Karanam Pavan Prasad-Bempura Margam- reviews Collection | ‘ಬೆಂಪೂರ ಮಾರ್ಗಂ’ – ಕರಣಂ ಪವನ್ ಪ್ರಸಾದ್ ಕೃತಿಯ ವಿಮರ್ಶೆಗಳ ಸಂಗ್ರಹ


ಕನ್ನಡಪ್ರಭ ಸಾಹಿತ್ಯ ಪುರವಣಿಯಲ್ಲಿ ಕರಣಂ ಪವನ್ ಪ್ರಸಾದ್ ಸಂದರ್ಶನ


‘ಬೆಂಪೂರ ಮಾರ್ಗಂ’ ವಿಮರ್ಶೆಗಳ ಸಂಗ್ರಹ

4.
ಹಂಪಿಗೆ ಹೋದವರು, ಹೋಗುವವರು ಮತ್ತು ಹೋಗದಿರುವವರೂ ಕಲ್ಲಿನ ರಥವೊಂದೇ ಹಂಪಿಯೆನ್ನುವ ರೀತಿಯಲ್ಲಿ ಹೇಗೆ ತಿಳಿಯುತ್ತಾರೊ ಹಾಗೆಯೇ ಇತಿಹಾಸವೂ. ಯಾವುದು ಪದೇ ಪದೇ ಹೇಳಲಾಗುತ್ತದೊ, ಚಿತ್ರಿಸಲಾಗುತ್ತದೊ ಅಥವಾ ಕಣ್ಣು ಮನ ಸೆಳೆಯುತ್ತದೊ ಅದೇ ಇತಿಹಾಸವೆನ್ನುವಂತಾಗುತ್ತದೆ. ಆದರೆ ಅದೂ ಇತಿಹಾಸವಾಗಲೂ ಅದರ ಹಿಂದೆ ಅನೇಕರ ಶ್ರಮವಿರುತ್ತೆ ಆದರದು ಎಲ್ಲೂ ಮಾತಾಗುವುದಿಲ್ಲ.
ಕರಣಂ ಪವನ್ ಪ್ರಸಾದ್ ಅವರ ಹೊಸ ಕೃತಿ, ಮಹಾಗದ್ಯ ‘ಬೆಂಪೂರ ಮಾರ್ಗಂ ‘ ದ ಕುರಿತು ಬರೆಯಬೇಕು ಅಂತ ಪುಸ್ತಕ ಮಾರುಕಟ್ಟೆಗೆ ಬಂದ ದಿನದಿಂದ ಯೋಚಿಸುತ್ತಿದ್ದೆ. ಆದರೆ ಹೇಗೆ ಶುರು ಮಾಡಲಿ, ಹೇಗೆ ಮುಗಿಸಲಿ ಅನ್ನುವುದೇ ತಿಳಿಯದೆ ಬರಹ ಮುಂದಕ್ಕೋಗುತ್ತಲೇ ಇತ್ತು.
ಚಾಲುಕ್ಯ ಸಾಮ್ರಾಜ್ಯದ ಇಮ್ಮಡಿ ಪುಲಕೇಶಿಯ ಸಾಮ್ರಾಜ್ಯದಲ್ಲಿ ಪುಲಕೇಶಿಯಂತೆಯೇ ಕಾಡುವ ವ್ಯಕ್ತಿತ್ವವೊಂದು ಇತ್ತು ಅನ್ನುವುದರ ಚಿತ್ರಣ ಕಟ್ಟಿಕೊಟ್ಟ ಪುಸ್ತಕ ಬೆಂಪೂರ ಮಾರ್ಗಂ.
