ಕಾಫಿ ವೃತ್ತಾಂತ
ಕಾಫಿಯು ಕೇವಲ ಒಂದು ಪಾನೀಯವಲ್ಲ, ಅದು ಜಗತ್ತಿನಾದ್ಯಂತ ಅಸಂಖ್ಯಾತ ಜನರ ಭಾವನೆ ಮತ್ತು ದಿನಚರಿಯ ಭಾಗವಾಗಿದೆ, ಬದುಕಿನ ಅಂಗವಾಗಿದೆ. ಸುಖ, ದುಃಖ ಸಮ್ಮಿಶ್ರಣವಾಗಿ ಸಮಾಜವಾದ ಎಲ್ಲಾ ಸ್ತರದ ಜನರ ಮೆಚ್ಚಿನ ಪೇಯವಾಗಿ ಬೆಳೆದಿದೆ.
ಕಾಫಿಯ ಉಗಮವು ಇಥಿಯೋಪಿಯಾದಲ್ಲಿ ಮತ್ತು ವಾಣಿಜ್ಯ ಬೆಳೆಯಾಗಿ ಯೆಮೆನ್ ದೇಶದಿಂದ ವಿಶ್ವಕ್ಕೆ ಪರಿಚಯವಾಯಿತು. ಅಲ್ಲಿಂದ ಇದು ಇಸ್ತಾಂಬುಲ್, ಇಂಗ್ಲೆಂಡ್ ಸೇರಿದಂತೆ ವಿಶ್ವದ ಮೂಲೆ ಮೂಲೆಗೂ ಪಸರಿಸಿತು.
ಭಾರತದಲ್ಲಿ ಹದವಾಗಿ ಚಿಕೋರಿ ಬೆರೆಸಿದ ಚಿಕ್ಕಮಗಳೂರು ಮತ್ತು ಚೆನ್ನೈನ ಫಿಲ್ಟರ್ ಕಾಫಿ ಅತ್ಯಂತ ಜನಪ್ರಿಯವಾಗಿದೆ. ಇದಲ್ಲದೆ, ಕೋಲ್ಡ್ ಕಾಫಿ, ಕೀಟೋ, ಬುಲೆಟ್, ಬ್ಲಾಕ್ ಕಾಫಿ ಅಲ್ಲದೆ, ಅಡುಗೆ ಮನೆಯ ಸಂಬಾರು ಪದಾರ್ಥಗಳೆಲ್ಲ ಕಾಫಿಯ ಕಷಾಯಕ್ಕೆ ಸೇರಿ ದೇಹಕ್ಕೂ ಮನಸ್ಸಿಗೂ ಹಿತ ಎನಿಸಿಕೊಳ್ಳುತ್ತಿದೆ.
ಕಾಫಿ ಜನಪ್ರಿಯತೆ ಹೆಚ್ಚಿಸುವಲ್ಲಿ ಉಡುಪಿ ಹೋಟೆಲ್‌ಗಳು, ಬೆಂಗಳೂರಿನ ದರ್ಶಿನಿಗಳ ಪಾತ್ರ ಹಿರಿದು. ಕಾಫಿ ಡೇ ಮೂಲಕ ನಮ್ಮಲ್ಲಿನ ಕಾಫಿ ಕೂಡಾ ಸ್ಟಾರ್ ಬಕ್ಸ್ ಮುಂತಾದ ದೈತ್ಯ ಕಂಪನಿಗಳ ಮಟ್ಟಕ್ಕೆ ಬೆಳೆಯ ಬಹುದು ಎಂಬುದು ಸಾಬೀತಾಯಿತು. ಭಾರತದಲ್ಲೂ ಕೆಫೆ ಕಲ್ಚರ್ ಮೊದಲಾಯಿತು.
