ಕನ್ನಡತಾಯ್ಮಕ್ಕಳಂ ರಸಕಾವೇರಿಯೊಳ್
ಮೀಯಿಸಲ್ ಬರೆದಿಹೆನ್
ಈ ನವಗನ್ನಡ ಮಹಾಗದ್ಯಮಂ.
ಭೂತ ಭಾರಮಂ ದಾಂಟಿ ದೃಷ್ಟಿಸೀಮೆಯಂ
ಮೀಂಟಿದ ಧೀರಗಂಭೀರ ಸಂಪುಟಮಂ.
ಪಳಗನ್ನಡದ ಪದ ಪೆಂಪಿರಲ್
ಕಥಾಸಾರಮಿಹುದು ಸದ್ಯಕ್ಕನ್ನುಡಿಯೊಳ್;
ಪಳಗನ್ನಡ ‘ಪೂ’ ತಾರೆಯಂತೆ
ಕಾಣ್ಪುದೀ ಗದ್ಯಚಪ್ಪರದಾಗಸದೊಳ್.
ಕಥಾಶ್ರಯಕ್ಕೋಸುಗ ನೆಚ್ಚಿದೆನ್
ಗಂಗ – ಚಾಲುಕ್ಯ ಕಾಲಮಂ,
ನೆಲ – ಮನುಜ ಮನೋವ್ಯಾಪಾರಮಂ.
ವಾಗರ್ಥಕ್ಕಿಹುದೇ ದೇಶಕಾಲ ಬಂಧ-ಬೇಗುದಿಗಳ್?
ಕದಕಂದಕ – ಕಡಲ್ ಮಿತಿಯೇ ಗರುಡಂಗೆ?
ಕನ್ನಡದ ಪೂರ್ವಸೂರಿಗಳ್
ಕಿರುಬೆರಳ್ ನೀಡಿ ಎನ್ನಂ ನಡೆಸಲಿ
ಕರ್ನಾಟ ಗಿರಿಗೆ, ನುಡಿದೈವದ ಗುಡಿಗೆ!
-ಬೆಂಪೂರ ಮಾರ್ಗಂ
ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯ ಹೊಸ ಪ್ರಕಟಣೆ ‘ಬೆಂಪೂರ ಮಾರ್ಗಂ’ – ಕರಣಂ ಪವನ್ ಪ್ರಸಾದ್ ಸೃಜಿಸಿರುವ ಮಹಾಗದ್ಯ ಲೋಕಾರ್ಪಣೆಗೊಂಡು ಎಲ್ಲೆಡೆ ಖರೀದಿಗೆ ಲಭ್ಯವಿದೆ. ಕೃತಿಯನ್ನು ನಿಮ್ಮದಾಗಿಸಿಕೊಳ್ಳಲು ಸಂಪರ್ಕಿಸಿ: +9199025 90303.

“ಪ್ರಸ್ತುತ ಕೃತಿಯಲ್ಲಿ ಸೃಷ್ಟಿಸಲಾಗಿರುವ ಗಪದ್ಯ, ಮಹೋಪಮೆ ಸಹಿತ ಅಲಂಕಾರಗಳು ಮಹಾಕಾವ್ಯಗಳಿಂದ ಆವಿಗೊಂಡು ಇಲ್ಲಿ ಘನೀಭವಗೊಂಡಂಥವು, ಚಾರಿತ್ರಿಕ ಸತ್ಯವು ಕಾಲದಲ್ಲಿ ಮಾಗಿ ದಿವ್ಯಾರ್ಥವಾಗಿ ಹೊರಹೊಮ್ಮುಬೇಕೆ ಹೊರತು ಯಥಾರ್ಥತೆ ಮಾತ್ರದಿಂದಲ್ಲ, ಮಹಾಕಾವ್ಯ ಆ ದಿವ್ಯಾನುಭವ ದಾಟಿಸಬಲ್ಲದು, ಆದರೆ ಕಾದಂಬರಿ ಪ್ರಕಾರವು ಯಥಾರ್ಥ ಪ್ರಿಯವಾದ್ದು, ಗದ್ಯದ ಈ ಮಿತಿಯನ್ನು ದಾಟಲು ಇವೆರೆಡೂ ಪ್ರಕಾರವನ್ನು ಸಮನ್ವಯಿಸಿಕೊಂಡು ‘ಮಹಾಗದ್ಯ’ ಪ್ರಕಾರವನ್ನು ಕಂಡುಕೊಳ್ಳಲಾಗಿದೆ.
ಇದೊಂದು ಹೊಸ ಪ್ರಕಾರದ ಕೃತಿಯಾಗಿದ್ದು, ಗದ್ಯ ಹಾಗೂ ಪದ್ಯ ಬೆರೆತ ಕನ್ನಡ ನುಡಿಯನ್ನು ಸೇರಿಸಿಕೊಂಡು ಉದ್ಭವಿಸಿರುವ ಹೊಸ ಕನ್ನುಡಿಯ ಪ್ರಕಾರದಲ್ಲಿ ಮೂಡಿ ಬಂದಿದೆ ಎನ್ನಬಹುದು. ಈ ಕೃತಿಯನ್ನು ಓದಿ ಓದುಗರು ನೀಡಿರುವ ಅನಿಸಿಕೆ, ಅಭಿಪ್ರಾಯ, ವಿಮರ್ಶೆ, ಪ್ರತಿಕ್ರಿಯೆ, ಸಂದರ್ಶನಗಳ ಸಂಗ್ರಹವನ್ನು ಈ ಪುಟದಲ್ಲಿ ಕಾಣಬಹುದು.
*****
1.
ಭಲಾಭಲ “ಬೆಂಪೂರ ಮಾರ್ಗಂ”
-ಕೃಷ್ಣಪ್ರಕಾಶ ಉಳಿತ್ತಾಯ
ಕಾದಂಬರಿಕಾರ ಕಾರಣಂ ಪವನ್ ಪ್ರಸಾದ್ ಅವರ ಹೊಸ ಕಾದಂಬರಿ ‘ಬೆಂಪೂರ ಮಾರ್ಗಂ’ ಓದಿ ಆಸ್ವಾದಿಸಿ ಬರೆದ ಅಭಿಪ್ರಾಯವಿದು. ಚಾಲುಕ್ಯ ಸಾಮ್ರಾಜ್ಯದ, ವಿಶೇಷವಾಗಿ ಎರಡನೆಯ ಪುಲಕೇಶಿಯ ಕಾಲವನ್ನು ಕೇಂದ್ರವಾಗಿಸಿಕೊಂಡು, ಆತನ ಕಿರಿಯ ಪುತ್ರ ವಿಕ್ರಮಾದಿತ್ಯನ ಕಾಲದವರೆಗೂ ವಿಸ್ತರಿಸುವ ಸುದೀರ್ಘ ಇತಿವೃತ್ತವನ್ನು ಈ ಕೃತಿ ಹೊಂದಿದೆ.