ಬಾದಾಮಿಗೆ ಕೆಲವರ್ಷಗಳ ಹಿಂದೆ ಹೋಗಿದ್ದಾಗ ಚಾಲುಕ್ಯರ ಸಾಮ್ರಾಜ್ಯದ ಕುರುಹುಗಳು ಬಹಳ ದಿನದಳ ಕಾಲ ಕಾಡಿತ್ತು. ಚಾಲುಕ್ಯರು ಕನ್ನಡ ನಾಡನ್ನು ಆಳಿದ ಕನ್ನಡದ ಅರಸರು. ಆಗಿನ ಕಾಲದಲ್ಲಿ ಉತ್ತರದ ಹರ್ಷವರ್ಧನ ದಕ್ಷಿಣದ ತಂಟೆಗೇ ಬರದಂತೆ ಕನ್ನಡದ ನಾಡನ್ನು ಕಾಪಾಡಿದ ನಮ್ಮ ಹೆಮ್ಮೆ.
ಆದರೆ ಬೆಂಪೂರ ಮಾರ್ಗಂ ಓದುವವರೆಗೂ ಇಮ್ಮಡಿ ಪುಲಕೇಶಿಯ ಶೌರ್ಯವಷ್ಟೇ ನನ್ನ ತಲೆಯೊಳಗಿದ್ದಿದ್ದು. ಎಂಥಾ ದೊರೆಯಿರಬಹುದು, ನರ್ಮದಾ ನದಿಯ ದಡದಲ್ಲೇ ಕಟ್ಟಿ ಹಾಕಿ ದಕ್ಷಿಣಾಪಥೇಶ್ವರನೆನಸಿಕೊಂಡ ದೊರೆಯ ಪ್ರಭಾವ ಮನಸ್ಸಿನಲ್ಲಿದ್ದಿದ್ದು. ಆದರೆ ಕರಣಂ ಕಟ್ಟಿಕೊಟ್ಟ ಗಂಗಮಲ್ಲನೆಂಬ ಗಂಗರ ಗಾವುಂಡನ ಶೌರ್ಯ, ಧೈರ್ಯ, ಸಮಯಪ್ರಜ್ಞೆ, ಹುಚ್ಚುಪ್ರೀತಿ, ಹಟ, ಕರುಣೆ, ಸ್ನೇಹ, ಸೌಹಾರ್ದ ಎಲ್ಲವನ್ನೂ ಓದಿದ ಮೇಲೆ ಗಂಗಮಲ್ಲನಂತಹ ಅನೇಕ ದಂಡನಾಯಕರಿಲ್ಲದೇ ಯಾವ ಪುಲಕೇಶಿಯೂ ಇಲ್ಲ ಯಾವ ಸಾಮ್ರಾಜ್ಯವೂ ಇಲ್ಲ ಅಂತನ್ನಿಸಿದ್ದು ಹೌದು.
ಹಾಗಂತ ಬರೀ ಯುದ್ಧ, ದಂಡಯಾತ್ರೆಗಳೇ ಕಥೆಯಾಯಿತಾ ಅಂದರೆ ಈ ಮಹಾಗದ್ಯ ಒಳಗೊಂಡಿರುವುದು ಒಂದೆರಡಲ್ಲ. ಆ ಕಾಲದ ಜನರ ಜೀವನ, ಸಾಮಾಜಿಕ ಪರಿಸ್ಥಿತಿ, ಸಂಸ್ಕೃತಿ, ಯುದ್ಧದ ಕಾರ್ಯತಂತ್ರ, ಯುದ್ಧದ ನಿರ್ವಹಣೆ, ಕಲೆ, ಸಾಹಿತ್ಯ, ಭಾಷೆ, ಧರ್ಮ, ಆಚಾರ, ವಿಚಾರಗಳು, ಪ್ರೀತಿ, ಪ್ರೇಮ, ಮದುವೆ, ಮನಸ್ತಾಪಗಳು ಹೀಗೆ ಏನಂಟು ಏನಿಲ್ಲವೆನ್ನುವಂತೆ ವಿವಿಧ ಸಾಂಸ್ಕೃತಿಕ ವಿಷಯಗಳನ್ನು ಮಾತಾಡುವ ಕೃತಿಯಿದು.
