SIR (ಎಸ್.ಐ.ಆರ್) ನೋಟಿಸ್ ವಿವರಗಳು ಮತ್ತು ಮತದಾರರ ಮಾರ್ಗದರ್ಶಿ
ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಅಧಿಕೃತವಾಗಿ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ (Draft Electoral Roll) ನಿಮ್ಮ ಹೆಸರನ್ನು ಪರಿಶೀಲಿಸಿದ ಬಳಿಕ ಮುಂದೇನು? ಈ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು? ಎಂಬುದರ ಬಗ್ಗೆ ತಿಳಿದ ಬಳಿಕ, ಎಸ್ಐಆರ್ ನೋಟಿಸ್ ಬಂದರೆ ಏನು ಮಾಡಬೇಕು? ನೋಟಿಸ್ ಪಡೆ್ದ ಬಳಿಕ ಮುಂದಿನ ಪ್ರಕ್ರಿಯೆ ಹೇಗೆ? ಯಾವೆಲ್ಲ ದಾಖಲೆ ಬೇಕಿದೆ ಎಂಬುದರ ಬಗ್ಗೆ ಕರ್ನಾಟಕ ಇನ್ ಸೈಟ್ ಯೂಟ್ಯೂಬ್ ವಾಹಿನಿ ವಿಶ್ಲೇಷಿಸಿದೆ.
ನೋಟಿಸ್ ಹಾಗೂ ಡಿಲೀಟ್:
ಪ್ರಮುಖವಾಗಿ ಗೈರುಹಾಜರಿ, ಬೇರೆಡೆಗೆ ಸ್ಥಳಾಂತರಗೊಂಡವರು, ಮೃತಪಟ್ಟವರು ಮತ್ತು ನಕಲಿ ವೋಟರ್ ಐಡಿ ಹೊಂದಿರುವವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಸುಮಾರು 43.80 ಲಕ್ಷ ಜನರಿಗೆ ಬಿಎಲ್‌ಒಗಳು ನೋಟಿಸ್ ನೀಡಲಿದ್ದು, ನೋಟಿಸ್ ಪಡೆದವರು ಅದರಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಜೊತೆಗೆ ನಿಗದಿತ ದಿನಾಂಕದಂದು ಇಆರ್‌ಓ (ERO) ಮುಂದೆ ಖುದ್ದಾಗಿ ಹಾಜರಾಗಿ ವಯಸ್ಸು ಮತ್ತು ವಿಳಾಸದ ಅಸಲಿ ದಾಖಲೆಗಳನ್ನು (ಪಡಿತರ ಚೀಟಿ, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಇತ್ಯಾದಿ) ತೋರಿಸಬೇಕಾಗುತ್ತದೆ.
ಎಲ್ಲಾ ತಿದ್ದುಪಡಿಗಳು ಹಾಗೂ ವಿಚಾರಣೆಗಳ ಪ್ರಕ್ರಿಯೆ ಮುಗಿದ ನಂತರ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ.
ಚುನಾವಣಾ ಅಧಿಕಾರಿಗಳಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಿಕೊಡಲು ನಿರಾಕರಿಸಿದ ಮತದಾರರ ಹೆಸರುಗಳನ್ನು ಆಯೋಗವು ‘ಅದರ್ಸ್ ಕ್ಯಾಟಗರಿ’ (Others Category) ಗೆ ಸೇರಿಸಿದೆ

೧. SIR ನೋಟಿಸ್ ಹೇಗಿರುತ್ತದೆ ಮತ್ತು ಅದರಲ್ಲಿ ಯಾವ ಮಾಹಿತಿ ಇರುತ್ತದೆ?
ಮೇಲ್ಭಾಗದ ವಿವರಗಳು: ನೋಟಿಸ್‌ನ ಮೇಲ್ಭಾಗದಲ್ಲಿ ನಿಮ್ಮ ಹೆಸರು, ಎಪಿಕ್ (EPIC) ಸಂಖ್ಯೆ, ಮತಗಟ್ಟೆಯ ವಿವರ, ಕ್ರಮ ಸಂಖ್ಯೆ ಹಾಗೂ ನಿಮ್ಮ ವಿಳಾಸದ ಮಾಹಿತಿ ಇರುತ್ತದೆ.