‘ಬೆಂಪೂರ ಮಾರ್ಗಂ’ ಕೇವಲ ರಾಜರು ಮತ್ತು ಸಾಮ್ರಾಜ್ಯಗಳ ಕಥೆಯಲ್ಲ. ಅಂದಿನ ಜನಜೀವನ, ಸಾಮಾಜಿಕ ರೀತಿನೀತಿ, ಸಂಸ್ಕೃತಿ, ಯುದ್ಧನೀತಿ ಮತ್ತು ಯುದ್ಧಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ, ಧರ್ಮ, ಲೋಕಾಚಾರ, ಕುಲಾಚಾರ ಹಾಗೂ ವಿವಿಧ ಸಾಂಸ್ಕೃತಿಕ ಆಯಾಮಗಳನ್ನು ಹಿನ್ನೆಲೆಯಾಗಿರಿಸಿಕೊಂಡ ಸೃಜನಶೀಲ ಕೃತಿಯಿದು. ಆ ಕಾಲಘಟ್ಟದಲ್ಲಿ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಸಂಭವಿಸುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳೂ ಕಾದಂಬರಿಯ ವಿಶಾಲ ಹಿನ್ನೆಲೆಯಾಗಿ ಮೂಡಿಬರುತ್ತವೆ. ಅರೇಬಿಯಾ ಮತ್ತು ಪರ್ಷಿಯಾದ ರಾಜಕೀಯ, ಧಾರ್ಮಿಕ ತಲ್ಲಣಗಳನ್ನೂ ಈ ಕಾದಂಬರಿ ಕೊಂಚ ಮಟ್ಟಿಗೆ ಆನುಷಂಗಿಕವಾಗಿ ಒಳಗೊಳ್ಳುತ್ತದೆ.
ವಿಶೇಷವಾಗಿ, ಉತ್ತರ ಭಾರತದ ಚಕ್ರವರ್ತಿ ಶೀಲಾದಿತ್ಯ ಹರ್ಷವರ್ಧನ ಮತ್ತು ದಕ್ಷಿಣಾಪಥೇಷ್ವರ ಸತ್ಯಾಶ್ರಯ ಎರಡನೆಯ ಪುಲಕೇಶಿಯ ನಡುವಿನ ಸಂಘರ್ಷ, ನರ್ಮದಾ ಅಥವಾ ರೇವಾ ನದಿಯ ತೀರದಲ್ಲಿ ನಡೆದ ಐತಿಹಾಸಿಕ ಮುಖಾಮುಖಿ; ದಕ್ಷಿಣದ ಪಲ್ಲವರೊಡನೆ ಚಾಲುಕ್ಯರು ನಡೆಸಿದ ಕಾಂಚಿ ಕಾಳಗ, ಪಲ್ಲವರಿಂದ ವಾತಾಪಿಗೆ ನಡೆದ ದಾಳಿ ಮತ್ತು ಅದರಿಂದ ಉಂಟಾದ ಹಾನಿ ಮುಂತಾದ ಘಟನೆಗಳು ಈ ಕಾದಂಬರಿಯ ಚಾರಿತ್ರಿಕ ನೆಲೆಯನ್ನು ರೂಪಿಸುತ್ತವೆ. ಈ ಇತಿಹಾಸದ ಚೌಕಟ್ಟಿನೊಳಗೆ ಅಂದಿನ ಬದುಕಿನ ಸಾಮಾಜಿಕ ಮಜಲುಗಳನ್ನು ಸೃಜನಶೀಲ ಕಲ್ಪನೆಯೊಂದಿಗೆ ಬೆಸೆದು, ಆ ಕಾಲಘಟ್ಟವನ್ನೇ ನಮ್ಮ ಮುಂದೆ ಪುನರ್ನಿರ್ಮಿಸಿ ಅಪೂರ್ವ ನಾಟ್ಯಾಯಮಾನತೆಯನ್ನು ‘ಬೆಂಪೂರ ಮಾರ್ಗಂ’ ತೋರಿಸಿಕೊಟ್ಟಿದೆ.
‘ಬೆಂಪೂರ ಮಾರ್ಗಂ’ ಕಾದಂಬರಿಯ ಮೊದಲ ಮಜಲು ಎರಡನೆಯ ಪುಲಕೇಶಿ ಮತ್ತು ಗಂಗರಸರ ಅಧೀನದ ಬೆಂಪೂರಿನ ಊರ ಗೌಡ ಗಂಗಮಲ್ಲ ಗಾವುಂಡ ಇವರ ಸುತ್ತ ಹೆಣೆಯಲ್ಪಟ್ಟಿದೆ. ಗಂಗರು ಚಾಲುಕ್ಯರ ಸಾಮಂತರಾಗಿದ್ದು, ಎರಡೂ ರಾಜಮನೆತನಗಳ ನಡುವೆ ವೈವಾಹಿಕ ಸಂಬಂಧವೂ ಇತ್ತು. ಹರ್ಷವರ್ಧನನು ದಕ್ಷಿಣದ ಕಡೆಗೆ ದಿಗ್ವಿಜಯಕ್ಕೆ ಹೊರಟ ಸಂದರ್ಭದಲ್ಲಿ ನರ್ಮದಾ ಅಥವಾ ರೇವಾ ನದಿಯ ತೀರದಲ್ಲಿ ಚಾಲುಕ್ಯರ ಪರವಾಗಿ ಗಂಗರು ತಮ್ಮ ಸೈನ್ಯವನ್ನು ಕಳುಹಿಸುತ್ತಾರೆ. ಆ ದಂಡಿನಲ್ಲಿ ಬೆಂಪೂರಿನ ಸೈನ್ಯವೂ ಸೇರಿದ್ದು, ಅದರ ನಾಯಕತ್ವವನ್ನು ಗಂಗಮಲ್ಲ ಗಾವುಂಡ ವಹಿಸುತ್ತಾನೆ.
ಈ ಹಿನ್ನೆಲೆಯಲ್ಲಿಯೇ ಬೆಂಪೂರಿನಿಂದ ರೇವಾ ನದಿಯವರೆಗೆ ಸಾಗುವ ದಂಡಿನ ಪಯಣ, ಅದರೊಳಗಿನ ಯುದ್ಧಸನ್ನಿವೇಶಗಳು, ಸೈನಿಕರ ಬದುಕು, ಸಾಹಸ ಮತ್ತು ಸಂಘರ್ಷಗಳನ್ನು ಲೇಖಕರು ಕಾವ್ಯಾತ್ಮಕ ಹಾಗೂ ರಸಾರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಕಾದಂಬರಿಯ ಮೊದಲ ಭಾಗದಲ್ಲಿ ವೀರರಸ ಮತ್ತು ಕ್ಷಾತ್ರತೇಜಸ್ಸು ಪ್ರಧಾನವಾಗಿ ಅಭಿವ್ಯಕ್ತವಾಗುತ್ತದೆ. ಯುದ್ಧ ಮಾತ್ರವಲ್ಲದೆ, ಸೈನಿಕರ ಆಹಾರಕ್ರಮ, ಜೀವನಶೈಲಿ ಮತ್ತು ಅಂದಿನ ಸಾಮಾಜಿಕ ಪರಿಸರವನ್ನೂ ಲೇಖಕರು ಅಧ್ಯಯನಪೂರ್ವಕವಾಗಿ ಕಥೆಯೊಳಗೆ ಸಹಜವಾಗಿ ಬೆಸೆದಿದ್ದಾರೆ.