ಕಥಾವಸ್ತುವು ಮೊದಲರ್ಧದಲ್ಲಿ ನರ್ಮದಾದ ದಂಡೆಯ ಮೇಲೆ ನಡೆದ ಇಮ್ಮಡಿ ಪುಲಕೇಶಿ ಮತ್ತು ಶೀಲಾದಿತ್ಯ ಹರ್ಷವರ್ಧನ ನ ನಡುವಿನ ಐತಿಹಾಸಿಕ ನರ್ಮದಾ ನದಿ ಕದನದ ಸುತ್ತವೇ ಆಗಿದ್ದರೂ ಅದೆಲ್ಲಿಂದ ಯುದ್ಧಕ್ಕೆ ಹೊರಳುತ್ತಿದ್ದೇವೆ ಅನ್ನುವುದೇ ಗೊತ್ತಾಗದಂತೆ ಎಲ್ಲ ಬಗೆಯ ಭಾವಗಳನ್ನೊಳಗೊಂಡು ಯುದ್ಧ ನಡೆದು ಯುದ್ಧ ಮುಗಿಯುವುದೇ ತಿಳಿಯದಂತೆ ನಮ್ಮನ್ನು ಆವರಿಸಿಕೊಳ್ಳುವುದು ಸುಳ್ಳಲ್ಲ. ಹಾಗಂತ ಪುಲಕೇಶಿ ಈ ಪುಸ್ತಕದ ಹೀರೊ ಅಂದುಕೊಂಡರೆ ಖಂಡಿತ ಅಲ್ಲ. ಇದನ್ನೇ ನಾ ಮೊದಲು ಹೇಳಿದ್ದು ಕಲ್ಲಿನ ರಥಕ್ಕೂ ಮೀರಿ ಹಂಪಿಗೊಂದು ಇತಿಹಾಸವಿದೆ, ಆ ಇತಿಹಾಸದಲ್ಲಿ ಮಿಕ್ಕ ಕಲ್ಲುಗಳು, ಗೋಪುರಗಳು, ಮಂಟಪಗಳು, ರಸ್ತೆಗಳು ಜೀವಂತಿಕೆಯ ಮಾತಾಡುತ್ತವೆ ಎಂದು. ಇಲ್ಲಿಯೂ ಹಾಗೇ. ಪುಲಕೇಶಿಯನ್ನು ಹೊರತುಪಡಿಸಿ ಕಥಾನಾಯಕನಾಗಿ ಗಂಗಮಲ್ಲನೆಂಬ ಧೀರ ಗಾವುಂಡ ಇಡೀ ಚಾಲುಕ್ಯ ಸಾಮ್ರಾಜ್ಯದ ಕಥೆಯನ್ನು ಆವರಿಸಿಕೊಳ್ಳುತ್ತಾನೆ. ಅವನ ಹುಚ್ಚು, ಪ್ರೀತಿ, ಜೀವಂತಿಕೆ, ವೈರಾಗ್ಯ, ವ್ಯಕ್ತಿತ್ವ ಆವರಿಸಿಕೊಳ್ಳುತ್ತೆ. ಪುಲಕೇಶಿಯಷ್ಟೇ ಅಥವಾ ನೋಡುವ ರೀತಿಗನುಗುಣವಾಗಿ ಪುಲಕೇಶಿಗಿಂತಲೂ ಒಂದು ಹಿಡಿ ಹೆಚ್ಚು ಪ್ರೀತಿ ನಿಮಗೆ ಗಂಗಮಲ್ಲನ ಮೇಲೆ ಮೂಡಿದರೂ ಆಶ್ಚರ್ಯವಿಲ್ಲ. ನನಗಂತೂ ಹೀಗಾಗಿತ್ತು.