ಕಾಫಿ ಇತಿಹಾಸ, ಕಾಫಿ ಬೆಳೆ, ಸಂಸ್ಕೃತಿ ಕುರಿತಂತೆ ವಿಶ್ಲೇಷಣಾತ್ಮಕ ವಿಡಿಯೋ:
ಕಾಫಿ ಇತಿಹಾಸ:
ಇಥಿಯೋಪಿಯಾದಲ್ಲಿ ಒಬ್ಬ ಮೇಕೆ ಮೇಯಿಸುವಾತ ಒಂದು ದಿನ ಒಂದು ಗುಡ್ಡ ಹತ್ತುತ್ತಾನೆ. ಅಲ್ಲಿ ಮೇಕೆಗಳು ಚೆರ್ರಿ ಥರಾ ಕಾಣುತ್ತಿದ್ದ ಹಣ್ಣುಗಳನ್ನು ತಿಂದು ಮೇಕೆಗಳು ಕುಣಿಯುತ್ತಾ ಇದ್ದಿದ್ದನ್ನು ನೋಡುತ್ತಾನೆ. ನಂತರ ಆ ಹಣ್ಣುಗಳನ್ನು ತಂದು ಬಿಸಿ ನೀರಿನಲ್ಲಿ ಹಾಕಿ, ಕುದಿಸಿ ಕಷಾಯ ಮಾಡಿ ಕುಡಿಯುತ್ತಾನೆ. ಹೀಗೆ ಅವನು ಮಾಡಿದ ಕಷಾಯ ಎಲ್ಲರಿಗೂ ಇಷ್ಟವಾಗುತ್ತೆ. ಮೇಕೆಗಳು, ಗುಡ್ಡ ಮ್ಯಾಜಿಕ್ ಡ್ರಿಂಕ್ ತಯಾರಿಸುವ ಈತ ಅಲ್ಲಿನವರಿಗೆ ಯೇಸು ಕ್ರಿಸ್ತನಂತೆ ಗೋಚರಿಸುತ್ತಾನೆ.

ಇಥಿಯೋಪಿಯಾದ ನೈಋತ್ಯ ಭಾಗದ ಕಫಾ(Kaffa) ಎಂಬ ಪ್ರಾಂತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ Arabica coffee plant(Coffea arabica) ಕಂಡು ಬಂದಿದ್ದು, ಹಾಗೂ ಸೇವನೆಯಾಗಿದ್ದು ಹೀಗೆ. ವಿಶೇಷ ಎಂದರೆ ಕಫಾ ಪ್ರಾಂತ್ಯದ ಈ ಪಾನೀಯ ಕಾಫಿ ಎಂದಾಯಿತು ಎಂದು ಸರಳವಾಗಿ ಹೇಳಬಹುದಾದರೂ, ಆ ಪ್ರಾಂತ್ಯದಲ್ಲಿ ಕಾಫಿಯನ್ನು ಬನ್(bun), ಬನಿ(buni) ಎಂದು ಕರೆಯುತ್ತಿದ್ದರಂತೆ.
ನಂತರ ಯೆಮೆನ್ ಮೊಟ್ಟ ಮೊದಲ ಬಾರಿಗೆ ಕಾಫಿ ಬೆಳೆ ಹಾಗೂ ವ್ಯಾಪಾರ ಮಾರಾಟದ ರುಚಿಯನ್ನು ಎಲ್ಲರಿಗೂ ಹತ್ತಿಸಿತು. ಅರೇಬಿಕ್ ಭಾಷೆಯಲ್ಲಿ qahwah, ತುರ್ಕಿಯಲ್ಲಿ Kahve, ಇಟಾಲಿಯನ್ ನಲ್ಲಿ caffe, ಫ್ರೆಂಚ್ cafe ಡಚ್ koffie ಹಾಗೂ ಆಂಗ್ಲರ ಬಾಯಲ್ಲಿ coffeeಯಾಗಿ ಬೆಳೆಯಿತು.