ಕಾದಂಬರಿಯ ಎರಡನೆಯ ಭಾಗದಲ್ಲಿ ಕಥೆಯ ಕೇಂದ್ರ ವಿಕ್ರಮಾದಿತ್ಯನ ಕಡೆಗೆ ಸರಿಯುತ್ತದೆ. ಪುಲಕೇಶಿಯ ಕಿರಿಯ ಪುತ್ರನಾದ ವಿಕ್ರಮಾದಿತ್ಯನ ಜೊತೆಗೆ ಗಂಗಮಲ್ಲ ಗಾವುಂಡನ ಪುತ್ರ ಸ್ಮರಣ ಸತ್ಯವಾಕ್ಯನ ಬದುಕೂ ಸಮಾನಾಂತರವಾಗಿ ಸಾಗುತ್ತದೆ. ಚಂದ್ರಾದಿತ್ಯ ಮತ್ತು ವಿಜಯಾಂಬೆ ಮೊದಲಾದ ಪಾತ್ರಗಳೂ ಈ ಭಾಗದ ಕಥಾವಿಸ್ತಾರಕ್ಕೆ ಮಹತ್ವದ ಆಯಾಮವನ್ನು ನೀಡುತ್ತವೆ. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ವಿದ್ವತ್ತನ್ನು ಹೊಂದಿರುವ ವಿಜಯಾಂಬೆಯ ಅಥವ ವಿಜ್ಜಿಕೆಯು ಕೆಲಕಾಲ ಚಾಲುಕ್ಯಾಧಿಪತ್ಯವನ್ನು ವಹಿಸಿದ ಇತಿಹಾಸದ ಎಳೆಯನ್ನೂ ಇಲ್ಲಿತಂದಿದ್ದಾರೆ. ಆ ಮೂಲಕ ಅಂದಿನ ಸ್ತ್ರೀಶಕ್ತಿ, ವಿದ್ವತ್ತು ಮತ್ತು ಆಡಳಿತದ ಸಾಮರ್ಥ್ಯವೂ ಕಾದಂಬರಿಯಲ್ಲಿ ಮೂಡಿಬರುತ್ತದೆ.
ಹೀಗೆ ಪುಲಕೇಶಿ–ಗಂಗಮಲ್ಲ ಗಾವುಂಡ ಮತ್ತು ವಿಕ್ರಮಾದಿತ್ಯ–ಸ್ಮರಣ ಸತ್ಯವಾಕ್ಯ ಎಂಬ ಎರಡು ಜೋಡಿಗಳ ಮೂಲಕ ಕಾದಂಬರಿಯ ಎರಡು ಮಜಲುಗಳು ರೂಪುಗೊಳ್ಳುತ್ತವೆ. ಮೊದಲ ಭಾಗದ ಉಜ್ವಲ ವೀರರಸವು ಕ್ರಮೇಣ ಎರಡನೆಯ ಭಾಗದಲ್ಲಿ ಪಾಕಗೊಳ್ಳುತ್ತಾ, ಒಂದು ರೀತಿಯ ವೀರರಸದ ಹಿನ್ನೆಲೆಯಲ್ಲೇ ಉಪಶಾಂತಿಯ ಅನುಭವದ ಕಡೆಗೆ ಕರೆದೊಯ್ಯುತ್ತದೆ. ರೇವಾನದಿ ತೀರದ ‘ಮುಹೂರ್ತ ದಾಳಿ’ ಯ ಸಂದರ್ಭದ ಪೊಲೆತಾಳ್ವ ಮತ್ತು ಗಂಗಮಲ್ಲರ ಧೀರತನದಿಂದ ಕೂಡಿದ ಯುದ್ಧವಿವರವಂತೂ ರಸಾರ್ದವಾಗಿ ವೀರರಸದ ಪೌರುಷ ಭಾವವನ್ನು ಉಕ್ಕಿಸಿಬಿಡುತ್ತದೆ. ಕಾದಂಬರಿಯಾದ್ಯಂತ ಉಸಿರಾಡುವುದು ವೀರರಸ. ಪ್ರಭಂದ ಧ್ವನಿ ಪೌರುಷ.
ಕಾದಂಬರಿಯ ಮತ್ತೊಂದು ಪ್ರಮುಖ ಆಯಾಮ ಅಂದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯ. ಬೌದ್ಧ, ಜೈನ, ಭಾಗವತ, ವೈಷ್ಣವ, ಶೈವ ಹಾಗೂ ಕಾಳಾಮುಖ ಶೈವ ಪರಂಪರೆಗಳು ಸಮಾಜ ಮತ್ತು ರಾಜಕೀಯದ ಮೇಲೆ ಬೀರುತ್ತಿದ್ದ ಪ್ರಭಾವವನ್ನು ಕೃತಿ ಸೂಕ್ಷ್ಮವಾಗಿ ದಾಖಲಿಸುತ್ತದೆ. ವಿವಿಧ ಮತಪಂಥಗಳ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದ್ದ ಚಾಲುಕ್ಯರ ದೃಷ್ಟಿಕೋನವೂ ಇಲ್ಲಿ ಗಮನಾರ್ಹವಾಗಿ ಮೂಡಿಬಂದಿದೆ.
ಈ ಎಲ್ಲ ವಿವರಗಳ ಹಿಂದೆ ಲೇಖಕರ ಗಂಭೀರ ಚಾರಿತ್ರಿಕ ಅಧ್ಯಯನವಿದೆ. ಶಾಸನಗಳು, ಚಾರಿತ್ರಿಕ ಕೃತಿಗಳು ಮತ್ತು ಇತರ ಆಕರಗಳ ನೆರವಿನಿಂದ ಅಂದಿನ ಸಾಮಾಜಿಕ ಬದುಕನ್ನು ಪುನರ್ನಿರ್ಮಿಸುವ ಪ್ರಯತ್ನವನ್ನು ಕಲಾತ್ಮಕವಾಗಿ ಅವರು ಮಾಡಿದ್ದಾರೆ. ಕಾದಂಬರಿಯ ಕೊನೆಯಲ್ಲಿ ನೀಡಿರುವ ಆಕರಗಳ ಪಟ್ಟಿ ಅವರ ಅಧ್ಯಯನದ ವ್ಯಾಪ್ತಿಯನ್ನು ಸೂಚಿಸುತ್ತದೆ. ಇವು ಸೃಜನಶೀಲ ಕಲ್ಪನೆಯ ಮೂಲಕ ಕಥೆಯ ಜೀವಂತ ಭಾಗಗಳಾಗುತ್ತವೆ.