ಇಮ್ಮಡಿ ಪುಲಕೇಶಿಯ ಮದುವೆಯು ರಾಜತಾಂತ್ರಿಕ ಸಂಬಂಧದ ಮೂಲಕ ಸಾಮಂತರಾಗಿದ್ದ ದಕ್ಷಿಣ ಕರ್ನಾಟಕದ ಗಂಗರು ಮತ್ತು ಕರಾವಳಿಯ ಅಳುಪರ ವಂಶದ ಹೆಣ್ಣುಗಳೊಂದಿಗೆ ನಡೆದಿದ್ದರ ಪರಿಣಾಮ ಈ ಕೃತಿ ಚಾಲುಕ್ಯರಷ್ಟೇ ಗಂಗರನ್ನೂ ಒಳಗೊಂಡಿದೆ. ಗಂಗಮಲ್ಲ ಗಾವುಂಡ ಇದೇ ಗಂಗರ ಪ್ರತಿನಿಧಿಯಾಗಿ ಚಾಲುಕ್ಯರ ಕಥನದಲ್ಲಿ ಇತಿಹಾಸ ಸೇರುತ್ತಾನೆ.
ಇನ್ನು ದ್ವಿತೀಯಾರ್ಧದಲ್ಲಿ ಕಥೆಯು ಚಾಲುಕ್ಯ ವಂಶದ ವಿಕ್ರಮಾದಿತ್ಯ ಅರಸರ ಕೇಂದ್ರವಾಗಿಸಿಕೊಂಡು ಅತ್ತ ಗಂಗಮಲ್ಲ ಗಾವುಂಡನ ಕೊಂಡಿಯಾಗಿ ಅವನ ಮಗ ಸ್ಮರಣವಾಕ್ಯನನ್ನು ತಂದು ಆ ಮೂಲಕ ಇಮ್ಮಡಿ ಪುಲಕೇಶಿ ಮತ್ತು ಪಲ್ಲವರ ರಾಜ ನರಸಿಂಹ ವರ್ಮನ ನಡುವೆ ಬಾದಾಮಿಯಲ್ಲಿ ನಡೆದ ಯುದ್ಧದ ಚಾಲುಕ್ಯರ ಸೋಲಿಗೆ ಪ್ರತಿಫಲವಾಗಿ ಪಲ್ಲವರನ್ನು ಸೋಲಿಸುವ ಯುದ್ಧ ಚಿತ್ರಿತವಾಗಿದೆ. ಈ ಮೂಲಕ ಇಮ್ಮಡಿ ಪುಲಕೇಶಿಯಂತೆ ಅವರ ಕೊನೆಯ ಮಗ ವಿಕ್ರಮಾದಿತ್ಯರ ಪರಿಚಯ, ರಾಜಕೀಯ ಮತ್ತು ಶೌರ್ಯದ ಪರಿಚಯವೂ ಆಗುವಾಗ, ತಂದೆಯ ಹಾದಿಯಲ್ಲಿ ಬೇಕೊ ಬೇಡವೊ ಆಯ್ಕೆಗಳಿಲ್ಲದೆ ನಡೆವ ಗಂಗಮಲ್ಲನ ಮಗ ಸ್ಮರಣವಾಕ್ಯ ಆಧ್ಯಾತ್ಮದ ದ್ವಂದ್ವ, ರಕ್ತಗತವಾಗಿ ಬಂದ ಶೌರ್ಯ ಮುಂತಾದವುಗಳ ನಡುವೆ ಸಿಲುಕಿ ರಾಜಕೀಯದ ಪಡಸಾಲೆಯಲ್ಲಿ ತನ್ನ ತಾನು ಕಂಡುಕೊಳ್ಳಲು ಹೆಣಗಾಡುವ ಪರಿ ಸೂಕ್ಷ್ಮವಾಗಿ ಗೋಚರಿಸುತ್ತ ಹೋಗುತ್ತದೆ. ಈ ನಡುವೆ ಅಲ್ಪಕಾಲ ರಾಣಿಯಾಗಿ ಇಮ್ಮಡಿ ಪುಲಕೇಶಿಯವರ ಸೊಸೆ ವಿಜ್ಜಿಕಾ ಚಾಲುಕ್ಯ ವಂಶವನ್ನು ಮುನ್ನಡೆಸಿ ಯುದ್ಧದಿಂದ ಕಳೆದುಕೊಂಡ ವೈಭವವನ್ನು ಪುನರ್ ಸ್ಥಾಪಿಸಲು ಶ್ರಮಿಸಿದ್ದಲ್ಲದೆ ಸತಿಸಹಗಮನವನ್ನು ಮೀರಿ ಪಟ್ಟವನ್ನಲಂಕರಿಸಿ ಮಾದರಿಯಾದದ್ದೂ ಒಳಗೊಂಡಿದೆ.