ಕ್ಯೂಆರ್ ಕೋಡ್ (QR Code): ಇದರ ಬಲಭಾಗದಲ್ಲಿ ಒಂದು ಕ್ಯುಆರ್ ಕೋಡ್ ಇರಲಿದ್ದು, ಈ ಕೋಡ್ ಮೂಲಕ ಮತದಾರರು ಆನ್‌ಲೈನ್‌ನಲ್ಲಿ ಲಭ್ಯವಿರುವ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು.
ಮೂರು ಪ್ರಮುಖ ಪಾಯಿಂಟ್‌ಗಳು: ನೋಟಿಸ್‌ನ ಕೆಳಭಾಗದಲ್ಲಿ ಈ ಕೆಳಗಿನ ಮೂರು ಅಂಶಗಳಿರುತ್ತವೆ:
-ಹಿಂದಿನ (2002ರ) ಎಸ್‌ಐಆರ್ ಸಮಯದಲ್ಲಿ ನಿಮ್ಮ ಅಥವಾ ನಿಮ್ಮ ಸಂಬಂಧಿಕರು ನೋಂದಾಯಿತ ಮತದಾರರು (Registered Voters) ಎಂಬುದನ್ನು ದೃಢಪಡಿಸಲು ಬೇಕಾದ ವಿವರಗಳನ್ನು ನೀವು ನೀಡಿಲ್ಲ ಎಂಬ ಮಾಹಿತಿ
-ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ನೀವು ದಾಖಲೆಗಳ ಸಹಿತ ಹಾಜರಾಗಬೇಕು ಎಂಬ ಸೂಚನೆ
-ಸಮಸ್ಯೆ ಅಥವಾ ಸಹಾಯಕ್ಕಾಗಿ ನೀವು ಸಂಪರ್ಕಿಸಬೇಕಾದ ಬೂತ್ ಮಟ್ಟದ ಅಧಿಕಾರಿ (BLO) ವಿವರಗಳು
ಎಚ್ಚರಿಕೆ ಸೂಚನೆಗಳು: ನೋಟಿಸ್‌ನ ಎರಡನೇ ಪುಟದಲ್ಲಿ ಮೂರು ಪ್ರಮುಖ ಸೂಚನೆಗಳಿರುತ್ತವೆ. ಇದರಲ್ಲಿ ಯಾವುದೇ ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಯನ್ನು ನೀಡಬಾರದು ಎಂದು ಎಚ್ಚರಿಸಲಾಗಿದ್ದು, ಒಂದು ವೇಳೆ ನೀಡಿದ ದಾಖಲೆ ಸುಳ್ಳು ಅಥವಾ ನಕಲಿಯಾಗಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಲಾಗಿದೆ
ಸ್ವೀಕೃತಿ ಪತ್ರ: ನೋಟಿಸ್‌ನ ಕೊನೆಯ ಭಾಗದಲ್ಲಿ ತಂದೆ/ತಾಯಿ ಹೆಸರು, ನಿಮ್ಮ ಹೆಸರು, ಮತಗಟ್ಟೆ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಸಹಿ ಹಾಕಲು ಸ್ವೀಕೃತಿ ಪತ್ರದ ವಿಭಾಗವಿರುತ್ತದೆ (ಇದನ್ನು ಕಚೇರಿ ಬಳಕೆಗೆ ಬಳಸಲಾಗುತ್ತದೆ)
೨. ವಿಚಾರಣೆಗೆ ಯಾವ ದಿನ ಮತ್ತು ಎಲ್ಲಿಗೆ ಹಾಜರಾಗಬೇಕು?
