Coffee King Kannada book review Financial life journey of VG Siddartha, CCD| ಕಾಫಿ ಕಿಂಗ್ -ಸಿದ್ದಾರ್ಥ ಹೆಗ್ಡೆ ಆರ್ಥಿಕ ಬದುಕಿನ ಕೈಪಿಡಿ

ಕಾಫಿ ಕಿಂಗ್-ಸಿದ್ದಾರ್ಥ ಹೆಗ್ಡೆ ಆರ್ಥಿಕ ಬದುಕಿನ ಕೈಪಿಡಿ

‘ಕೆಫೆ ಕಾಫಿ ಡೇ’ ಸಂಸ್ಥಾಪಕ ವೀರಪ್ಪ ಗಂಗಯ್ಯ ಸಿದ್ದಾರ್ಥ ಹೆಗ್ಡೆ ಅವರ ವ್ಯವಹಾರ, ಹೂಡಿಕೆ ಕುರಿತಂತೆ ಸಮಗ್ರ ನೋಟ ಬೀರಬಲ್ಲ ಕೈಪಿಡಿಯಾಗಿ ‘ಕಾಫಿ ಕಿಂಗ್’ ಕೃತಿಯನ್ನು ಕಾಣಬಹುದು. ಕಾನ್ಕೇವ್ ಮಾಧ್ಯಮ ಹಾಗೂ ಪ್ರಕಾಶನ ಹಾಗೂ ಲೇಖಕ ಕಾರ್ತಿಕಾದಿತ್ಯ ಬೆಳ್ಗೋಡು ಅವರು ಸತತವಾಗಿ ಸಂಗ್ರಹಯೋಗ್ಯ, ಅಧ್ಯಯನಶೀಲ ಕೃತಿಯನ್ನು ನೀಡಿದ್ದಾರೆ. 2025ರಲ್ಲಿ ಪರಿಸರ ಕಾಳಜಿಯುಳ್ಳ ‘ದೇವಭೂಮಿಯ ಮಹಾಪತನ’ ಕೃತಿ ಹಾಗೂ ಈಗ ಕಾಫಿ ಕಿಂಗ್ ಪುಸ್ತಕ. ಎರಡು ಅನುವಾದಿತ ಕೃತಿಯಾಗಿದ್ದರೂ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರವಹಿಸಲಾಗಿದೆ. ನಾಡಿನ ಹೆಮ್ಮೆಯ ಬ್ರ್ಯಾಂಡ್ ‘ಕೆಫೆ ಕಾಫಿ ಡೇ’ ಸ್ಥಾಪಕರಾದ ಸಿದ್ದಾರ್ಥ ಅವರ ವ್ಯಾವಹಾರಿಕ ಪ್ರಪಂಚ ಹಾಗೂ ಸಾಹಸಮಯ ಹೂಡಿಕೆ ಬಗ್ಗೆ ತಿಳಿಸುವ ಕಾಫಿ ಕಿಂಗ್ ಕೃತಿ, ಬ್ಯಾಂಕುಗಳಲ್ಲಿ ಉದ್ಯಮಕ್ಕಾಗಿ ಸಾಲ ಪಡೆಯುವವರಿಗೆ, ನವೋದ್ಯಮ ಸ್ಥಾಪಕರಿಗೂ ಮಾರ್ಗದರ್ಶನ ನೀಡಬಲ್ಲದು.