ಬೆಂಪೂರಿನಿಂದ ರೇವಾ ನದಿಯವರೆಗೆ ಸಾಗುವ ದಂಡಿನ ಮಾರ್ಗದ ನೆಪದಲ್ಲಿ ಒಂದು ಕಾಲಘಟ್ಟದ ಯುದ್ಧ, ರಾಜಕೀಯ, ಜನಜೀವನ, ಧರ್ಮ, ಕಲೆ, ಭಾಷೆ, ಆಹಾರ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ಕಟ್ಟಿಕೊಡುವ ಕೃತಿ ಇದು. ನಾಲ್ಕು ಪ್ರಮುಖ ಪಾತ್ರಗಳ ಮೂಲಕ ದಕ್ಷಿಣ ಭಾರತದ ಒಂದು ಮಹತ್ವದ ಚಾರಿತ್ರಿಕ ಕಾಲದ ಸಾಂಸ್ಕೃತಿಕ ಲೋಕವನ್ನು ನಮ್ಮ ಮುಂದೆ ಪುನರ್ನಿರ್ಮಿಸುವುದೇ ‘ಬೆಂಪೂರ ಮಾರ್ಗಂ’ನ ಪ್ರಮುಖ ವೈಶಿಷ್ಟ್ಯ.
ದೇಕವ್ವೆ, ಮರುಗ, ಮಣಿಪೋಟಿ, ವಿಜ್ಜಿಕೆ, ಪುನ್ನಾಗಶರ್ಮ, ಸಂಕ ಮುಂತಾದ ಪಾತ್ರವೈವಿಧ್ಯ, ವಿಧವಾದ ನುಡಿಗಟ್ಟುಗಳು, ಪಾತ್ರಗಳ ನಡೆ-ನುಡಿ ಇವೆಲ್ಲವೂ ಕಾದಂಬರಿಯನ್ನು ಶ್ರೀಮಂತಗೊಳಿಸಿದೆ.
‘ಬೆಂಪೂರ ಮಾರ್ಗಂ’ ಕಾದಂಬರಿಯಲ್ಲಿ ರಸಸ್ಥಾನಗಳು:
ಬೆಂಪೂರದಂಡು ಬಿಡಾರದಿಂದ ಕದಲುವ ಸಂದರ್ಭದಲ್ಲಿ ನೂರಾರು ಆನೆಗಳು ಸೇರಿದಂತೆ ಬೃಹತ್ ಸೈನ್ಯ ಮುಂದುವರಿಯುತ್ತದೆ. ಆನೆಗಳ ಚಲನೆಯಿಂದ ಎದ್ದ ಧೂಳು ಸೂರ್ಯಕಿರಣಗಳನ್ನು ಮಸುಕಾಗಿಸಿದರೆ, ಮೇಲಿನಿಂದ ಬಂದ ಮೋಡಗಳು ಬೆಳಕಿಗೆ ಮತ್ತಷ್ಟು ಅಡ್ಡಿಯಾಗುತ್ತವೆ. ಈ ದೃಶ್ಯವನ್ನು ಲೇಖಕರು ‘ಇದು ಆಶಾಢವೋ, ಶ್ರಾವಣವೋ ಎಂಬಂತಾಯಿತು’ ಎಂದು ರೂಪಕಾತ್ಮಕವಾಗಿ ಚಿತ್ರಿಸುತ್ತಾರೆ.
” ಬೆಂಪೂರುದಂಡು ಮಣ್ಣೆಯ ಬಿಡಾರದಿಂದ ಕದಲಿದಾಗ, ಸೂರ್ಯನ ಕಿರಣಗಳಿಗೆ ಅಡ್ಡಬಂದ ಮೋಡಗಳಿಂದ ಇದು ಆಷಾಢವೋ – ಶ್ರಾವಣವೋ ಎಂಬಂತಾಯಿತು.”
ಯುದ್ಧದಂಡಿನ ಚಲನವಲನವನ್ನು ಋತುಚಿತ್ರದೊಂದಿಗೆ ಹೋಲಿಸುವ ಈ ಸಣ್ಣ ನಿರೂಪಣೆಯಲ್ಲೇ ಲೇಖಕರ ಕಾವ್ಯಪ್ರತಿಭೆ ಗೋಚರಿಸುತ್ತದೆ. ಧೂಳು, ಸೂರ್ಯಕಿರಣ ಮತ್ತು ಮೋಡಗಳ ಸಂಯೋಗದಿಂದ ಮೂಡುವ ದೃಶ್ಯವು ಕೇವಲ ವರ್ಣನೆಯಾಗಿ ಉಳಿಯದೆ, ಓದುಗನ ಕಣ್ಣೆದುರು ಜೀವಂತ ಚಿತ್ರವಾಗಿ ನಿಲ್ಲುತ್ತದೆ. ಇಂತಹ ರಸಸ್ಥಾನಗಳು ಕಾದಂಬರಿಯ ಚಾರಿತ್ರಿಕ ನಿರೂಪಣೆಗೆ ಕಾವ್ಯಾತ್ಮಕ ಹೊಳಪನ್ನು ನೀಡುತ್ತವೆ.
“ನೆಲದಲಗೆಯೊಳ್ ಕೂಡಿದ್ದ ಧೂಳ್ ಧೂಪಮಾಯ್ತೈ” ಬೆಂಪೂರ ದಂಡು ವಾತಾಪಿಗೆ ಹೋಗುತ್ತಿದ್ದಾಗ ಶ್ರಾವಣದ ಮಳೆ ಹೊಯ್ಯಲು, ನೆಲದಿಂದ ಮೊದಲ ಮಳೆಗೆ ಎದ್ದ ಧೂಳ್ ಧೂಪವಾಯ್ತು ಎಂಬ ಸೊಗಸಾದ ಚಿತ್ರಣದಲ್ಲಿ ಓದುಗನ ಕಣ್ಣಿಗೆ, ಕಿವಿಗೆ ಮಾತ್ರವಲ್ಲ ಮೂಗಿಗೂ ರಸಾನುಭವವನನು ಕೊಡುತ್ತದೆ.
