದೆ ಮಾಹಿತಿ ಹಾಗೂ ಮನರಂಜನೆಯ ಸಮ್ಮಿಶ್ರಣವಾಗಿ ಜನತೆಗೆ ಮುದನೀಡುವ ಹೊಣೆಗಾರಿಕೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

Tughalaq Drama
A scene from Tughalq Drama

ಆದರೆ, ಸತ್ವಯುತವಾದ ಉತ್ಪನ್ನ ತಯಾರಾದರಷ್ಟೇ ಸಾಲದು ಅದನ್ನು ಸರಿಯಾದ ಬೆಲೆಗೆ, ಸೂಕ್ತವಾದ ರೀತಿಯಲ್ಲಿ ಎಲ್ಲರಿಗೂ ತಲುಪಿಸುವ ಕಾರ್ಯವಾಗಬೇಕು. ನಮ್ಮ ಉತ್ಪನ್ನವನ್ನು(ನಾಟಕ) ಕಡಿಮೆ ವೆಚ್ಚದಲ್ಲಿ ಅತಿಹೆಚ್ಚು ಜನಕ್ಕೆ ಹೇಗೆ ಪರಿಣಾಮಕಾರಿಯಾಗಿ ತಲುಪಿಸಬಲ್ಲೆವು ಎಂಬುದರ ಮೇಲೆ ನಮ್ಮ ಜಾಣ್ಮೆ ಅಡಗಿದೆ. ಸರಳವಾಗಿ ಹೇಳಬೇಕೆಂದರೆ, ನಮ್ಮ ಪ್ರತಿಭೆಯನ್ನು ಎಲ್ಲರಿಗೂ ತಲುಪಿಸಲು ಸೂಕ್ತ ವೇದಿಕೆಯ ಜೊತೆಗೆ ಪ್ರಚಾರವೂ ಅತಿಮುಖ್ಯ ರಂಗಭೂಮಿ ಹಾಗೂ ಪ್ರಚಾರಕ್ಕೆ ಬಹು ಹಿಂದಿನ ನಂಟಿದೆ. ಹಿಂದೆಲ್ಲಾ ಜಟಕಾ ಗಾಡಿ ಹತ್ತಿ ಮೈಕ್ ಹಿಡಿದು ನಾಟಕದ ಬಗ್ಗೆ ಪ್ರಚಾರ ಕಾರ್ಯ ನಡೆಯುತ್ತಿತ್ತು.

ಭಿತ್ತಿ ಚಿತ್ರ, ಪಾಂಪ್ಲೇಟ್, ಪತ್ರಿಕೆಗಳಲ್ಲಿ ಜಾಹೀರಾತು, ತಮಟೆ ಹಿಡಿದು ಢಂಗುರ ಸಾರುವುದು ಒಂದೇ ಎರಡೇ.. ಆದರೆ, ಇದೆಲ್ಲವೂ ಕಂಪೆನಿ ನಾಟಕಗಳ ಪ್ರಚಾರದ ಅವಿಭಾಜ್ಯ ಅಂಗಗಳಾಗಿವೆ. ಅಲ್ಲದೆ ಗ್ರಾಮೀಣ ಭಾಗಕ್ಕೆ ಸೂಕ್ತವಾದ ಪ್ರಚಾರ ತಂತ್ರವಾಗಿದೆ. ಹವ್ಯಾಸಿ ನಾಟಕಗಳೇ ಹೆಚ್ಚು ಪ್ರದರ್ಶನಗೊಳ್ಳುವ ಪಟ್ಟಣಗಳಲ್ಲಿ ಈ ತಂತ್ರಗಳು ತಮಾಷೆಯ ವಿಷಯ ಎನಿಸಬಹುದೇ ಹೊರತು ಹೆಚ್ಚು ಜನರನ್ನು ತಲುಪುವುದು ಕಷ್ಟ. ವರ್ಷಕ್ಕೊಮ್ಮೆ ಪ್ರಚಾರದಲ್ಲಿ ಒಂದಿಷ್ಟು ಬದಲಾವಣೆ ಇರಲಿ ಎಂದು ಮೇಲ್ಕಂಡ ತಂತ್ರಗಳನ್ನು ಬಳಸಬಹುದಷ್ಟೇ.

ಕಾಲ ಬದಲಾದಂತೆ ನಾಟಕರಂಗ ಪ್ರಚಾರಕ್ಕಾಗಿ ಹೊಸ ಹೊಸ ಆಯಾಮಕ್ಕೆ ತನ್ನನ್ನು ತಾನು ತೆರೆದುಕೊಳ್ಳಬೇಕಾಗಿದೆ. ನಿಧಾನವಾಗಿಯಾದರೂ ಹೊಸ ಹೊಸ ಪ್ರಚಾರ ತಂತ್ರಗಳತ್ತ ರಂಗಭೂಮಿ ಮುಖಮಾಡಿದೆ ಎಂಬುದು ಸಂತೋಷದ ಸಂಗತಿ. ಅಂತರ್ಜಾಲದ ಮೂಲಕ ರಂಗಭೂಮಿ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಶೀಘ್ರವಾಗಿ, ಸರಳವಾಗಿ ಜನರಿಗೆ ತಲುಪಿಸಬಹುದಾಗಿದೆ.

ಅಂತರ್ಜಾಲ(ವೆಬ್), ಸಾಮಾಜಿಕ ಜಾಲ ತಾಣಗಳ ಮೂಲಕ ನಾವು ನಾಟಕದ ಪ್ರಚಾರವಷ್ಟೇ ಅಲ್ಲದೇ ಇನ್ನೂ ಹೆಚ್ಚಿನದ್ದನ್ನು ಸಾಧಿಸಬಹುದೇ? ಅಂತರ್ಜಾಲವನ್ನು ನಾಟಕರಂಗ ಹೇಗೆ ಸಮರ್ಪಕವಾಗಿ ದುಡಿಸಿಕೊಳ್ಳಬಹುದೇ? ಈ ವಿಷಯದ ಬಗ್ಗೆ ಕೆಲವು ರಂಗಾಸಕ್ತರನ್ನು ಅದರಲ್ಲೂ ಐಟಿರಂಗ, ರಂಗಭೂಮಿದ ಪರಿಚಯಿರುವ ಆಪ್ತರನ್ನು ಕೇಳಿದಾಗ ಸಿಕ್ಕ ಮಾಹಿತಿ ಆಗಾಧವಾಗಿತ್ತು. ಅದರ ಸಾರಾಂಶ ಇಲ್ಲಿದೆ..