ನೂರಾರು ವರ್ಷಗಳ ಕಾಲದ ಇತಿಹಾಸವುಳ್ಳ ಪ್ಲಾಂಟರ್, ಸ್ವಾತಂತ್ರ್ಯ ಹೋರಾಟಗಾರರು, ಸರಳ ಸಜ್ಜನ ಸಹೃದಯಿ ಎನಿಸಿಕೊಂಡಿರುವ ದಿವಂಗತ ಗಂಗಯ್ಯ ಹೆಗ್ಡೆ ಅವರ ಸುಪುತ್ರರಾಗಿ ಸಿದ್ದಾರ್ಥ ಅವರು ಕುಟುಂಬದ ಪ್ರತಿಷ್ಠೆ, ಘನತೆ ಗೌರವ, ವಹಿವಾಟನ್ನು ವಿಸ್ತರಿಸಿ ಬೆಳೆಸಿದರು. ಸಿದ್ದಾರ್ಥ ಅವರ ಕುಟುಂಬಸ್ಥರು, ಕುವೆಂಪು, ಸೇನಾನಿ(ಕೃಪಾಕರ್ -ಸೇನಾನಿ ಖ್ಯಾತಿಯ) ಹೆಗ್ಡೆ, ತೇಜಸ್ವಿ ಕುಟುಂಬದ ಸಂಬಂಧ, ಕಾಫಿ ಬೆಳೆಗಾರರ ಬವಣೆ, ಕಾಫಿ ಬೋರ್ಡ್ ನಿಯಮಗಳು ಸೇರಿದಂತೆ ಹತ್ತು ಹಲವು ವಿಷಯಗಳು ಓದುಗರಿಗೆ ಆರಂಭದಲ್ಲೇ ಸಿಗಲಿದೆ.

The Global Soul of Coffee: History, Health Benefits, and Popular Brewing Styles | ಕಾಫಿ: ಇತಿಹಾಸ, ವಿಧಗಳು ಮತ್ತು ಆರೋಗ್ಯದ ಪ್ರಯೋಜನಗಳ ಒಂದು ನೋಟ

ಸಿದ್ದಾರ್ಥ ಅವರು ಚಿಕ್ಕಮಗಳೂರು ಜಿಲ್ಲೆಯ ಹಲವರ ಕನಸಿಗೆ ಇಂಬು ನೀಡಿ, ಯುವ ಪೀಳಿಗೆಯ ಆಶಾಕಿರಣವಾಗಿದ್ದವರು, ಎಸ್ಟೇಟ್ ಕೂಲಿಯಾಳು, ದೊಡ್ಡ ಕಂಪನಿ ಸಿಇಒಗಳು, ರಾಜಕಾರಣಿಗಳು ಹೀಗೆ ಎಲ್ಲಾ ಸ್ತರದವರಿಗೆ ಬೇಕಾಗಿದ್ದರೂ ಸರಳ ವ್ಯಕ್ತಿತ್ವ ಹೊಂದಿದ್ದ ಸಿದ್ದಾರ್ಥ, ಅಷ್ಟೇ ಸಂಕೀರ್ಣವಾದ ಹೂಡಿಕೆ ಜಾಲ ಬೆಳೆಸಿ, ಅದರಲ್ಲಿ ಸಿಲುಕಿಕೊಂಡಿದ್ದರು ಎಂಬುದನ್ನು ಇಲ್ಲಿ ಓದಬಹುದು.

“ಚಿಕ್ಕಮಗಳೂರಿನ ಪ್ಲಾಂಟರುಗಳು ಕಾಫಿ, ಏಲಕ್ಕಿ ಬೆಳೆದು ಉದ್ಧಾರ ಆಗಿದ್ದು, ಅಷ್ಟರಲ್ಲೇ ಇದೆ, ಲಾಭವಿಲ್ಲದ ಬಡಿವಾರ” ಎಂದು ಮೂದಲಿಸುವವರ ಮುಂದೆ ಸ್ವಂತವಾಗಿ ಬ್ರ್ಯಾಂಡ್ ಕಟ್ಟಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸಿದ್ದಾರ್ಥ ಹೆಗ್ಡೆ ಅವರಿಗೆ ಸಲ್ಲುತ್ತದೆ. ಈ ಕೃತಿಯ ಅನುವಾದದ ಬಗ್ಗೆ ಕಾನ್ಕೇವ್ ಸಂಸ್ಥೆಯ ನಂದೀಶ್ ಅವರು ಹೇಳಿದಾಗ ಕಾಫಿ ಪ್ರಿಯನಾದ ನಾನು ಸಹಜವಾಗಿ ಉತ್ತೇಜಿತನಾದೆ. ಸಿದ್ದಾರ್ಥರ ಸಾವಿನ ಸುದ್ದಿಯನ್ನು ಸುದ್ದಿ ಸಂಪಾದಕನಾಗಿ ಬರೆಯುವಾಗ ಇದ್ದ ಮನಸ್ಥಿತಿ ನನಗೆ ಇನ್ನು ನೆನಪಿದೆ.