ಚಿಕ್ಕಮಗಳೂರು ಹಾಗೂ ಕಾಫಿ:
ಭಾರತದ ಕಾಫಿ ಪಯಣವು 17ನೇ ಶತಮಾನದಲ್ಲಿ ಆರಂಭವಾಯಿತು. ಸೂಫಿ ಸಂತ ಬಾಬಾ ಬುಡನ್ ಅವರು ಮೆಕ್ಕಾದಿಂದ ಹಿಂತಿರುಗುವಾಗ ಯೆಮನ್‌ನ ಮೊಚಾ ಬಂದರಿನಿಂದ ಏಳು ಕಾಫಿ ಬೀಜಗಳನ್ನು ಗುಟ್ಟಾಗಿ ತಂದರು. ಇದನ್ನು ಅವರು ಕರ್ನಾಟಕದ ಚಿಕ್ಕಮಗಳೂರಿನ ಚಂದ್ರದ್ರೋಣ ಬೆಟ್ಟಗಳಲ್ಲಿ ನೆಟ್ಟರು, ಅದು ಇಂದು ಭಾರತದ ಕಾಫಿಯ ಜನ್ಮಸ್ಥಳವಾಗಿ ಗುರುತಿಸಲ್ಪಟ್ಟಿದೆ.
ವಾಣಿಜ್ಯ ಬೆಳವಣಿಗೆ:
19ನೇ ಶತಮಾನದ ವೇಳೆಗೆ ಬ್ರಿಟಿಷರ ಆಳ್ವಿಕೆಯಲ್ಲಿ ಇದು ದೊಡ್ಡ ಮಟ್ಟದ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿತು. ಇಂದು ಭಾರತವು ವಿಶ್ವದ ಆರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಮುಖ ಬೆಳೆಗಾರ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ವಾಣಿಜ್ಯವಾಗಿ ಕೊಡಗು ನಂತರ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲದೆ ಬಯಲು ಸೀಮೆ, ಅರೆ ಮಲೆನಾಡು ಪ್ರದೇಶಗಳಲ್ಲೂ ಬೆಳೆಯಲಾಗುತ್ತಿದೆ.
ಪ್ರಮುಖ ಕಾಫಿ ತಳಿಗಳು:
ಭಾರತದಲ್ಲಿ ವಿಶೇಷವಾಗಿ ಎರಡು ಪ್ರಮುಖ ತಳಿಗಳನ್ನು ಬೆಳೆಯಲಾಗುತ್ತದೆ:
ಅರೇಬಿಕಾ (Arabica): ಇದು ಮೃದುವಾದ ಮತ್ತು ಸಿಹಿ ರುಚಿಯನ್ನು ಹೊಂದಿರುತ್ತದೆ. ಇದರಲ್ಲಿ SLN-795 and SLN-9 ಅತ್ಯಂತ ಜನಪ್ರಿಯ ತಳಿಯಾಗಿದೆ.
ರೊಬಸ್ಟಾ (Robusta): ಇದು ಹೆಚ್ಚು ಕೆಫೀನ್ ಹೊಂದಿದ್ದು, ಕಹಿ ರುಚಿಯನ್ನು ಹೊಂದಿರುತ್ತದೆ. ದಕ್ಷಿಣ ಭಾರತದ ಫಿಲ್ಟರ್ ಕಾಫಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಕಾಫಿಯ ವಿವಿಧ ಬಗೆಗಳು: ಚಹಾಕ್ಕೆ ಹೋಲಿಸಿದರೆ ಕಾಫಿ ವೈವಿಧ್ಯವಾಗಿ ಬೆಳೆಯುವುದು, ಬೆರೆಯುವುದಕ್ಕೆ ಸಾಕಷ್ಟು ಅವಕಾಶ, ದಾರಿಗಳಿವೆ. ಸದ್ಯಕ್ಕೆ ಜನಪ್ರಿಯವಾಗಿವ ಪ್ರಕಾರಗಳಲ್ಲಿ:
- ಇಟಲಿಯ ಎಸ್‌ಪ್ರೆಸೊ (Espresso): ಇದು ಸಾಂದ್ರವಾದ ಕಾಫಿ
- ಮಕಿಯಾಟೊ (Macchiato): ಎಸ್‌ಪ್ರೆಸೊಗೆ ಸ್ವಲ್ಪ ಹಾಲು ಅಥವಾ ನೊರೆಯನ್ನು ಸೇರಿಸಿ. ತಯಾರಿಸಲಾಗುತ್ತದೆ
- ಲ್ಯಾಟ್ಟೆ (Latte): ಇದರಲ್ಲಿ ಹಾಲಿನ ಪ್ರಮಾಣ ಹೆಚ್ಚಿರುತ್ತದೆ.