ಇದರ ಸಂಪೂರ್ಣ ಪಠ್ಯ ಇಲ್ಲಿದೆ.. ಇದು 2010ಕ್ಕೂ ಮೊದಲು ಸಂಗ್ರಹಿಸಿದ ಅಭಿಪ್ರಾಯಗಳಾಗಿದ್ದು, ಓದುಗರು ಮನದಲ್ಲಿಟ್ಟುಕೊಳ್ಳಬೇಕಾಗಿ ವಿನಂತಿ

KT Sateesh from Aviratha team
KT Sateesh from Aviratha team

ಅವಿರತ ಟ್ರಸ್ಟ್‌ ಅಧ್ಯಕ್ಷ, ಐಟಿ ಉದ್ಯೋಗಿಯಾದ ಕೆ.ಟಿ. ಸತೀಶ್ ಗೌಡ ಅವರ ಅನಿಸಿಕೆಗಳು:

“ನಾಟಕಗಳನ್ನು ಪಟ್ಟಣಗಳಿಗಿಂತ ಹಳ್ಳಿಗಳಿಗೆ ಕೊಂಡೊಯ್ಯಬೇಕು. ತಾಲೂಕು, ಜಿಲ್ಲಾಮಟ್ಟಗಳಲ್ಲಿ ನಾಟಕೋತ್ಸವಗಳನ್ನು ಕಾಲಕಾಲಕ್ಕೆ ಮಾಡಬೇಕು. ಇದರೆಲ್ಲದರ ಮಾಹಿತಿಯನ್ನು ವೆಬ್‌ನಲ್ಲಿ ಸಿಗುವಂತೆ ಮಾಡಬೇಕು. ಒಂದು event calender ಮಾಡಿದರೆ ಉತ್ತಮ. ಇದರಿಂದ ಮುಂಬರುವ ನಾಟಕಗಳ ವಿವರ ಸಿಗುತ್ತದೆ. ಬೆಂಗಳೂರು ಬಿಟ್ಟು ತಮ್ಮ ಊರುಗಳಿಗೆ ಹೋಗುವ ಐಟಿ ಜನರಿಗೆ ಅವರ ಊರಲ್ಲೇ ನಾಟಕ ನೋಡುವ ಅವಕಾಶ ಸಿಕ್ಕರೆ ಚೆನ್ನ ಅಲ್ಲವೆ. ಕನ್ನಡ ನಾಡು ನುಡಿಗಾಗಿ ಸ್ಪಂದಿಸುವ ನಮ್ಮ ಟ್ರಸ್ಟ್, ನಾಟಕ ರಂಗದ ಅಭಿವೃದ್ಧಿಗೂ ಬದ್ಧವಾಗಿದೆ”

ಲೇಖಕಿ, ಅಂಕಣಗಾರ್ತಿ ಶ್ರೀಕಲಾ ಡಿಎಸ್ ಅವರ ಅಭಿಪ್ರಾಯ:

“ಐಟಿರಂಗದಲ್ಲಿ ನಾಟಕಗಳ ಬಗ್ಗೆ ಆಸಕ್ತಿ ಮೂಡಿಸಲು ಅಂತರ್ಜಾಲವೇ ಕಾರಣ. ಅದರಲ್ಲೂ ಯುವ ಜನಾಂಗ ಇಂದು ನಾಟಕಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿರುವುದು ವೆಬ್ ಪ್ರಪಂಚದ ಸಾಧನಗಳ ಮೂಲಕವೇ. ಇಮೇಲ್, ಚಾಟ್, ಎಸ್ಎಂಎಸ್ ಮೂಲಕ ರಂಗಭೂಮಿ ನಂಟಿರುವ ನಾವುಗಳು ನಾಟಕ ಎಂದರೆ ಗೊತ್ತಿರದ ಎಷ್ಟೋ ಸ್ನೇಹಿತರನ್ನು ನಾಟಕ ನೋಡುವಂತೆ ಪ್ರೇರೆಪಿಸಿದ್ದೇವೆ. ಇದರ ಪರಿಣಾಮ ಈಗ ವಾರಾಂತ್ಯದಲ್ಲಿ ಕುಟುಂಬ ಸಮೇತ ಒಳ್ಳೆ ನಾಟಕ ನೋಡಿ ಎಂಜಾಯ್ ಮಾಡಿಬಿಡೋಣ ಎನ್ನುವ ಮನಸ್ಸುಗಳು ಹೆಚ್ಚುತ್ತಿವೆ. ಐಟಿ ಯುವ ಜನತೆ, ನಾಟಕಗಳಿಗೆ ಹೋಗಲು ಶುರುಮಾಡಿದ ಮೇಲೆ, ಅವರ ಅಪ್ಪ ಅಮ್ಮ, ಅಜ್ಜ, ಅಜ್ಜಿಯರು ಕೂಡ ಹಳೆ ದಿನಗಳನ್ನು ಮೆಲಕು ಹಾಕುತ್ತಾ ಹೊಸ ಬಗೆಯ ನಾಟಕಗಳನ್ನು ನೋಡಲು ರಂಗಮಂದಿರದತ್ತ ಹೆಜ್ಜೆ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದೆಲ್ಲಾ ಸಾಧ್ಯವಾಗಿರೋದು ಇಂಟರ್ನೆಟ್‌ನ ಸದ್ಬಳಕೆಯಿಂದ ಎನ್ನಬಹುದು.”

Myhtological dance drama
Myhtological dance drama by Sreekala DS

ಅಂತರ್ಜಾಲ ಬಳಸಿ ಏನೆಲ್ಲಾ ಮಾಡಬಹುದು?