ದುರಂತ ಅಂತ್ಯ: ಜುಲೈ 29ರಂದು ವಿಷಯ ತಿಳಿಯುವಾಗ ರಾತ್ರಿಯಾಗಿತ್ತು, ಮೂಡಿಗೆರೆಯ ಗೆಳೆಯರಿಗೆ ಕರೆ ಮಾಡಿ, ನಂತರ ಸುದ್ದಿ ಖಚಿತವೆ ಎಂದು ಪೊಲೀಸ್, ವರದಿಗಾರರ ಮೂಲ ಹುಡುಕಿದೆ, ಸಮಯಕ್ಕೆ ಸರಿಯಾಗಿ ವರದಿಗಾರರ ಸಂಪರ್ಕ ಸಿಗದೆ ಚಟಪಡಿಸುವಂತಾಗಿತ್ತು, ಸುದ್ದಿ ಸುಳ್ಳಾಗಲಿ, ಬದುಕಿರಬಹುದು ಎಂಬ ಆಲೋಚನೆಯಲ್ಲಿದ್ದೆ, ನಂತರ ಬಂದ ವರದಿಗಳು ಆಶಾದಾಯಕವಾಗಿರಲಿಲ್ಲ, ಪೊಲೀಸರ ಹುಡುಕಾಟದ ಬಗ್ಗೆ ಪ್ರಕಟಣೆ, ಟ್ವಿಟ್ಟರಲ್ಲಿ ಅನೇಕರ ಸಮಜಾಯಿಷಿ, ಆತಂಕ ಕಂಡು ಬಂದಿತ್ತು, ಸಿದ್ದಾರ್ಥರ ಕೊನೆ ಪತ್ರ ಎಂಬ ಪತ್ರವೊಂದು ಟ್ರೆಂಡ್ ಆಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಸಿಸಿಡಿ ನೆನಪುಗಳು, ಸಿದ್ದಾರ್ಥರ ಬಗ್ಗೆ ಸ್ಟೇಟಸ್, ಪೋಸ್ಟ್ ಹರಿದಾಡಿತ್ತು. ಹೋಯ್ಗೆ ಬಜಾರಿನಲ್ಲಿ ಸಿಕ್ಕ ಸಿದ್ದಾರ್ಥ ದೇಹ, ನೇತ್ರಾವತಿ ನದಿ ಸೇತುವೆ ಮೇಲೆ ನಿಂತು ಕಣ್ಣೀರಿಡುತ್ತಿದ್ದ ಚಿಕ್ಕಮಗಳೂರು ಕಡೆ ಜನ, ಜನಪ್ರತಿನಿಧಿ, ಮೃತದೇಹ ಹುಡುಕಲು ಪೊಲೀಸರು, ಅಗ್ನಿಶಾಮಕದಳ, ಆಡಳಿತ ವ್ಯವಸ್ಥೆ ಮಾಡಿದ ಸಾಹಸ ಎಲ್ಲವೂ ಕಣ್ಮುಂದೆ ಬರುತ್ತದೆ.

How to Become a Successful Leader? with Self Confidence explained in Kannada | ಯಶಸ್ವಿ ನಾಯಕರಾಗುವುದು ಹೇಗೆ?