“ಕಣ್ಣು ಬಿಂಬವನ್ನು ಸೆರೆಹಾಕಿ ನೆನಪಿಟ್ಟುಕೊಳ್ಳುವ ಮಾಯಾಹೊಂಡ” ಎಂಬ ಮಾತಿನಸೊಗಸು;
ಪುಲಿಗೆರೆಗೆ ಬಂದ ಗಂಗ ಮಲ್ಲ ರುದ್ರಟ್ಟ ಎಂಬ ಕವಿ- ನಾಟಕಕಾರನನ್ನು ಭೇಟಿಯಾಗುವಾಗ ಹೇಳುವ ಮಾತು: “ಗೀತ-ನಾಟ್ಯಕ್ಕಿಂತ ಬದುಕು ಬಹಳ ದೊಡ್ಡದಿದೆ. ನಿಮ್ಮದು ಕೊಳವೆಯಲ್ಲಿ ನೋಡಿದಂತಹ ತಿಳುವಳಿಕೆ “-ಎಂಬ ‘ಘನತೆಯ’ ಮಾತನ್ನಾಡಿ ರುದ್ರಟ್ಟನಿಗೆ ಕೊಟ್ಟ ಗದ್ಯಾಣವನ್ನು ಆತನಿಗೇ ರುದ್ರಟ್ಟ ಹಿಂದಿರುಗಿಸಿ, ” ನನಗೆ ದಾನ ಬೇಡ” ಎಂದ ರೀತಿ ಗೀತ-ನಾಟ್ಯದ ಘನತೆ ಬೀರರ ಘನತೆಗಿಂತ ಕಡಮೆಯದಲ್ಲ ಮತ್ತು ಜಗತ್ತನ್ನು ಕವಿಗಳೂ ಆಳವಾಗಿಯೂ ವಿಶಾಲದೃಷ್ಟಿಯಿಂದ ಕಂಡಿದ್ದಾರೆ ಎಂಬುದನ್ನು ಧ್ವನಿಯಾಗಿಸಿದ ನಾಟ್ಯಾಯಮಾನತೆ ವ್ಯಂಜನೀಯವಾಗಿದೆ!!! ಇಲ್ಲಿ ದಾನ ಬೇಡ ಎಂದದಕ್ಕೆ ಕಾರಣವೂ ಇದೆ. ದಾನ ಪಡೆಯುವುದು ಬ್ರಾಹ್ಮಣರ ಕುಲಾಚಾರ. ಆದರೆ ರುದ್ರಟ್ಟ ತನ್ನ ನಿಜ ಹೆಸರಾದ ರುದ್ರಭಟ್ಟ ದಿಂದ ‘ಭ’ ಕಾರವನ್ನು ವ್ಯಾಪಾರಿಯೋರ್ವನಲ್ಲಿ ಒತ್ತೆ ಇರಿಸಿ ತನ್ನ ನಾಟಕ ಮಂಡಳಿಯ ಖರ್ಚಿಗೆ ಹಣ ಸಾಲವಾಗಿ ಪಡೆದಿರುತ್ತಾನೆ; ಹಾಗಾಗಿ ಈ ಭಟ್ಟನಿಗೆ ದಾನ ಗ್ರಹಿಸುವ ಅಧಿಕಾರವಿಲ್ಲ ಎಂಬುದೂ ಧ್ವನಿಯಾಗಿಸಿದ್ದಾರೆ ಕಾದಂಬರಿಕಾರರು. ಆದೆಷ್ಟು ಸೊಗಸಾದ ಚಿತ್ರಣ.
ಕಾದಂಬರಿಯಲ್ಲಿ ಬರುವ ಒಂದು ಕಾವ್ಯಖಂಡ ನೋಡಿ:
ಕೊಳದೊಳ್ ನೈದಿಲೆಯಂ ಕಂಡು ಆಹಾಹೋಹೋ ಎಂಬುದ್ದಾರಮಂ ತಾಳು ದಳಮಾಧುರ್ಯಮಂ ಕೈಯೊಳ್ಳಿಡಿದು ಅನುಭೋಗಿಸುವಾಸೆಯೊಳ್ ಕೊಳಕ್ಕಿಳಿಯೆ ತಾನರಿವುದು ಕೆಳಗಿರುವುದೆಲ್ಲಂ ಕೆಸರು ಬಗ್ಗಡಂ!
ಪುರುಷಾರ್ಥಗಳ ಅರ್ಥ ಕಾಮಗಳನ್ನೇ ವ್ಯಾಖ್ಯಾನಿಸಿದಂತೆ ಇರುವ ಕವಿಪ್ರೌಢೋಕ್ತಿ.
“ತಾನರಿವುದು ಕೆಳಗಿರುವುದೆಲ್ಲಂ ಕೆಸರು ಬಗ್ಗಡಂ!” ಈ ಕಾವ್ಯಖಂಡ ಅರಿಷಡ್ವರ್ಗಗಳಿಂದ ಪೋಷಿಸಲ್ಪಟ್ಟ ಅರ್ಥ-ಕಾಮಗಳ ಆತ್ಯಂತಿಕ ಫಲವೇ ಆಗಿದೆ.
“ದ್ವೇಷದ ಮೂಲ ಯಾವುದು” ಎಂಬ ಗಂಗಮಲ್ಲನ ಪ್ರಶ್ನೆಗೆ ಉತ್ತರದಂತಿದೆ. ಅಂದರೆ, ದಳಮಾಧುರ್ಯಮನ್ ಕೈಯೊಳ್ಪಿಡಿಯಲು ಮುಂದುವರಿದರೆ ಕೆಸರು ಬಗ್ಗಡ ತಪ್ಪಿದ್ದಲ್ಲ ಎಂಬ ವಿವಕ್ಷೆ ಹೇಳುವುದು ಮನದ ಮೂಲದ ರಾಗದ್ವೇಷಾದಿ ಕೆಸರು ಬಗ್ಗಡವೇ ಎಲ್ಲಕ್ಕೂ ಕಾರಣ – ಎಂಬುದು.
ಕವಿನಿಬದ್ಧ ಪ್ರೌಢೋಕ್ತಿ ಮೂಲಕ ಜನರ ನಾಡಿಮಿಡಿತವನ್ನು ಸತ್ಯಾಶ್ರಯ ಹೇಳಿದ್ದಾನೆ: “ಚಾಲುಕ್ಯ ದೊರೆ ಎಂದು ಗೊತ್ತಿದ್ದರೆ ಹಾಗೆ ನಡೆದುಕೊಳ್ಳುತ್ತಿದ್ದನ? ಜನರೂ ಪಗರಣಕಾರರು. ಅವರ ದರ್ಪವನ್ನೂ ಸಹ ನೋಡಿ-ಮಾಡಿ ತೀರಿಸಿಕೊಳ್ಳುತ್ತಾರೆ. ನಾವೆಷ್ಟು ಕ್ರೂರಿಗಳೋ, ಅವರೂ ಅಷ್ಟೇ ಕ್ರೂರಿಗಳು. ನಾವೆಷ್ಟು ಸಭ್ಯರೋ, ಅವರೂ ಅಷ್ಟೇ ಸಭ್ಯರು. ಅವಕಾಶ – ಆಯ್ಕೆಗಳ ವ್ಯತ್ಯಾಸವಷ್ಟೇ. ಮಿಕ್ಕಂತೆ ಇದು ಅಭಿನ್ನ ಪ್ರಕೃತಿ.”
“ಮಾಡಾಕ್ ಬದುಕಿಲ್ಲ ನಿಮಗೆ ಮಲ್ಲಕಾಳಗವಂತೆ, ದೊಡ್ಡ ಕಾಳಗವಂತೆ, ಜನಾ ಹರ್ಕಂಡ್ ಸಾಯ್ತಾ ಇದ್ರೆ ನಿಮ್ಮೆ ನಿಮ್ಮದೇ ಐಭೋಗ್ಗಳು.” ಇದೆಲ್ಲ ಎಲ್ಲಾ ಕಾಲದ ನಿಜ.