“ಈಗ making of the movie, bts ಚಿತ್ರೀಕರಿಸುವ ರೀತಿಯಲ್ಲಿ ಪ್ರಮುಖ ನಾಟಕಗಳ making videoಗಳನ್ನು ಚಿತ್ರೀಕರಿಸಿ ಸೂಕ್ತವಾಗಿ ಬಳಸಬಹುದು. ನೀನಾಸಂ, ರಂಗಾಯಣ, ರಂಗಶಂಕರದಂಥ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಉತ್ತಮ. ಅಲ್ಲದೆ ನಾಟಕೋತ್ಸವ ವಿಡಿಯೋ ಚಿತ್ರಣವನ್ನು ಮಾರಾಟ ಮಾಡಬಹುದು. ಯಾರಿಗೆ ಇಲ್ಲಾಂದರೂ ನಾಟಕದ ಗೀಳು ಬೆಳೆಸಿಕೊಂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನೀನಾಸಂ, ರಂಗಾಯಣದಂಥ ಕಲಿಕಾ ಸ್ಥಾನಗಳ ಮಹತ್ವ ಅಲ್ಲಿನ ಗುರು ಶಿಷ್ಯ ಪರಂಪರೆ, ಅಲ್ಲಿನ ವಿದ್ಯಾರ್ಥಿ ಜೀವನ, ನಾಟಕ ರಂಗವೇದಿಕೆ ಏರುವುದಕ್ಕೂ ಮೊದಲು ನಡೆಸಬೇಕಾದ ತಯಾರಿ ಹೀಗೆ ಅನೇಕ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ವೆಬ್‌ನಲ್ಲಿ ಪ್ರಸ್ತುತಪಡಿಸಬಹುದು. ಇನ್ನು ಬ್ಲಾಗ್‌, ಫೇಸ್‌ಬುಕ್ ಗಳಲ್ಲಿ ನಾವು ನೋಡಿದ ನಾಟಕಗಳ ವಿಮರ್ಶೆ, ಲಭ್ಯವಾದ ಮುಂಬರುವ ನಾಟಕಗಳ ವಿವರಗಳನ್ನು ಕಾಲಕಾಲಕ್ಕೆ ಹಾಕುತ್ತಿರುತ್ತೇವೆ. ಇದರಿಂದ ಒಂದಷ್ಟು ಆಸಕ್ತಿ ಬೆಳೆಸಲು ಸಹಾಯಕವಾಗಿದೆ.”

Ravi Arehalli
Ravi Arehalli

ಕನ್ನಡ ಸಾಹಿತ್ಯ.ಕಾಂನ ಪ್ರಮುಖರು ಹಾಗೂ ಕೃಷಿ ಉದ್ಯಮಿಯಾದ ರವಿ ಅರೇಹಳ್ಳಿ ಹೇಳಿದ್ದು ಹೀಗೆ:

 

“ಅಂತರ್ಜಾಲವನ್ನು ಕನ್ನಡ ರಂಗಭೂಮಿ ಸರಿಯಾಗಿ ಬಳಸಿಕೊಂಡಿಲ್ಲ. ಎಲ್ಲೋ ರಂಗಶಂಕರದಂಥವರು ಪ್ರೋಗ್ರಾಂ ಲಿಸ್ಟ್ ಹಾಕಿರುತ್ತಾರೆ. ಆದರೆ, ಅನೇಕ ಸಾರಿ ಕಲಾಕ್ಷೇತ್ರ, ಎಡಿಎ ಮುಂತಾದ ಕಡೆ ಪ್ರದರ್ಶನವಾಗುವ ಪ್ರಮುಖ ನಾಟಕಗಳು ಮಿಸ್ ಆಗ್ಬಿಡುತ್ತೆ. ಇದಕ್ಕಾಗಿ ನಗರದಲ್ಲಿ ನಡೆಯುವ ಎಲ್ಲಾ ನಾಟಕಗಳ ಲಿಸ್ಟ್ ಒಂದೆಡೆ ಸಿಗುವಂತಾಗಬೇಕು. ಇನ್ನೊಂದು ಅಂದ್ರೆ ನಾಟಕರಂಗದ ಹಿರಿಯರ ವ್ಯಕ್ತಿ ಚಿತ್ರಗಳು ವೆಬ್‌ನಲ್ಲಿ ಸಿಗುವಂತಾಗಬೇಕು. ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಆರ್‌ಎನ್‌ಆರ್ ಕುಟುಂಬ, ಬಿವಿ ಕಾರಂತ, ನಟ ಲೋಕೇಶ್ ಹಾಗೂ ಅವರ ತಂದೆ ಸುಬ್ಬಯ್ಯ ನಾಯ್ಡು, ಹೀಗೆ ನಾಲ್ಕಾರು ಹೆಸರು ಬಿಟ್ಟರೆ ಉಳಿದವರ ಹೆಸರು ಹೇಳಲು ಕೂಡ ನೆನಪಾಗುವುದಿಲ್ಲ. ಇನ್ನು ಅವರ ಬಗ್ಗೆ ಯಾರಾದರೂ ಮಾಹಿತಿ ಕೇಳಿದರೆ ಹೇಳುವುದಾದರೂ ಹೇಗೆ? ಕಲಾಕ್ಷೇತ್ರ, ಸಂಸ ಬಯಲು ರಂಗಮಂದಿರಕ್ಕೆ ಸದಾ ವಿಸಿಟ್ ಕೊಡ್ತಾಯಿದ್ರು ‘ಸಂಸ’ ಯಾರು ಅಂದ್ರೆ ಹೇಳಲು ಕಷ್ಟಪಡುವಂತಾಗಬಾರದು. ಮುಖ್ಯ ಸಮಸ್ಯೆ ಏನೆಂದರೆ, ಮಾಹಿತಿ ಕೊರತೆ, ಐಟಿರಂಗದಲ್ಲಿದ್ದರೂ ರಂಗಭೂಮಿ ಬಗ್ಗೆ ಆಸಕ್ತಿಯಿರುವ ನಮ್ಮಂಥವರಿಗೆ ಸರಳವಾಗಿ ಆದರೂ ರಂಗ ಕಲಾವಿದರ ಪರಿಚಯಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಇದರಿಂದ ಯುವ ಜನತೆಗೆ ರಂಗಭೂಮಿ ಬಗ್ಗೆ ಈಗಿರುವ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು”

Mohd Rafi Ilakal
Mohd Rafi Ilakal

ಯುವ ಬರಹಗಾರ ಹಾಗೂ ಐಟಿ ಉದ್ಯೋಗಿ ಮಹಮದ್ ರಫೀಕ್ ಇಳಕಲ್ ಅವರ ಅನಿಸಿಕೆ:

 