ಇದರ ಬೆನ್ನಲ್ಲೇ ಕೊನೆಕ್ಷಣದಲ್ಲಿ ಸಿದ್ದಾರ್ಥ ಅವರು ಯಾರಿಗೆ ಕರೆ ಮಾಡುತ್ತಿದ್ದರು, ಆ ಒಂದು ಕೆಟ್ಟ ನಿರ್ಧಾರ ಕೈಗೊಳ್ಳುವಾಗ ಅವರ ಮನಸ್ಥಿತಿ ಹೇಗಿತ್ತು? ಯಾವೊಂದು ಆರ್ಥಿಕ ಮಾನಸಿಕ ಒತ್ತಡ ಅವರನ್ನು ಆ ನಡೆ ಇಡಲು ಪ್ರೇರೇಪಿಸಿತು? ಇದ್ದ ಎಲ್ಲಾ ಸಾಮಾಜ್ರ್ಯ ನಂಬಿದ ಲಕ್ಷಾಂತರ ಮಂದಿಯನ್ನು ತೊರೆಯಲು ನಿರ್ಧರಿಸಿ ಸಿದ್ದಾರ್ಥ ಸ್ವಾರ್ಥಿಯಾಗಿಬಿಟ್ಟರೇ? ಕಾಫಿ ಡೇ ಕಥೆ ಮುಂದೇನು? ಎಂಬ ಅನೇಕ ಪ್ರಶ್ನೆಗಳೊಂದಿಗೆ ಈ ಕೃತಿಯನ್ನು ಓದತೊಡಗಿದ್ದೆ.

ಪುಸ್ತಕ: ಕಾಫಿ ಕಿಂಗ್
ಲೇಖಕರು: ರುಕ್ಮಿಣಿರಾವ್, ಪ್ರೊಸೇನ್ ಜಿತ್ ದತ್ತಾ.
ಅನುವಾದಕರು: ಕಾರ್ತಿಕಾದಿತ್ಯ ಬೆಳ್ಗೋಡು
ಪುಟಗಳು: 280
ಮುಖಪುಟ ವಿನ್ಯಾಸ, ಪ್ರಕಾಶಕರು: ಕಾನ್ ಕೇವ್ ಮಾಧ್ಯಮ ಮತ್ತು ಪ್ರಕಾಶನ (+9199025 90303)
ಬೆಲೆ: 350

ಮುಖಪುಟ ವಿನ್ಯಾಸ: ಪ್ರತಿ ಬಾರಿಯಂತೆ ಈ ಕೃತಿಯ ಮುಖಪುಟ ವಿನ್ಯಾಸ, ಒಳಪುಟದ ಶಿಸ್ತು, ಕಾಗುಣಿತ, ವ್ಯಾಕರಣ, ಕೋಷ್ಟಕ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಕಾಫಿ ಡೇ ಲೋಗೋವನ್ನೇ ಮುಖಪುಟಕ್ಕೆ ಬಳಸಿದ್ದು ಅರ್ಥಪೂರ್ಣವಾಗಿದೆ. ಒಂದೇ ಒಂದು ಕೊರತೆ ಎಂದರೆ ಸಿಸಿಡಿ ಎಂದರೆ ಕಾಫಿ, ಕೆಫೆ ಒಳ ವಿನ್ಯಾಸ, ಇದನ್ನು ಸೂಕ್ತವಾಗಿ ಒಳಪುಟಗಳಲ್ಲಿ ಬಳಸಬಹುದಾಗಿತ್ತು. ಸಿದ್ದಾರ್ಥ ಅಥವಾ ಅವರ ಕುಟುಂಬದ ವಿರುದ್ಧವಾದ ಅಂಶಗಳು ಏನೂ ಕಂಡು ಬಂದಿಲ್ಲದಿದ್ದರೂ ಈ ಕೃತಿಯ ಮುಖ್ಯ ಪುರುಷ ಹಾಗೂ ಕಾರ್ಯಕ್ಷೇತ್ರದ ಚಿತ್ರ ಇಲ್ಲದಿರುವುದು ಎದ್ದು ಕಾಣುತ್ತದೆ. ಮೂಲ ಲೇಖಕರಿಗೆ ಸಿಗದ ಹಕ್ಕುಸ್ವಾಮ್ಯತೆ ಕನ್ನಡಕ್ಕೆ ಸಿಗದೇ ಹೋಗಿರಬಹುದು, ಇರಲಿ. ಚಿತ್ರಗಳು ಇಲ್ಲದಿರುವುದರಿಂದ ಇದೊಂದು assorted collection of financial reports, statements, testimonies ಎನ್ನಬಹುದು.