- ಕ್ಯಾಪುಚಿನೋ (Cappuccino): ಡಾರ್ಕ್ ಚಾಕೊಲೇಟ್ ಅಂಶ ಮತ್ತು ದಪ್ಪನೆಯ ಹಾಲಿನ ನೊರೆಯನ್ನು ಇದು ಹೊಂದಿರುತ್ತದೆ.
- ಮೊಕಾ (Mocha): ಎಸ್‌ಪ್ರೆಸೊ, ಚಾಕೊಲೇಟ್ ಮತ್ತು ಹಾಲಿನ ಮಿಶ್ರಣ.
- ಅಮೆರಿಕಾನೊ (Americano): ಎಸ್‌ಪ್ರೆಸೊಗೆ ಬಿಸಿ ನೀರನ್ನು ಸೇರಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ.
ಆರೋಗ್ಯದ ಪ್ರಯೋಜನಗಳು: ಕಾಫಿಯು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಉತ್ತಮ
ಮಿತವಾಗಿ ಕಾಫಿ ಸೇವಿಸುವುದರಿಂದ ಹಲವಾರು ಲಾಭಗಳಿವೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಭಾವನಾತ್ಮಕ ಬೆಸುಗೆ: ಕಾಫಿಯು ಕೇವಲ ಮೆದುಳನ್ನು ಚುರುಕುಗೊಳಿಸುವುದು ಮಾತ್ರವಲ್ಲದೆ, ಜನರ ನಡುವೆ ಸಂಭಾಷಣೆಯನ್ನು ಬೆಳೆಸುವ ಮತ್ತು ಮನಸ್ಸನ್ನು ಪ್ರಫುಲ್ಲಗೊಳಿಸುವ ಕೆಲಸ ಮಾಡುತ್ತದೆ. ಇದು ಒಂದು ಉತ್ತಮ ‘ಮೂಡ್ ಎಲಿವೇಟರ್’ ಆಗಿ ಕಾರ್ಯನಿರ್ವಹಿಸುತ್ತದೆ. ಇಟಾಲಿಯನ್, ಐರಿಷ್ ಕಾಫಿ ಪ್ಲೇ ಲಿಸ್ಟ್ ಇದೆ, ಕಾಫಿ ಸಂಸ್ಕೃತಿ ಎಂಬುದು ಒಂದು ದೇಶದಿಂದ ಮತ್ತೊಂದಕ್ಕೆ ಬೇರೆ ಬೇರೆಯಾಗಿ ಆಪ್ತವಾಗಿದೆ.
ಇಂದು ಭಾರತೀಯ ಕಾಫಿಯು ತನ್ನ ವಿಶಿಷ್ಟ ಸುವಾಸನೆ ಮತ್ತು ಗುಣಮಟ್ಟದಿಂದಾಗಿ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಪ್ರತಿ ಕಪ್ ಕಾಫಿಯ ಹಿಂದೆ ರೈತರ ಕಠಿಣ ಶ್ರಮ ಮತ್ತು ಶತಮಾನಗಳ ಇತಿಹಾಸವಿದೆ. ನಿಮ್ಮ ಮುಂದಿನ ಕಾಫಿ ಕಪ್ ಸವಿಯುವಾಗ ಅದರ ಈ ಸುಂದರ ಇತಿಹಾಸವನ್ನು ನೆನಪಿಸಿಕೊಳ್ಳಿ, ಮಳೆಯಿರಲಿ, ಬಿಸಿಲಿರಲಿ ಕಾಫಿ ಸದಾ ಜೊತೆಗಿರಲಿ.