“ಕನ್ನಡ ರಂಗಭೂಮಿ ಅಂಥಾ ನಾವೇನು ಕರೆಯುತ್ತಾ ಇದ್ದೀವಿ. ಅದು ಉತ್ತರ ಕರ್ನಾಟಕಕ್ಕೂ ಇಲ್ಲಿಗೂ ಭಾಳಾ ಫರಕ್ ಇದೆ. ನಗರ ಪ್ರದೇಶಕ್ಕೆ ಹವ್ಯಾಸಿ ರಂಗಭೂಮಿನೇ ಜೀವಾಳ ಆದ್ದರಿಂದ, ಅದರ ಬಗ್ಗೆ ಹೇಳ್ತೀನಿ. ಇಂಟರ್ನೆಟ್, ಬ್ಲಾಗ್ ಬಳಸಿ ಕಾರ್ಯಕ್ರಮಗಳ ವಿವರಗಳನ್ನು ಪ್ರಚಾರ ಮಾಡಿದ್ದೇವೆ. ಇದು ಯಾರ ಹುಕುಮತ್ತಿಲ್ಲದೆ ತಾನಾಗೆ ಮಾತಿಂದ ಮಾತಿಗೆ ಹರಡೋ ಹಾಗೆ ಮೇಲ್, ಚಾಟ್‌ನಲ್ಲಿ ನಡೆದು ಹೋಗುತ್ತೆ. ಆದರೆ, ನಾಟಕ ತಯಾರಿ ಮಾಡೋದು, ತಂಡವನ್ನು ಸಂಭಾಳಿಸೋದು ಆಮೇಲೆ ಪ್ರಚಾರ ಮಾಡೋದಿಕ್ಕೆ ಪ್ರತ್ಯೇಕವಾದ ಒಬ್ಬ ವ್ಯಕ್ತಿ ಅವಶ್ಯ ಬೇಕು. resource management ಅಥವಾ ಸಿನಿಮಾ ತಂಡಗಳಲ್ಲಿರುವಂತೆ production control ಮಾಡೊ ವ್ಯಕ್ತಿ ಬೇಕು. ಇದರಿಂದ ನಾಟಕಗಳ ಗುಣಮಟ್ಟ ಕಾಯ್ದುಕೊಳ್ಳಬಹುದು. ತಂಡದಲ್ಲಿ ಸಮತೋಲನ ಹೆಚ್ಚುತ್ತದೆ. ನಾಟಕ ಪ್ರಾಕ್ಟೀಸ್ ಬಿಟ್ಟು ಅರ್ಧಕ್ಕೆ ನಿಂತು ಹೋಗೋ ನಾಟಕಗಳನ್ನು ಉಳಿಸಿಕೊಳ್ಳಬಹುದು. ಪ್ರಮುಖವಾಗಿ ಐಟಿ ಜನರ ಜೊತೆ ಕೋ-ಆರ್ಡಿನೆಟ್ ಮಾಡುವ ಜಾಣ್ಮೆ ಇರಬೇಕು. ಇದರ ಜೊತೆಗೆ ಆತನಿಗೆ ಟೆಕ್ನಾಲಜಿ ಸ್ವಲ್ಪ ಪರಿಚಯ ಬೇಕಾಗುತ್ತದೆ. ಮುಖ್ಯವಾಗಿ ಪ್ರಚಾರ ಮಾಡುವ ರೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ. ವೆಬ್ ಬಳಕೆ ಮಾಡಿ ಜಾಹೀರಾತು ನೀಡುವುದು, ಮಾಸ್ ಮೇಲ್ ಕಳಿಸುವುದು, ಇಮೇಲ್ ಅಲರ್ಟ್, ಸೋಷಿಯಲ್ ಮೀಡಿಯಾ ಬಳಕೆ, ಎಸ್ಸೆಂಎಸ್ ಮೂಲಕ ಮಾಹಿತಿ ನೀಡುವುದು ಇದನ್ನೆಲ್ಲ ಸಂಭಾಳಿಸಿಕೊಂಡು ಹೋಗುವ ವ್ಯಕ್ತಿ ಅವಶ್ಯವಾಗಿ ಬೇಕು.”

Ravindra kalakshetra

ಪತ್ರಕರ್ತ ಹಾಗೂ ಕಲಾವಿದ ನಾರಾಯಣಸ್ವಾಮಿ ಅವರ ಅಭಿಪ್ರಾಯ:

Veera Narayana
Veera Narayana

“ಇಂಟರ್ ನೆಟ್ ರಂಗಭೂಮಿ ಚಟುವಟಿಕೆಗಳ ಪ್ರಚಾರಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಹೆಚ್ಚೆಚ್ಚು ಜನರಿಗೆ ತಲುಪಲು ಸಹಾಯಕವಾಗಿದೆ. ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಆಯಾ ದಿನದ ನಾಟಕ ಪ್ರದರ್ಶನದ ವಿವರಗಳು ಸಿಗುತ್ತವೆ. ರಂಗಶಂಕರದ ವೆಬ್‌ತಾಣದಲ್ಲಿರುವಂತೆ ಇಡೀ ತಿಂಗಳಿನ ಕಾರ್ಯಕ್ರಮ ವಿವರ ಸಿಗುವಂತಾಗಬೇಕು. ಅಲ್ಲದೆ ನಾಟಕ, ನಿರ್ದೇಶಕ, ತಾಂತಿಕವರ್ಗದ ಬಗ್ಗೆ ಸಂಕ್ಷಿಪ್ತ ವಿವರ ಇರಬೇಕಾದ್ದು ಅವಶ್ಯ. ರಂಗಶಂಕರದ ವೆಬ್‌ನಲ್ಲೂ ಈ ಕೊರತೆ ಕಾಣುತ್ತದೆ. ವಿಶೇಷವಾಗಿ ಕನ್ನಡ ನಾಟಕಗಳ ಬಗ್ಗೆ ಹೇಳುವುದಾದರೆ, ಹೊಸ ತಂಡಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಇಲ್ಲಿ ಸಮಸ್ಯೆ ಎಂದರೆ ನಾಟಕ ತಂಡಗಳಲ್ಲಿ technical supporters ಗಳಿರುವುದಿಲ್ಲ. ವೆಬ್‌ನಲ್ಲಿ ಪ್ರಚಾರ ಮಾಡಲು ಫಾಂಟ್ ಸಮಸ್ಯೆ ತಂತಜ್ಞಾನ ಬಗ್ಗೆ ಅಜ್ಞಾನ ಹೀಗೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಹಿರಿಯ ರಂಗಕರ್ಮಿಗಳಾಗಲಿ, ಹವ್ಯಾಸಿ ಕಲಾವಿದರಾಗಲಿ ಇಂಟರ್ ನೆಟ್, ಕಂಪ್ಯೂಟರ್ ಎಂದರೆ ದೂರವೇ ಉಳಿಯುತ್ತಾರೆ. ರಂಗಭೂಮಿ ಸಕ್ರಿಯರಾಗಿರುವವರು ಸ್ವಲ್ಪವಾದರೂ ಆಸಕ್ತಿ ತೋರಿದರೆ ರಂಗಾಸ್ತಕ ಐಟಿ ಜನರ ಸಹಾಯದಿಂದ ಹೆಚ್ಚಿನ ಉನ್ನತಿಯನ್ನು ಕಾಣಬಹುದು.