ದಿನಾಂಕ ಮತ್ತು ಸಮಯ: ನೀವು ವಿಚಾರಣೆಗೆ ಹಾಜರಾಗಬೇಕಾದ ದಿನಾಂಕ ಹಾಗೂ ಸಮಯವನ್ನು ನೋಟಿಸ್‌ನಲ್ಲಿ ಮೊದಲೇ ಮುದ್ರಿಸಲಾಗಿರುತ್ತದೆ (ಪ್ರಿಂಟ್ ಆಗಿರುತ್ತದೆ)
ಸ್ಥಳ: ಹಾಜರಾಗಬೇಕಾದ ಸ್ಥಳದ ವಿವರವನ್ನು ಖಾಲಿ ಬಿಡಲಾಗಿದ್ದು, ಅದನ್ನು ನಿಮ್ಮ ಬೂತ್ ಮಟ್ಟದ ಅಧಿಕಾರಿ (BLO) ಬರೆದು ತಿಳಿಸಿರುತ್ತಾರೆ. ಒಂದು ವೇಳೆ ನೋಟಿಸ್ ತಲುಪದಿದ್ದರೆ ಕೂಡಲೇ ನಿಮ್ಮ ಬಿಎಲ್‌ಒ ಅವರನ್ನು ಸಂಪರ್ಕಿಸಬೇಕು
೩. ಅಗತ್ಯ ದಾಖಲೆಗಳ ಸಂಪೂರ್ಣ ಪಟ್ಟಿ ವಿಚಾರಣೆ ವೇಳೆ ಈ ಕೆಳಗಿನ ಯಾವುದಾದರೂ ಅಧಿಕೃತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ:
-ಕೇಂದ್ರ/ರಾಜ್ಯ ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳ ನಿಯಮಿತ ಉದ್ಯೋಗಿಯ ಗುರುತಿನ ಚೀಟಿ (ID Card)
-ಸರ್ಕಾರಿ ಇಲಾಖೆ ಅಥವಾ ಉದ್ಯಮಗಳ ಪಿಂಚಣಿದಾರರ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿಗಾಗಿ ನೀಡಲಾಗಿರುವ ಸರ್ಕಾರಿ ಆದೇಶ
-1987ರ ಜುಲೈ 1 ಕ್ಕೂ ಮೊದಲು ಸರ್ಕಾರ, ಸ್ಥಳೀಯ ಸಂಸ್ಥೆಗಳು, ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ (LIC) ಅಥವಾ ಯಾವುದೇ ಪಿಎಸ್‌ಯುಗಳು ನೀಡಿದ ಭಾರತದ ಗುರುತಿನ ಚೀಟಿ/ಪ್ರಮಾಣಪತ್ರ/ದಾಖಲೆ
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ
-ಪಾಸ್‌ಪೋರ್ಟ್
-ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯಗಳಿಂದ ಪಡೆದ ಮೆಟ್ರಿಕ್ಯುಲೇಷನ್ ಅಥವಾ ಇತರೆ ಶೈಕ್ಷಣಿಕ ಪ್ರಮಾಣಪತ್ರಗಳು
-ಸಕ್ಷಮ ರಾಜ್ಯ ಪ್ರಾಧಿಕಾರದಿಂದ ನೀಡಲಾದ ಶಾಶ್ವತ ನಿವಾಸ ಪ್ರಮಾಣಪತ್ರ
-ಅರಣ್ಯ ಹಕ್ಕುಗಳ ಸರ್ಟಿಫಿಕೇಟ್
-ಒಬಿಸಿ, ಎಸ್ಸಿ, ಎಸ್ಟಿ ಅಥವಾ ಯಾವುದೇ ಹಿಂದುಳಿದ ವರ್ಗಕ್ಕೆ ಸಕ್ಷಮ ಪ್ರಾಧಿಕಾರ ನೀಡಿದ ಜಾತಿ ಪ್ರಮಾಣಪತ್ರ (Caste Certificate)
-ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪ್ರಮಾಣಪತ್ರ (ಇದು ಯಾವುದೇ ರಾಜ್ಯದ್ದಾದರೂ ನಡೆಯುತ್ತದೆ)
-ಕುಟುಂಬ ನೋಂದಣಿ ಕಾರ್ಡ್ (ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳಿಂದ ನೀಡಲ್ಪಟ್ಟದ್ದು)
-ಸರ್ಕಾರದಿಂದ ನೀಡಲಾದ ಭೂಮಿ ಅಥವಾ ಮನೆ ಹಂಚಿಕೆ ಪ್ರಮಾಣಪತ್ರ

ಆಧಾರ್ ಕಾರ್ಡ್
(ಗಮನಿಸಿ: ಇದರೊಂದಿಗೆ ಎಸ್‌ಐಆರ್‌ನ ಮತದಾರ ಪಟ್ಟಿಯ ನಕಲು ಪ್ರತಿ ಹಾಗೂ ನಿಮ್ಮ ಬಳಿ ಇರುವ ಇನ್ನೊಂದು ಫಾರ್ಮ್‌ನ ಪ್ರತಿಯನ್ನು ಜೊತೆಯಲ್ಲಿ ಇರಿಸಿಕೊಳ್ಳಿ).