ಪ್ರತಿಯೊಂದು ಪುಟವೂ ಸದ್ದಿಲ್ಲದೆ ಓದಿಸಿಕೆಂಡು ಹೊಸ ಹೊಸ ಆಯಾಮಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಬ್ರಾಹ್ಮಣ್ಯದ ಜೊತೆ ಜೊತೆಗೇ ಜೈನ ಧರ್ಮವು ಜನಜೀವನದ ಭಾಗವಾಗಿತ್ತು, ಆ ತನ್ಮಧ್ಯೆ ಯುದ್ಧದ ಮೂಲಕ ಒಪ್ಪಂದದ ಹಾದಿಯಲ್ಲಿ ಒಳಬಂದು ಬೌದ್ಧ ಧರ್ಮವು ದಕ್ಷಿಣದಲ್ಲಿ ನೆಲೆಯೂರಲು ನಡೆದ ಪ್ರಯತ್ನಗಳು, ಧಾರ್ಮಿಕ ಒಳಗೊಳ್ಳುವಿಕೆಯಲ್ಲಿ ಅಂದಿನ ರಾಜರುಗಳ ಉದಾರತೆ ಎಲ್ಲವೂ ಇವತ್ತಿನ ಮಟ್ಟಿಗೆ ಆಶ್ಚರ್ಯಕಾರಿಯಷ್ಟೇ ಅಲ್ಲ, ಈ ಸೌಹಾರ್ದ, ಸಹಿಷ್ಣುತೆಯೆನ್ನುವುದು ಈ ಮಣ್ಣಿನ ಗುಣವೇನೊ ಅನಿಸುವುದು.
ದೇಕಬ್ಬೆಯ ತಾಯಿಪ್ರೀತಿ, ಮರುಗನ ಒಡೆಯನೆಡೆಗಿನ ನಿಷ್ಟೆ, ಪುನ್ನಾಗಶರ್ಮ ಮತ್ತು ಗಂಗಮಲ್ಲನ ಸ್ನೇಹ, ಮಣಿಪೋಟಿಯ ಸೆಡವು ಎಲ್ಲದರಲ್ಲೂ ಸಂಬಂಧಗಳ ತಿರುಳಿದೆ, ಅದಕ್ಕೊಂದು ಅರ್ಥವಿದೆ. ಓದುತ್ತಾ ಓದುತ್ತಾ ಅವೆಲ್ಲವೂ ಕಣ್ಣಮುಂದೆ ಸರಿದಂತಾಗುತ್ತದೆ.
ಇವೆಲ್ಲದರ ಜೊತೆ ಇವುಗಳಿಗೂ ಮೀರಿ ನನ್ನನ್ನು ಆವರಿಸಿದ್ದು, “ಕನ್ನುಡಿ”. ಈಗಿನ ಕನ್ನಡಕ್ಕಿಂತ ಆಗಿನ ಕನ್ನುಡಿಯೆಂಬ ಪದ ನನಗೆ ಬಹಳ ಆಪ್ತ ಎನಿಸಿದರೆ, ನಾವು ಕರೆಯುವ ಚಾಲುಕ್ಯರು ಆಗಿನ “ಚಲುಕಿ”ಗಳಾಗಿ ಅರಸೊತ್ತಿಗೆ ತೀರ ಆಪ್ತ ಭಾವ ಮೂಡಿಸುತ್ತೆ.