ವೆಬ್‌ನಲ್ಲಿ ಹಳೆ ನಾಟಕಗಳ ಕಲೆಕ್ಷನ್ ಇಡಬಹುದು. ಪ್ರತಿಭಾವಂತ ಕಲಾವಿದರ ವಿವರ ನೀಡಬಹುದು. ಕಾರ್ನಾಡ್, ಕಾರಂತರ ನಂತರದ ಪೀಳಿಗೆಯ ಪ್ರತಿಭಾವಂತರನ್ನು ಪರಿಚಯಿಸುವುದು ಅಗತ್ಯ. ನಾಟಕವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಅತ್ಯಮೂಲ್ಯ ಸಾಧನ. ನಾಟಕರಂಗದ ಇತಿಹಾಸ, ಬೆಳವಣಿಗೆ ಬಗ್ಗೆ ಪುಸ್ತಕಗಳು ಸಿಗುತ್ತವೆ. ಆದರೆ ಪೂರ್ಣ ದಾಖಲೆಗಳು ಸಿಗುವುದಿಲ್ಲ. ಅದೇ ಇಂಟರ್‌ನೆಟ್‌ನಲ್ಲಿ ರಾಷ್ಟ್ರೀಯ , ಅಂತಾರಾಷ್ಟ್ರೀಯ ಮಟ್ಟದ ರಂಗಭೂಮಿ ಬಗ್ಗೆ ವಿವರಗಳು ಸುಲಭವಾಗಿ ಸಿಗುತ್ತದೆ. ಫ್ರೆಂಚ್, ಆಂಗ್ಲ, ಜರ್ಮನ್ ಹೀಗೆ ಹಲವು ದೇಶಗಳ ರಂಗಭೂಮಿಗಳ ಪರಿಚಯ ಪ್ಲಸ್ ಸಾಂಸ್ಕೃತಿಕ ವಿನಿಮಯಕ್ಕೆ ನಾಂದಿ ಹಾಡಬಹುದು. ಪುಸ್ತಕಗಳನ್ನು ಅಪ್ಡೇಟ್ ಮಾಡಲು ಸಾಧ್ಯವಿಲ್ಲ. ಪುಸ್ತಕದಲ್ಲಿ ನಾಟಕಗಳ ಚಿತ್ರಗಳನ್ನು ನೋಡಬಹುದಾದರೆ, ಇಂಟರ್‌ನೆಟ್ ಮೂಲಕ ನಾಟಕಗಳನ್ನು ನೇರ ನೋಡಬಹುದು. ಅಧ್ಯಯನಶೀಲರಿಗೆ ಇದರಿಂದ ಪಾತ್ರಧಾರಿಗಳ ಪ್ರಸಾಧನ, ಹಾವ ಭಾವ, ರಂಗಸಜ್ಜಿಕೆ ಮುಂತಾದ ವಿಷಯಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಇಂಟರ್‌ನೆಟ್ ಥಿಯೇಟರ್ ನ globalise ಮಾಡಿಬಿಡುತ್ತೆ.”

Wemove ರಂಗತಂಡದ ರುವಾರಿ ಹಾಗೂ ಐಟಿ ತಜ್ಞ ಅಭಿಷೇಕ್ ಅಯ್ಯಂಗಾರ್ ಅಭಿಪ್ರಾಯ:

Wemove team-Abhishek
Wemove team-Abhishek Iyengar

“ಅಂತರ್ಜಾಲದಿಂದ ರಂಗಭೂಮಿಗೆ ಬಹಳಷ್ಟು ಉಪಯೋಗವಾಗಿದೆ. ಐಟಿರಂಗದ ರಂಗಾಸಕ್ತರನ್ನು ಸೆಳೆಯಲು ಇರುವ effectve media ಆಗಿ ಅಂತರ್ಜಾಲ ಬಳಕೆ ಆಗುತ್ತಿದೆ. ಯುವ ಜನಾಂಗ ಇತ್ತೀಚೆಗೆ ನಾಟಕ ನೋಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾ ಇದ್ದಾರೆ. ಇವರಲ್ಲಿ ಶೇ. 20 ಕ್ಕೂ ಹೆಚ್ಚಿನ ಮಂದಿ ಐಟಿ ರಂಗದ ಹಿನ್ನೆಲೆಯುಳ್ಳವರು ಎಂಬುದು ಗಮನಾರ್ಹ. ಆದರೆ, ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿಯಾಗಲಿ, ನಾಟಕ ಕಾರ್ಯಕ್ರಮಗಳ ವಿವರಗಳಾಗಲಿ ಸಿಗೋದು ಕಮ್ಮಿನೇ. ಅದಕ್ಕೆ ನಾವು social networking site ಗಳ ಮೂಲಕ ಪ್ರಚಾರ ಮಾಡುವ ಹೊಸ ಆಯಾಮವನ್ನು ಕಂಡುಕೊಂಡಿದ್ದೀವಿ. ಈಗ ನಮ್ಮ ನಾಟಕಗಳಲ್ಲದೆ, ಇತರೆ ನಾಟಕಗಳ ಬಗ್ಗೆ ಕೂಡ facebook event ಮೂಲಕ ಪ್ರಚಾರ ಆರಂಭಿಸಿದ್ದೀವಿ. ನಮ್ಮ ವೆಬ್ ಸೈಟ್ ಅಲ್ಲದೆ ಎರಡು ಮೂರು ಬ್ಲಾಗ್‌ಗಳನ್ನು ಆರಂಭಿಸಿ ನಾಟಕದ ಬಗ್ಗೆ ವಿವರಗಳು, ವಿಮರ್ಶೆಗಳನ್ನು ಹಾಕ್ತಾ ಇರ್ತೀವಿ. Promotion ಮಾಡೋಕೆ ತುಂಬಾ ವಿಧಾನಗಳಿವೆ ಅದರ ಬಳಕೆ ಮಾಡ್ಬೇಕು ಅಷ್ಟೆ. ಇದು cost effective ಅಷ್ಟೆ ಅಲ್ಲ easily accessible ಕೆಲವು ಐಟಿ ಕಂಪೆನಿಗಳಲ್ಲಿ social networking site ಬ್ಲಾಕ್ ಮಾಡಿರುತ್ತಾರೆ. ಅಂಥವರನ್ನು ಗುರುತಿಸಿ ಅವರಿಗೆ ಎಸ್ಸೆಂಎಸ್, ಇ ಮೇಲ್ ಮೂಲಕ ಮಾಹಿತಿ ರವಾನೆ ಮಾಡ್ತೀವಿ. ಒಟ್ಟಿನಲ್ಲಿ ಇಂಟರ್ ನೆಟ್ ಇರಲಿಲ್ಲ ಅಂದ್ರೆ ರಂಗಭೂಮಿ ಐಟಿಜನರನ್ನು ರೀಚ್ ಆಗೋಕೆ ಆಗ್ತಾನೆ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾಟಕ ಅಕಾಡೆಮಿ ಪ್ರತ್ಯೇಕ ವೆಬ್‌ತಾಣವನ್ನು ಹೊಂದುವುದು ಅಗತ್ಯ. ಈ ಬಗ್ಗೆ ಈಗಾಗಲೇ ಅಕಾಡೆಮಿಗೆ ಪ್ರಸ್ತಾಪಿಸಿ, ಪ್ರಯೋಜನವಾಗಿಲ್ಲ.”

ಸಮಾಜ ಸೇವಕರ ಸಮಿತಿ ರುವಾರಿ ಹಾಗೂ ಚಿತ್ರಕರ್ಮಿ ರಾಜ್ ಕುಮಾರ್: 

Rajkumar Holealur
Rajkumar Holealur

“ನಾಟಕಗಳು ಜನರಿಗೆ ಹೆಚ್ಚು ತಲುಪಬೇಕೆಂದರೆ ಮೊದಲು ಅವರಿಗೆ ಆಸಕ್ತಿ ಹುಟ್ಟಿಸಬೇಕು. ನಾಟಕಗಳ ಪ್ರೋಮೋಸ್ ಮಾಡಿ ವಿಡಿಯೋಗಳನ್ನು ಎಲ್ಲರಿಗೂ ಕಳಿಸಬಹುದು. ವೆಬ್‌ನಲ್ಲಿ ಕಲಾವಿದರ ಸ್ವ ವಿವರ, ನಾಟಕಗಳ ಬಗ್ಗೆ ಸಂಕ್ಷಿಪ್ತ ವಿವರ, ತಾಂತ್ರಿಕವರ್ಗ ಬಗ್ಗೆ ವಿವರ ಹಾಕಬಹುದು. ಆಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸಲು ಅಂತರ್ಜಾಲ ಬಲು ಉಪಯುಕ್ತ. ಚರ್ಚಾ ವೇದಿಕೆ ನಿರ್ಮಿಸಿ ನಟನೆ ಅಲ್ಲದೆ ನಾಟಕ ರಚನೆ, ಪ್ರಸಾಧನ, ರಂಗ ಸಂಗೀತ, ಬೆಳಕು, ಧ್ವನಿ, ರಂಗಸಜ್ಜಿಕೆ, ಪ್ರಚಾರ ಮುಂತಾದ ಅನೇಕ ವಿಷಯಗಳ ಕುರಿತು ನುರಿತ ತಜ್ಞರಿಂದ ಸಲಹೆ ಸೂಚನೆ, ಮಾರ್ಗದರ್ಶನ ನೀಡಬಹುದು. ಇದು ಆಡಿಯೋ, ವಿಡಿಯೋ ರೂಪದಲ್ಲೂ ಪ್ರಕಟಿಸಬಹುದು. ಆನ್ ಲೈನ್ ಹೆಲ್ಪ್ ಅಂಥಾ ಮಾಡಿಕೊಂಡು ಹೊಸ ತಂಡಗಳ ಬೆಳವಣಿಗೆಗೆ ಉತ್ತೇಜನ ನೀಡಬಹುದು.

ಪ್ರಚಾರ ಬಹುಮುಖ್ಯ. ಸಿನಿಮಾಗಳಿಗೆ ಪ್ರಚಾರ ಮಾಡೊ ರೀತಿ ನಾಟಕವನ್ನು ಪ್ರಮೋಟ್ ಮಾಡ್ಬೇಕು. ಕೊನೆಪಕ್ಷ ಪ್ರಮುಖ ನಾಟಕ ಪ್ರದರ್ಶನಕ್ಕಾದರೂ ಫ್ಲೆಕ್ಸ್ ಬ್ಯಾನರ್ ಹಾಕಿಸಬೇಕು. ಈಗೆಲ್ಲಾ ಸೀರಿಯಲ್‌ನವರೂ ಕೂಡ ಭಿತ್ತಿಚಿತ್ರಗಳನ್ನು ಅಂಟಿಸಿ ಪ್ರಚಾರಕ್ಕಿಳಿದಿದ್ದಾರೆ. ಆ ರೀತಿ ಸಾಧ್ಯತೆಯನ್ನು ಕಂಡುಕೊಳ್ಳಬೇಕು. ವೆಬ್‌ನಲ್ಲಿ ಸಾಧ್ಯವಿರುವ ಎಲ್ಲಾ ಮಾರ್ಗಗಳ ಬಳಕೆಯಿಂದ ಮಾಹಿತಿ ಹಂಚಬೇಕು. ‘ವಠಾರದಲ್ಲೊಂದು ನಾಟಕ’, ‘ಪ್ರತಿ ಶಾಲೆಗಳಲ್ಲಿ ನಾಟಕ’ ಹೀಗೆ ಎಲ್ಲಿ ಜನರನ್ನು ತಲುಪಲು ಆಗುತ್ತಿಲ್ಲವೋ ಆಲ್ಲಿಗೆ ನಾಟಕವನ್ನೇ ಕೊಂಡೊಯ್ಯಬೇಕು. ಮುಖ್ಯವಾಗಿ ಶಾಲಾ ಕಾಲೇಜುಗಳಲ್ಲಿ ನಾಟಕವನ್ನು ಬೆಳಸಬೇಕು. ತಂತಜ್ಞಾನ ಬಳಕೆಯಲ್ಲಿ ಮಾಡಿ ಹೊಸ ರೀತಿಯ ಜಾಹೀರಾತುಗಳನ್ನು ಸೃಷ್ಟಿಸಬಹುದು. ಎಲ್ಲಾ ಟಿವಿಗಳಲ್ಲಿ, ಕನ್ನಡ ವೆಬ್‌ತಾಣಗಳಲ್ಲಿ ಜಾಹೀರಾತು ನೀಡಬಹುದು. ಕನ್ನಡ ನಾಟಕಗಳ ಪ್ರೋಮೊಗಳನ್ನು ಹಾಕಿಸಬಹುದು. ಟಿವಿಗಳಲ್ಲಿ ನಾಟಕಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುವಂತೆೆ ಕೋರಬಹುದು.