ಕುತೂಹಲಕಾರಿ ಕೊನೆ ಮೂರು ಅಧ್ಯಾಯಗಳು

ಮಿಕ್ಕಂತೆ, 12 ಅಧ್ಯಾಯಗಳ 267 ಪುಟಗಳಲ್ಲಿ ಸಿದ್ದಾರ್ಥರ ಆರ್ಥಿಕ ಬದುಕನ್ನು ಕಟ್ಟಿಕೊಡುವ ಪ್ರಯತ್ನಕ್ಕೆ ಒಂದು ಮೆಚ್ಚುಗೆ ಸೂಚಿಸಲೇಬೇಕು. ಮೊದಲೆರಡು ಅಧ್ಯಾಯ ಹಾಗೂ ಕೊನೆ ಮೂರು ಅಧ್ಯಾಯಗಳು ಇಡೀ ಕೃತಿಯ ಸಾರವನ್ನು ಹಿಡಿದಿಟ್ಟುಕೊಂಡಿವೆ. ಅನೇಕ ಕಡೆಗಳಲ್ಲಿ ಫ್ಲಾಶ್ ಬ್ಲಾಕ್ ಅಥವಾ ಫಾಸ್ಟ್ ಫಾರ್ವರ್ಡ್ ಶೈಲಿಯ ನಿರೂಪಣೆ ಕಂಡು ಬರುತ್ತದೆ. ಇದು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಕೆಲವೊಮ್ಮೆ ಓದಿದ ಪ್ಯಾರವನ್ನು ಎರೆಡೆರಡು ಬಾರಿ ಓದಿ ಹಿಂದಿನ ಪುಟದ ಸಾರಾಂಶದೊಡನೆ ಸಮೀಕರಿಸಿ ಮುಂದಕ್ಕೆ ಹೋಗಬೇಕಾಗುತ್ತದೆ. ಇನ್ನು ಹಲವೆಡೆ ಹೇಳಿಕೆಗಳು, ಅಂಕಿ ಅಂಶಗಳು ಅಧಿಕವಾಗಿ ಪುನರಾವರ್ತನೆಗೊಂಡಂತೆ ಭಾಸವಾಗುತ್ತದೆ.