ಸತ್ಯಾಶ್ರಯ ಪುಲಕೇಶಿಯ ಜನಾನುರಾಗಿ ವ್ಯಕ್ತಿತ್ವ ಬಿಂಬಿಸುವ ಮಾತು ಪುಲಕೇಶಿಯ ಈ ಮಾತಲ್ಲಿ ಬಂದಿದೆ:
“ಈ ನಾಡಿನಲ್ಲಿ ಅಧಿಕಾರಿ ಜನ ರಾಜನನ್ನು ತೆಗೆದ ಉದಾಹರಣೆ ಇದೆಯೇ ಪರಂತು, ಸಾಮಾನ್ಯ ಜನ ರಾಜನನ್ನು ತೆಗೆದ ಉದಾಹರಣೆ ನನಗೆ ಕಂಡಿಲ್ಲ..”
ಪುಲಕೇಶಿ- ಹರ್ಷರ ಕಾಳಗದಲ್ಲಿ ಬೆಂಪೂರಿನ ಗಂಗಮಲ್ಲ ಗಾವುಂಡನ ಪರಾಕ್ರಮದಿಂದಾಗಿ ಪುಲಕೇಶಿ ಗೆದ್ದಮೇಲೆ ಕಾದಂಬರಿಕಾರರು ಕೊಟ್ಟ ಈ ಕಾವ್ಯಖಂಡದ ವ್ಯಂಜನಾವ್ಯಾಪಾರ ನೋಡಿ:
ಇತ್ತಂಡದೊಳ್ ಚಿತೆ ಚಿತ್ರವಿದೆ, ತೆಂಕಣ ಕರ್ಬೊಗೆ ಸೈರಿಸಲ್ ಬಡಗಣದೊಳ್ ಎದ್ದ ಕರ್ಬೊಗೆ ಭೂತಾಕಾರಮಂ ತಾಳು ಯಮಸಿಂಹಾಸನಮಂ ನೆನಪಿಸಲ್; ಶೀಲಸತ್ಯದಾ ಕಾಳಗಮಂ ಇತ್ಯರ್ಥಿಸಲ್ ಅಲ್ಲೆ ರವಿ ಕುಳ್ಳಿರ್ದ ದಂಡಮಂ ಶಾಸಿಸೆ, ಜಯಲಕ್ಷ್ಮಿ ಚಿತೆ ಮೆಟ್ಟಿ ನಗುತಿಹಳ್ ತೆಂಕಣದೊಳ್!
ಐದು ಪಾದಗಳ ಅದ್ಭುತ ಇದು. ಇಡೀ ಕಾಳಗದ ವಿವರಗಳೆಂಬ ಮಕುಟದ ಮಧ್ಯ ಮಣಿ ಈ ಪದ್ಯ ಸಾಲುಗಳು. ” ಜಯಲಕ್ಷ್ಮಿ ಚಿತೆ ಮೆಟ್ಟಿ ನಗುತಿಹಳ್ ತೆಂಕಣದೊಳ್…ಆಹಾ!!! ಕ್ಷಾತ್ರದ ಪರಾಕಾಷ್ಟೆ!!!
ಈ ಕಾದಂಬರಿಯಲ್ಲಿ ನನ್ನ ಅಭಿಪ್ರಾಯದಂತೆ ” ಕರ್ನಾಟ ಬಲ” ಎಂದು ಪುಲಕೇಶಿಯ ಸೇನೆಯನ್ನು ಒಕ್ಕಣಿಸುವ ಬದಲು ” ಕರ್ಣಾಟ ಬಲ” ಎಂದು ಒಕ್ಕಣಿಸಿದ್ದರೆ ಚೆನ್ನ ಇತ್ತೋ ಏನೋ. ಕಾದಂಬರಿಯಲ್ಲಿ ಆನುಷಂಗಿಕವಾಗಿ ಬರುವ. ಸಂಗೀತದ ಕೆಲವು ವಿವರಗಳಲ್ಲಿ ನನಗಾದ ಸಂದೇಹಗಳ ಕುರಿತು ಕೊಂಚ ನಾನು ಅಧ್ಯಯನ ಮಾಡಬೇಕು.
ಒಟ್ಟಿನಲ್ಲಿ ಈ ಕಾದಂಬರಿಯ ಓದು ನಮ್ಮ ನೈಜ ಚರಿತ್ರೆಯನ್ನು ಮತ್ತೆ ಓದಿ ಅಭಿಮಾನ ಪಟ್ಟುಕೊಳ್ಳಬೇಕೆಂದು ಮಾಡುತ್ತದೆ. ಕಾದಂಬರಿಯ ಕುರಿತು ಒಂದು ಮಾತಲ್ಲಿ ಹೇಳುವುದಿದ್ದರೆ ಬೆಂಪೂರ ಬೀರರು ಹೇಳುವಂತೆ “ಭಲಾಭಲ ಭಲಾಭಲ”.
ಕೃಷ್ಣಪ್ರಕಾಶ ಉಳಿತ್ತಾಯ
ಈಶಾವಾಸ್ಯ
ಪೆರ್ಮಂಕಿ
ಮಂಗಳೂರು
(Source link..)
2.
ಬೆಂಪೂರ ಮಾರ್ಗಂ – ಕರಣಂ ಪವನ್ ಪ್ರಸಾದ್
ಕರಣಂ ಪವನ್ ಪ್ರಸಾದ್ ಎಂದರೆ ಕನ್ನಡದ ಓದುಗರಿಗೆ ಪರಿಚಿತ ಹೆಸರು. ಕರ್ಮ,ನನ್ನಿ, ಗ್ರಸ್ತ, ರಾಯಕೊಂಡ, ಸತ್ತುವಿನಂತಹ ಕೃತಿಗಳಿಂದ ಅವರ ಮೆಚ್ಚುವ ದೊಡ್ಡ ಓದುಗ ಬಳಗವಿದೆ.
ಹಾಗಾಗಿಯೇ ಸಹಜವಾಗಿಯೇ ಅವರ ಹೊಸ ಕೃತಿ ಬರುತ್ತಿದೆ ಎಂದಾಗ ಕುತೂಹಲವಿತ್ತು.
ಕೃತಿ ಬಿಡುಗಡೆಯ ಮೊದಲಿನ ಸಂದರ್ಶನ, ಕೃತಿಯ ಬಗ್ಗೆ ಲೇಖಕರ ಮಾತು ಎಲ್ಲಾ ಓದುವಾಗ ಕೃತಿಯಲ್ಲಿನ ಕತೆಯ ಕಾಲಮಾನ ಹಾಗೂ ಭಾಷೆಯ ಬಳಕೆಯ ಝಲಕ್ ಕಂಡು ಇದನ್ನು ಓದಿ ಅರ್ಥೈಸಿಕೊಳ್ಳುವ ಶಕ್ತಿ ಇದೆಯಾ ಎಂಬ ಅನುಮಾನ ಕಾಡಿದ್ದು ಸುಳ್ಳಲ್ಲ.