ಯುವಕರನ್ನು ರಂಗಭೂಮಿಯತ್ತ ಆಕರ್ಷಿಸುವ ಮೂಲಕ ವೆಬ್ ಪ್ರಪಂಚದಲ್ಲೂ ರಂಗ ಚಟುವಟಿಕೆಗಳು ಹರಿದಾಡುವಂತೆ ಮಾಡಬಹುದು. ಮಕ್ಕಳ ರಂಗಭೂಮಿ ಇಂದು ನಿಂತ ನೀರಾಗಿದೆ. ಶಾಲೆಗಳಿಗೆ ನಾಟಕಗಳನ್ನು ಕೊಂಡೊಯ್ಯಬೇಕು. ಮಕ್ಕಳಿಗೆ ಆಸಕ್ತಿ ಹುಟ್ಟಲು ನಾಟಕದ ಕ್ಲಿಪಿಂಗ್ಸ್, ಪ್ರೋಮ್ರೋಸ್ ತೋರಿಸಬಹುದು. ಯುವ ನಾಟಕ ತಂಡಗಳಿಗೆ ಅಕಾಡೆಮಿಯಿಂದ ಪ್ರೋತ್ಸಾಹ ಅಗತ್ಯ.”

ಮುಗಿಸುವ ಮುನ್ನ:

ಒಟ್ಟಾರೆಯಾಗಿ ಹೇಳಬಹುದೆಂದರೆ ಅಂತರ್ಜಾಲ ಹಾಗೂ ರಂಗಭೂಮಿ ಬೆಸುಗೆಯ ಬಗ್ಗೆ ರಂಗಾಸಕ್ತರ ಅಭಿಪ್ರಾಯ ಸಂಗ್ರಹ ಮಾಡಲು ಕಾರಣವಿದೆ. ಒಂದು ನಾಟಕರಂಗದ ಬಗ್ಗೆ ಅವರಿಗಿರುವ ಕಾಳಜಿ, ಇನ್ನೊಂದು ಅಭಿಪ್ರಾಯ ಮಂಡನೆ ಮೂಲಕ ತಾಂತ್ರಿಕವಾಗಿ ರಂಗಭೂಮಿ ಸುಧಾರಣೆಗಾಗಿ ಒಂದಿಷ್ಟು ಬೇಡಿಕೆಗಳನ್ನು ಈ ಮೂಲಕ ಸಂಬಂಧಪಟ್ಟವರ ಕಿವಿಗೆ ಬೀಳುವಂತೆ ಮಾಡುವುದು. ರಂಗಕಲಾವಿದರು ಹಾಗೂ ರಂಗಾಸಕ್ತ ಐಟಿ ಜನರ ನಡುವೆ ಸಂಪರ್ಕಜಾಲ ರಚಿಸುವುದು ಅಗತ್ಯ ಎನಿಸುತ್ತದೆ.

A Scene From Purahara Kannada Play
A Scene From Purahara Kannada Play by Karanam Pavan Prasad

ಕೊನೆಯದಾಗಿ ಗಮನಿಸಲೇಬೇಕಾದ ಕೆಲ ವಿಷಯಗಳು ಇಂತಿವೆ.