ನೀವೇನೇ ಹೇಳಿ, ಇತಿಹಾಸವನ್ನು ಇಷ್ಟು ಚೆಂದವಾಗಿ ಬರೆದರೆ, ಹೊಸ ಹೊಸ ಆಯಾಮಗಳನ್ನು ಅಧ್ಯಯನದ ಮೂಲಕ ನಮ್ಮ ಮುಂದಿಟ್ಟರೆ ಅದು ಓದಿಸುವುದು ಮಾತ್ರವಲ್ಲ, ಇನ್ನೊಂದು ಶತಮಾನ ಕಳೆದರೂ ನಮ್ಮ ಮುಂದಿನ ಪೀಳಿಗೆಗೆ ದಾಟುತ್ತದೆ. ಇದಿಷ್ಟೂ ನಾನು ಗ್ರಹಿಸಿದ್ದರ ಪ್ರಮುಖ ಅಂಶಗಳು. ನಿಮ್ಮ ಓದಿಗೆ ಇನ್ನೂ ಅನೇಕ ಮಜಲುಗಳು ತೆರೆದುಕೊಳ್ಳಬಹುದು.
ಥ್ಯಾಂಕ್ಯೂ ಕರಣಂ ಪವನ್ ಪ್ರಸಾದ್ ಅವರೇ, ನಾನು ಒಳ್ಳೆಯ ವಿಮರ್ಶಕಿಯಲ್ಲ, ಆದರೆ ಪ್ರತೀ ಸಲ ನಿಮ್ಮ ಪುಸ್ತಕದ ಓದಿನಿಂದ ಜ್ಞಾನಕ್ಕಂತೂ ಮೋಸವಿರುವುದಿಲ್ಲ ಎನ್ನುವ ಕಾರಣಕ್ಕೆ ನಿಮ್ಮ ಮುಂದಿನ ಪುಸ್ತಕಕ್ಕೆ ಕಾಯುತ್ತಿರುವೆ
-Pallavi Idoor (Source Link…)


5.
ಬೆಂಪೂರ ಮಾರ್ಗಂ – ಕಳೆದ ೧೬ ದಿನಗಳಿಂದ ಪ್ರತಿ ರಾತ್ರಿಯೂ ಓದಿದ ಮಹಾಗದ್ಯ.
೩೭೩ ಪುಟಗಳಿರುವ ಸಾಮಾನ್ಯ fiction ಅನ್ನು ಸುಲಭವಾಗಿ ಐದಾರು ಗಂಟೆಗಳಲ್ಲಿ ಪಟ್ಟು ಹಾಕಿ ಕುಳಿತು ಓದಿಬಿಡಬಹುದು.
ಈ ಪುಸ್ತಕವನ್ನು ಓದಲು ಕೈಗೆತ್ತಿಕೊಂಡ ದಿನವೇ ಅನಿಸಿತು, ಇದು ಒಂದೇ ಏಟಿಗೆ ಓದಿ ಮುಗಿಸುವ ಪುಸ್ತಕ ಅಲ್ಲ ಅಂತ. ಪುಸ್ತಕದ ಭಾಷೆ ಸರಳವಾಗಿಯೇ ಇದೆ, ಆದರೆ ಪುಸ್ತಕ ಎರಡು ತಲೆಮಾರುಗಳ ಇತಿಹಾಸವನ್ನೂ, ನೂರಾರು ಪಾತ್ರಗಳನ್ನು, ವಿಶಾಲವಾದ ಕರ್ಣಾಟ ನಾಡಿನ ಜನಜೀವನವನ್ನೂ ಕಣ್ಣ ಮುಂದೆ ತೆರೆದಿಡುತ್ತದೆ.