೪. ಆಧಾರ್ ಕಾರ್ಡ್ ಮಾತ್ರ ಸಾಕೇ? ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್ ಮತ್ತು ಶೈಕ್ಷಣಿಕ ದಾಖಲೆಗಳ ಮಹತ್ವ
ಆಧಾರ್ ಕಾರ್ಡ್ ಒಂದೇ ಸಾಲದು: “ಆಧಾರ್ ಕಾರ್ಡ್ ಒಂದಿದ್ದರೆ ಸಾಕು” ಎಂದು ನಿರ್ಲಕ್ಷ್ಯ ವಹಿಸಬಾರದು
ಇತರ ದಾಖಲೆಗಳ ಮಹತ್ವ: ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಯಶಸ್ವಿಯಾಗಿ ಉಳಿಸಿಕೊಳ್ಳಲು ಜನನ ಪ್ರಮಾಣಪತ್ರ, ಮಾರ್ಕ್ಸ್ ಕಾರ್ಡ್ (ಶೈಕ್ಷಣಿಕ ಪ್ರಮಾಣಪತ್ರ) ಅಥವಾ ಪಾಸ್‌ಪೋರ್ಟ್‌ನಂತಹ ಪ್ರಮುಖ ದಾಖಲೆಗಳನ್ನು ಕೊಂಡೊಯ್ಯುವುದು ಬಹಳ ಮುಖ್ಯ
ಮೂಲ ಮತ್ತು ಜೆರಾಕ್ಸ್ ಪ್ರತಿಗಳು: ವಿಚಾರಣೆಗೆ ಹೋಗುವಾಗ ಎಲ್ಲಾ ಮೂಲ ದಾಖಲೆಗಳು (Originals) ಮತ್ತು ಅವುಗಳ ಜೆರಾಕ್ಸ್ ಪ್ರತಿಗಳು ಎರಡನ್ನೂ ಕಡ್ಡಾಯವಾಗಿ ಜೊತೆಯಲ್ಲಿ ಇಟ್ಟುಕೊಳ್ಳಬೇಕು
೫. ವಿಚಾರಣೆಯ ನಂತರ ಮೇಲ್ಮನವಿ ಅವಕಾಶ
ನಿಗದಿಪಡಿಸಿದ ದಿನಾಂಕದಂದು ವಿಚಾರಣೆಗೆ ಹಾಜರಾದಾಗ ಒಂದು ವೇಳೆ ಆಯೋಗವು ನಿಮ್ಮ ಮನವಿಯನ್ನು ತಿರಸ್ಕರಿಸಿದರೆ, ಗಾಬರಿಯಾಗಬೇಕಿಲ್ಲ. ನಿಮಗೆ ಎರಡನೇ ಬಾರಿ ಮೇಲ್ಮನವಿ ಸಲ್ಲಿಸಿ ನಿಮ್ಮ ಹಕ್ಕನ್ನು ಮಂಡಿಸಲು ಅವಕಾಶವಿರುತ್ತದೆ
೬. SIR ಪ್ರಕ್ರಿಯೆ ಕುರಿತು ಮತದಾರರು ಗಮನಿಸಬೇಕಾದ ಪ್ರಮುಖ ಅಂಶಗಳು
ಖುದ್ದಾಗಿ ಹಾಜರಾಗುವುದು ಕಡ್ಡಾಯ: ಆಯೋಗವು ನೋಟಿಸ್ ಅಥವಾ ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನು ಆನ್‌ಲೈನ್‌ನಲ್ಲಿ ನೀಡಿಲ್ಲ. ಆದ್ದರಿಂದ ಕೆಲಸದ ನಿಮಿತ್ತ ಹೊರಗಿರುವವರು ಅಥವಾ ವಿದೇಶದಲ್ಲಿರುವವರೂ ಸಹ ಖುದ್ದಾಗಿ ನಿಗದಿತ ದಿನದಂದು ಸ್ಥಳಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕಾಗುತ್ತದೆ.
ನಕಲಿ ದಾಖಲೆಗಳಿಗೆ ಶಿಕ್ಷೆ: ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಗಳನ್ನು ನೀಡಬಾರದು, ಹಾಗೆ ನೀಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
BLO ಸಂಪರ್ಕಿಸಿ: ಒಂದು ವೇಳೆ ನಿಮ್ಮ ಹೆಸರು ಕರುಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದು, ನಿಮಗೆ ಇನ್ನೂ ನೋಟಿಸ್ ಬಂದಿಲ್ಲವಾದರೆ ತಕ್ಷಣವೇ ನಿಮ್ಮ ಬಿಎಲ್‌ಒ (BLO) ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