  • ಅಂತರ್ಜಾಲದ ಮೂಲಕ ರಂಗಭೂಮಿ ಚಟುವಟಿಕೆಗಳ ಪ್ರಚಾರ ಕಾರ್ಯ ಇನ್ನೂ ಸಾಕಷ್ಟು ಆಗಬೇಕಿದೆ.
  • ನಾಟಕ ಅಕಾಡೆಮಿಗೆ ಒಂದು ಪ್ರತ್ಯೇಕ ವೆಬ್ ತಾಣದ ಅವಶ್ಯಕತೆಯಿದೆ. ಇದರ ನಿರ್ಮಾಣದಿಂದ ಮೇಲ್ಕಂಡ ರಂಗಾಸ್ತಕ ಎಲ್ಲಾ ಬೇಡಿಕೆಗಳು ಪೂರೈಸಲು ಸಾಧ್ಯ.
  • ನಾಟಕರಂಗದ ಹಿರಿಯರ ವ್ಯಕ್ತಿಚಿತ್ರಣ, ಸಾಕ್ಷ್ಯಚಿತ್ರ, ದೃಶ್ಯ ಹಾಗೂ ಶ್ರವ್ಯ ರೂಪದಲ್ಲಿ ನಾಟಕಗಳ ಶೇಖರಣೆ. ಮಾಹಿತಿ ಸಂಗ್ರಹ ಹಾಗೂ ಸ್ಥಾಪನೆ ಅಗತ್ಯವಿದೆ.
  • ನಾಟಕದ ಪ್ರಚಾರಕ್ಕಾಗಿ ಪ್ರತ್ಯೇಕ ವಿಂಗ್ ರಚನೆ. ರಂಗ ಕಲಾವಿದರ ಜೊತೆಗೆ ಐಟಿರಂಗದವರನ್ನು ತಾಂತ್ರಿಕ ಸಲಹೆಗಾರರಾಗಿ ಸೇರಿಸಿಕೊಳ್ಳುವುದು.
  • ಹವ್ಯಾಸಿ ರಂಗಭೂಮಿ ಉದ್ಧಾರದ ಜೊತೆಗೆ, ವೃತ್ತಿರಂಗಭೂಮಿಯ ಬಗ್ಗೆ ಯೋಚಿಸುವುದು ಅವಶ್ಯ.
  • ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಟಿರಂಗದಲ್ಲಿನ ಟೆಕ್ಕಿಗಳಿಗಾಗೇ ‘ವೀಕೆಂಡ್ ನಾಟಕ’ ಎಂದು ಏರ್ಪಡಿಸಬಹುದು. ಇದರಿಂದ ತಾಂತ್ರಿಕ ಸಹಾಯ, ಪ್ರಚಾರ ಕೊರತೆಯ ಸಮಸ್ಯೆ ನಿವಾರಣೆ ಆಗುತ್ತದೆ. ಅಲ್ಲದೆ ಹೊಸಬರನ್ನು ರಂಗಕ್ಕೆ ಪರಿಚಯಿಸಿದ್ದಂತಾಗುತ್ತದೆ.
  • ವೆಬ್‌ನಲ್ಲಿ ನಾಟಕಗಳ ವಿಡಿಯೋಗಳ ಪ್ರಸಾರ ಜೊತೆಗೆ subtitle ನೀಡಿದರೆ ಅನ್ಯರಾಜ್ಯದ ರಂಗಾಸ್ತಕರನ್ನು ಸೆಳೆಯಬಹುದು.
  • ವಿವಿಧ ವೆಬ್ ಸೈಟ್‌ ಮೂಲಕ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ನೀಡಬಹುದು. ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಐಟಿ ಜನರಿಗೆ ಹೇಳಿ ಮಾಡಿಸಿದ ವಿಧಾನ. ಟಿಕೆಟ್ ಜೊತೆಗೆ ರಂಗಮಂದಿರಗಳ ಬುಕ್ಕಿಂಗ್ ಕೂಡ ಆನ್‌ಲೈನ್ ಮೂಲಕ ಮಾಡಲು ಅವಕಾಶವಿರಬೇಕು.
  • ಈಗಾಗಲೇ ಕೆಲವು ಆಸಕ್ತ ಐಟಿಜನ ವೆಬ್‌ಲೋಕದಲ್ಲಿ ರಂಗಭೂಮಿ ಚಟುವಟಿಕೆ ಬಗ್ಗೆ ಬ್ಲಾಗ್, ಫೋರಂ(ಚರ್ಚಾ ವೇದಿಕೆ)ಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹವರನ್ನು ಗುರುತಿಸಿ, ಸೂಕ್ತವಾದ ಸಂಪರ್ಕ ಜಾಲ ಹೊಂದುವುದು ಅಗತ್ಯ.
  • ಐಟಿ ರಂಗದವರು ಬಂದು ತಾಂತ್ರಿಕ ಸಹಾಯ ನೀಡಿ ರಂಗಭೂಮಿ ಬೆಳೆಸುವುದಕ್ಕಿಂತ ಮುಖ್ಯವಾಗಿ ರಂಗ ಕಲಾವಿದರು ಬಿಡುವಿನ ವೇಳೆಯಲ್ಲಿ ಇಂಟರ್‌ನೆಟ್, ವೆಬ್‌ಸೈಟ್‌ಗಳ ಪರಿಚಯ ಪಡೆದುಕೊಂಡರೆ ಒಳಿತು.
  • ವೆಬ್ ಲೋಕದಲ್ಲಿ ಇತ್ತೀಚೆಗೆ ಧಾರ್ಮಿಕ ಹಾಗೂ ಸಮುದಾಯ ತಾಣಗಳು ಹೆಚ್ಚುತ್ತಿದೆ. ಇವರುಗಳನ್ನು ಆಕರ್ಷಿಸಲು ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಆಗಾಗ್ಗೆ ಪ್ರದರ್ಶಿಸಬಹುದು.
  • ‘ನಾಟಕ ಆನ್ ಡಿಮ್ಯಾಂಡ್’ ಎಂಬ ಪರಿಕಲ್ಪನೆ ತರಬಹುದು. ಇದರಿಂದ ಪ್ರಸಿದ್ಧ ನಾಟಕಗಳನ್ನು ಆನ್ ಲೈನ್ ಮೂಲಕ ಪ್ರೇಕ್ಷಕರು ಕೋರಿಕೊಳ್ಳುವ ವ್ಯವಸ್ಥೆ ಕಲ್ಪಿಸಬಹುದು.

ಒಟ್ಟಿನಲ್ಲಿ ಐಟಿ ಜನರಿಗೆ ಇಂದು ನಾಟಕ ಎಂದರೆ ಮನಸ್ಸಿಗೆ ಉಲ್ಲಾಸ ಮೂಡಿಸುವ ವಿಷಯವಾಗಿದೆ. ಈ ಉಲ್ಲಾಸದಾಯಕ ವಿಷಯವನ್ನು ದಿನನಿತ್ಯ ಜಾಲಾಡುವ ವೆಬ್ ಲೋಕಕ್ಕೆ ಪರಿಚಯಿಸುವುದು, ಬೆಳೆಸುವುದು ಅಗತ್ಯವಾಗಿ ಮಾಡಬೇಕಾದ ಕೆಲಸ. ರಂಗಭೂಮಿ ಏಳಿಗೆಗೆ ಸಹೃದಯ ರಂಗಾಸಕ್ತರೆಲ್ಲರೂ ಬದ್ಧ ಎಂಬ ಆಶಯದೊಂದಿಗೆ ಹೇಳುತ್ತೇನೆ

“ಸಿರಿ ನಾಟಕರಂಗಂ ಗೆಲ್ಗೆ, ಸಿರಿ ನಾಟಕರಂಗಂ ವೆಬ್ಗೆ, ಸಿರಿ ನಾಟಕರಂಗಂ ನಮಗೊಪ್ಗೆ”

ವಂದನೆಗಳು,

-ಮಹೇಶ್ ಮಲ್ನಾಡ್

Leave a Reply

Your email address will not be published. Required fields are marked *