ಇದನ್ನು ಓದುವಾಗ ನನಗೆ ಮತ್ತೆ ಮತ್ತೆ ಯಾಕೆ ನಮ್ಮ ಪೂರ್ವ ಕವಿಗಳು ತಮ್ಮ ಕೃತಿಗಳಿಂದ ಅಮರರಾದರು ಎಂಬುದು ಸ್ಪಷ್ಟವಾಗುತ್ತಾ ಹೋಯಿತು.
ಮೇಲ್ನೋಟಕ್ಕೆ ಇದು ದಕ್ಷಿಣಾ ಪಥೇಶ್ವರನ ಕಾಲದ ಕತೆ ಎನಿಸಿದರೂ ,ವೀರರಸ ಮುಖ್ಯವಾಗಿದ್ದರೂ ಒಂದೊಂದು ಅಧ್ಯಾಯ ಮುಗಿಸಿದಾಗಲೂ ಕೂತು ಮೆಲುಕು ಹಾಕಿ ರಸಾಸ್ವಾದನೆ ಮಾಡುವಾಗ , ಯಾಕೆ ನಮ್ಮ ಹಿರಿಯರು ಮತ್ತೆ ಮತ್ತೆ ಕುಮಾರವ್ಯಾಸ ಭಾರತ ವಾಚನ ಮಾಡುತ್ತಾರೆ ಯಾಕೆ ಪೂರ್ವಸೂರಿಗಳ ಪದ್ಯ ಓದುವಾಗ ರಸೋಸ್ಪತ್ತಿ ಆಗುತ್ತದೆ ಎಂಬುದೆಲ್ಲ ಹೊಳೆಯುತ್ತದೆ.
ಏಳನೆಯ ಶತಮಾನದ ಜನಜೀವನವನ್ನು ಚಿತ್ರಿಸುವಾಗ ಬರಿಯ ಯುದ್ಧದ ವರ್ಣನೆಯಲ್ಲದೆ ಆಗಿನ ಜನರ ಆಲೋಚನಾ ವಿಧಾನ, ರೀತಿ ರಿವಾಜು ,ನಡೆ ನುಡಿ ಇವುಗಳನ್ನು ಅಳವಡಿಸಿಕೊಂಡ ರೀತಿಗೆ ಬೆರಗಾಗುತ್ತೇವೆ. ಯುದ್ಧ ಸನ್ನಾಹದ ವಿವರಗಳ ಓದುವಾಗಲಂತೂ ನಾವೇ ಚಾಲುಕ್ಯ ಅರಸರ ಸೇನೆಯಲ್ಲಿದ್ದೇವೆ ಎಂಬಷ್ಟು ದಟ್ಟವಾದ ಭಾವ ಪುಷ್ಟಿ ಕೊಡುವ ವಿವರಗಳಿವೆ. ಬರಿಯ ವೀರರಸವಲ್ಲದೆ ರಾಜತಂತ್ರ, ಕುಟಿಲತೆ, ಶೃಂಗಾರ ಇವೆಲ್ಲವೂ ಅಲ್ಲಲ್ಲಿ ರುಚಿ ಹೆಚ್ಚಿಸಲು ಬಳಕೆಯಾಗಿದೆ.
ಶಿಷ್ಟ ನುಡಿಗಳಷ್ಟೇ ಅಲ್ಲದೆ ಜನಪದರ ಮಾತುಗಳು ಅದರ ಜೊತೆಗೆ ಉಪಮಾಲಂಕಾರಗಳು ಇವೆಲ್ಲವೂ ಕೃತಿಯ ಸೊಗಸಿಗೆ ಮೆರುಗು ಕೊಡುತ್ತದೆ.
ನಿಸ್ಸಂಶಯವಾಗಿ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಓದಿದ ಅತ್ಯುತ್ತಮ ಐತಿಹಾಸಿಕ ಕಾದಂಬರಿಗಳಲ್ಲೊಂದು.
ಅದರಲ್ಲೂ ಕನ್ನಡಿಗರು ಓದಲೇಬೇಕಾದ ಕೃತಿ.
ಕನ್ನಡಿಗರ ಅದೃಷ್ಟ ಒಂದಾದ ಮೇಲೆ ಒಂದರ ಹಾಗೆ ಒಳ್ಳೊಳ್ಳೆ ಐತಿಹಾಸಿಕ ಕೃತಿಗಳು ಬರುತ್ತಲಿವೆ.
ಒಳ್ಳೆಯ ಕೃತಿ ಓದುಗ ಪಡೆಯುವುದು ಅವನ ಭಾಗ್ಯ ಅದರಲ್ಲೂ ನಮ್ಮ ಇತಿಹಾಸದ ಒಂದು ಪ್ರಮುಖ ಘಟನೆಯ ಈ ರೀತಿಯಾಗಿ ನಿರೂಪಿಸಿದ ರೀತಿಗೆ ಭಲಾಬಲ!
ಕರಣಂ ಅವರ ಈ ಕೃತಿಗಾಗಿ ಅವರಿಗೆ ನಮನಗಳು
–Prashanth Bhat (source link…)
3.
ಕರಣಂ ಪವನ್ ಪ್ರಸಾದ್ ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರು. ಇತ್ತೀಚೆಗೆ ಕೃತಿಗಳು ನಿಜಕ್ಕೂ ಚೆನ್ನಾಗಿವೆಯೇ, ಅಥವಾ ಪಿಆರ್, ಹೈಪ್ನ ಮಾರಾಟವೇ ಎಂದು ಅನುಮಾನದಲ್ಲಿ ಪುಸ್ತಕಗಳನ್ನು ಖರೀದಿಸುವಾಗ, ಇವರು ಬರೆದದ್ದು ಖಂಡಿತಾ ಸೊಗಸಾಗಿರುತ್ತದೆ ಎನ್ನುವ ಭರವಸೆ ನೀಡುವ ಬರಹಗಾರರಲ್ಲಿ ಕರಣಂ ಪ್ರಮುಖರು.
ಹಾಗೇ ಕಳೆದೊಂದು ವಾರದಿಂದ ಓದಿದ ಪುಸ್ತಕ ‘ಬೆಂಪೂರ ಮಾರ್ಗಂ’. ಲೇಖಕರು ಅಂದಂತೆ ಇದು ನಿಜಕ್ಕೂ ಮಹಾಗದ್ಯವೇ ಸರಿ. ಕಾದಂಬರಿಯ ನಡುವೆ ಮುದ ನೀಡುವ ಹಳೆಗನ್ನಡ ಪದ್ಯಗಳು, ಆಹಾ, ಅಮೋಘ ಎನಿಸುವ ಉಪಮೆಗಳು, ಇಮ್ಮಡಿ ಪುಲಕೇಶಿಯಿಂದ ವಿಕ್ರಮಾದಿತ್ಯನ ತನಕ ಚಾಲುಕ್ಯರ, ಅವರೊಡನೆ ಗಂಗರು, ಪಲ್ಲವರು, ಹರ್ಷವರ್ಧನ, ಜೊತೆಗೆ ಅವರ ಸಾಮ್ರಾಜ್ಯಗಳ ಜನ ಸಾಮಾನ್ಯರ ಜೀವನ, ಕಥನಗಳನ್ನು ಒಳಗೊಂಡ ಸೊಗಸಾದ ಕೃತಿ.