ಗಂಗಮಲ್ಲ ಎಂಬ ಬೆಂಪೂರಿನ ಆಡಳಿತಗಾರನ ಕಥೆಯಿಂದ ಶುರುವಾಗುವ ಈ ಮಹಾಗದ್ಯ, ಕರ್ಣಾಟ ಸಾಮ್ರಾಜ್ಯದ ಇಬ್ಬರು ಪರಾಕ್ರಮಿ ಚಕ್ರವರ್ತಿಗಳಾದ ಪರಮೇಶ್ವರ ಪುಲಿಕೇಶಿ ಮತ್ತು ೧ನೇ ವಿಕ್ರಮಾದಿತ್ಯರ ಚರಿತ್ರೆಯನ್ನೂ ಕಟ್ಟಿಕೊಡುತ್ತದೆ. ಅವರಷ್ಟೇ ಅಲ್ಲ, ಆ ಕಾಲಘಟ್ಟದ ಹುಯಾನ್ ತ್ಸಾಂಗ್, ಹರ್ಷವರ್ಧನ, ಮಹೇಂದ್ರವರ್ಮ, ನರಸಿಂಹವರ್ಮ, ಪ್ರವಾದಿ ಮುಹಮ್ಮದರು, ಪ್ರವಾದಿ ಮೋಸೆಸ್, ಇರಾನಿನ ಖುಸ್ರೋ ಎಲ್ಲರೂ ಕಣ್ಣ ಮುಂದೆ ಹಾದು ಹೋಗುತ್ತಾರೆ.
ಈ ಕೃತಿಯಲ್ಲಿ ಇತಿಹಾಸ ಕಟ್ಟಿಕೊಡುವುದು ಹೇಗಂದರೆ, ಅಕ್ಷರಶಃ ಸಾವಿರದ ನಾಲ್ನೂರು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿ ಕೂರಿಸುವುದು. ಆಡುಭಾಷೆಯ ಕನ್ನಡ ಮತ್ತು ಹಳೆಗನ್ನಡದ fusion ಅಂತೂ ಬೇಳೆ ಹೋಳಿಗೆಗೆ ಮಾವಿನ ರಸಾಯನದಂತಿದೆ.
ಪವನ್ ಪ್ರಸಾದ್‌ರ ಹಿಂದಿನ ಪುಸ್ತಕಗಳಲ್ಲೂ ಬೇಗೂರು ಸುಂದರವಾಗಿ ಚಿತ್ರಿತವಾಗಿದೆ. ಈ ಬಾರಿ ಬೆಂಪೂರೇ (ಬೇಗೂರು) ಕೇಂದ್ರವಾಗಿರುವ ಬೆಂಪೂರ ಮಾರ್ಗಂ ಓದಿದ ಮೇಲಂತೂ ನಮ್ಮ ನಾಡಿನ ಬಗ್ಗೆ ಹೆಮ್ಮೆ ಮೂಡದೇ ಇರಲಾರದು.
೫-೬ ವರ್ಷಗಳ ಶ್ರಮ ಹಾಕಿ ಈ ಪುಸ್ತಕ ಅಲ್ಲ ಭವ್ಯಕೃತಿಯಂ ಬರೆದ ಕರಣಂ ಪವನ್ ಪ್ರಸಾದ್‌ರಿಗೂ, ಬಹಳ ಒಳ್ಳೆಯ ಪುಸ್ತಕ ಪ್ರಕಟಿಸುತ್ತಿರುವ ಕಾನ್ಕೆವ್ ಪ್ರಕಾಶನದ ನಂದೀಶ್‌ರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳು.
ಭಲಾಬಲ ಬೆಂಪೂರ ಮಾರ್ಗಂ
ಉಘೇ ಉಘೇ ಬೆಂಪೂರ ಮಾರ್ಗಂ !
–Darshan Jain (Source link…)