ಪುಲಕೇಶಿಯ ಕಥೆ ಎಂದಾಕ್ಷಣ ಇದು ರಾಜರ ಕಥೆಯಷ್ಟೇ ಅಲ್ಲ. ಚಾಲುಕ್ಯ ಸಾಮ್ರಾಜ್ಯ ಚಕ್ರವರ್ತಿಯಿಂದ ಜನ ಸಾಮಾನ್ಯನ ತನಕ ಹಬ್ಬಿರುವ ಮಹಾಕಥನ. ಜನಜೀವನ, ಯುದ್ಧ ನೀತಿ, ಸಂಸ್ಕೃತಿ, ಪದಬಳಕೆ, ಆರ್ಥಿಕ ವ್ಯವಸ್ಥೆ ಎಲ್ಲವನ್ನೂ ಸೊಗಸಾಗಿ ಕಟ್ಟಿಕೊಟ್ಟಿರುವ ಕೃತಿ. ಒಂದೇ ದಿನದಲ್ಲಿ ಓದಬಹುದಾದ ಗಾತ್ರದ ಕೃತಿಯಾದರೂ, ಅಧ್ಯಾಯಗಳಲ್ಲಿ ಸವಿದು ಓದಿದಷ್ಟೂ ಇಷ್ಟವಾಗುವಂತಹ ಮಹಾಗದ್ಯವಿದು.
ಕರ್ನಾಟವೆಂಬ ಮಹಾ ಅರಣ್ಯ ಮತ್ತು ಅದರಲ್ಲಿ ಶಾಲ್ಮಲಿ ವೃಕ್ಷದಂತಿರುವ ಪುಲಕೇಶಿ ದೊರೆಗಳು, ಇನ್ನೊಂದು ಆಲದ ಮರದಂತೆ ಕೈ ಚಾಚಿರುವ ಗಂಗಮಲ್ಲ ಗಾವುಂಡ ಎನ್ನುವಲ್ಲಿನ ಮಹೋಪಮೆಯೇ ಸಾಕು ಓದುಗರನ್ನು ರೋಮಾಂಚಗೊಳಿಸಲು. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಓದಿದ ಅತ್ಯಂತ ಸೊಗಸಾದ ಐತಿಹಾಸಿಕ ಕಾದಂಬರಿ ಇದು.
ಕಾದಂಬರಿಯ ಮೊದಲಾರ್ಧ ಇಮ್ಮಡಿ ಪುಲಕೇಶಿ ಮತ್ತು ಬೆಂಪೂರಿನ ಗಂಗಮಲ್ಲ ಗಾವುಂಡನ ಕೇಂದ್ರಿತವಾಗಿದೆ. ಇದು ಹರ್ಷವರ್ಧನನ ವಿರುದ್ಧ ನರ್ಮದಾ ತೀರದಲ್ಲಿ ನಡೆದ ಯುದ್ಧದ ಅತ್ಯುತ್ತಮ ವರ್ಣನೆ ಇಲ್ಲಿದೆ. ಗಂಗರು – ಚಾಲುಕ್ಯರ ಯುದ್ಧ ತಂತ್ರದ ಸೊಗಸಾದ ಬಣ್ಣನೆ. ಕಾದಂಬರಿಯ ದ್ವಿತೀಯಾರ್ಧ ಪುಲಕೇಶಿಯವರ ಪುತ್ರ ವಿಕ್ರಮಾದಿತ್ಯ ಮತ್ತು ಗಂಗಮಲ್ಲನ ಪುತ್ರ ಸ್ಮರಣ ಸತ್ಯವಾಕ್ಯರ ಕೇಂದ್ರಿತವಾಗಿದೆ. ವೈಷ್ಣವ, ಶೈವ, ಬೌದ್ಧ, ಜೈನ ಮತಗಳು ಒಂದೇ ಸಾಮ್ರಾಜ್ಯದಲ್ಲಿ ಸೌಹಾರ್ದತೆಯಿಂದ ಬೆಳೆದಿರುವ ಚಿತ್ರಣ, ವಿಜ್ಜಿಕಾಳಂತಹ ಸ್ತ್ರೀಯರ ಪಾಂಡಿತ್ಯ – ಸಾಮರ್ಥ್ಯಗಳನ್ನು ಕೃತಿ ತೆರೆದಿಟ್ಟಿದೆ.
ಬಹುಶಃ ಪುಸ್ತಕದಲ್ಲಿ ನನ್ನನ್ನು ಅತಿಯಾಗಿ ಕಾಡಿದ್ದು ಲೇಖಕರು ಬಳಸಿರುವ ಉಪಮೆಗಳು. ಶಾಲ್ಮಲಿ ವೃಕ್ಷದ ಬಣ್ಣನೆಯಿಂದ ಶಾಲ್ಮಲಿ ಧರಾಶಾಯಿಯಾಗುವ ಉಪಮೆಗಳು ನಿಜಕ್ಕೂ ಸೊಗಸು. ಇದರೊಡನೆ, ಪರ್ಶಿಯಾ, ಮಧ್ಯ ಏಷ್ಯಾದ ಆ ಕಾಲದ ಸ್ಥಿತ್ಯಂತರಗಳನ್ನೂ ಕೃತಿ ಒಳಗೊಂಡಿದೆ.
ಓದುಗರಿಗೆ ಭಾಗ್ಯವಿದ್ದಾಗ ಉತ್ತಮ ಕೃತಿಗಳು ಬರುತ್ತವಂತೆ. ಬೆಂಪೂರ ಮಾರ್ಗಂ ಅಂತಹ ಒಂದು ಭಾಗ್ಯವೇ ಸರಿ. ಕರಣಂ ಪವನ್ ಪ್ರಸಾದ್ ಅವರು ಹಲವು ವರ್ಷಗಳ ಸಂಶೋಧನೆ, ಅಧ್ಯಯನಗಳನ್ನು ನಡೆಸಿ, ಕನ್ನುಡಿಯ ಓದುಗರಿಗೆ ಮೃಷ್ಟಾನ್ನವನ್ನೇ ನೀಡಿದ್ದಾರೆ. ತಪ್ಪದೇ ಬೆಂಪೂರ ಮಾರ್ಗಕ್ಕೆ ಸಾಗಿ, ಓದಿನ ಖುಷಿಯಲ್ಲಿ ಕಳೆದುಹೋಗಿ
-Shree Harsha (Source link..)