ಮುರ್ನಾಲ್ಕು ಅಧ್ಯಾಯದ ವಿಷಯ ಹೊರತುಪಡಿಸಿದರೆ ಮಿಕ್ಕ ಮಾಹಿತಿ, ಅಂಕಿ ಅಂಶ, ಸಾಲದ ಚಕ್ರವ್ಯೂಹದ ಬಗ್ಗೆ ಇದೇ ಮೊದಲ ಬಾರಿಗೆ ಈ ರೀತಿ ಕೃತಿ ಓದುವವರಿಗೆ ಕಬ್ಬಿಣದ ಕಡಲೆ ಎನಿಸಬಹುದು. ಆದರೆ, ಈ ಬಗ್ಗೆ ತಿಳಿದವರಿಗೆ ಕುತೂಹಲಕಾರಿ ಎನಿಸುತ್ತದೆ. ಕಾಫಿ ಜಗತ್ತಿನ ಅನಭಿಷಕ್ತ ದೊರೆ ಸಿದ್ದಾರ್ಥ ಎಂದು ಹೊಗಳಿ ವ್ಯಕ್ತಿಚಿತ್ರ ಬರೆದ ಬೆನ್ನಲ್ಲೇ ಸಾಲದ ಹೊರೆ, ತ್ರೈಮಾಸಿಕ ವರದಿಯಲ್ಲಿ ನಷ್ಟ, ಕಾಫಿ ಡೇ ಷೇರು ಖರೀದಿ, ಯಾವ ಆಸ್ತಿ ಯಾರಿಗೆ ಮಾರಾಟವಾಗಬಹುದು, ಸಿದ್ದಾರ್ಥರ ದುರಂತ ಅಂತ್ಯದ ಸುದ್ದಿ, ಸಿದ್ದಾರ್ಥರ ನಂತರ ಕೆಫೆ ಕಾಫಿ ಡೇ ಉಳಿಸಿ, ಸಾಲದ ಪ್ರಮಾಣ ತಗ್ಗಿಸಿದ ಗಟ್ಟಿಗಿತ್ತಿ ಎಂದು ಮಾಳವಿಕಾರ ಬಗ್ಗೆ ಲೇಖನ ಬರೆದ ನೆನಪಿನೊಂದಿಗೆ ಈ ಕೃತಿ ಓದಿದ ನನಗೆ ಮತ್ತೊಮ್ಮೆ ಎಲ್ಲವನ್ನು ಸ್ಮರಿಸುವಂತೆ ಮಾಡಿತು.

ಮಿನಿ ಕಥೆ: ಉಸಿರು | The breath-Kannada short story

ಅದಕ್ಕಿಂತ ಹೆಚ್ಚಾಗಿ ಶೆಲ್ ಕಂಪನಿ, ಆದಾಯಕ್ಕಿಂತ ಹೆಚ್ಚು ಸಾಲ, ದಿವಾಳಿತನ, ಬ್ಯಾಂಕಿನಿಂದ ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡವರ ಕಥೆ ನೋಡಿದ್ದ ನನಗೆ, ಇಲ್ಲಿ ಬೇರೆಯದ್ದೇ ಆಟ ಕಂಡು ಬಂದಿತು. ಕಾನೂನಿನ ಕಂಬದ ಕೆಳಗೆ ಹೇಗೆ ಸಾಲ ಪಡೆದು ಗಿರಿಕಿ ಹೊಡೆಸುವುದನ್ನು ‘ಸಿದ್ದಾರ್ಥರ ಪದ್ಧತಿ’ ಎಂದು ಹೆಸರಿಡಬಹುದ್ದಲ್ಲವೇ! ಎನಿಸಿಬಿಟ್ಟಿತು. ಮೂಲ ಕಂಪನಿಯಿಂದ ಅಂಗ ಸಂಸ್ಥೆಗೆ ಸಾಲ ವರ್ಗಾಯಿಸುವುದು ಆ ಸಾಲ ತೀರಿಸುವುದಕ್ಕೆ ಮತ್ತೆ ಸಾಲ ಪಡೆಯುವುದು ಹೊಸ ವಿಷಯವೇನಲ್ಲ. ಆದರೆ, ಯಾವುದೇ ದುಂದು ವೆಚ್ಚಕ್ಕೆ ಬಳಸದೆ ಪಡೆದ ಸಾಲವನ್ನು ವೃತ್ತಾಕಾರವಾಗಿ ಅಂಗ ಸಂಸ್ಥೆಗಳ ನಡುವೆ ಸುತ್ತಾಡಿಸಿ, ಸಾಲಕ್ಕೆ ಶ್ಯೂರಿಟಿ, ಎಷ್ಟು ಬೇಕೋ ಅಷ್ಟು ದಾಖಲೆ, ಗಣತಿ ಮಿಕ್ಕಿದ್ದೆಲ್ಲವೂ ಅಡಗಿದ್ದು, ಮಾತ್ರ ಸಿದ್ದಾರ್ಥರ ಮತಿಯಲ್ಲಿ!

ಆರ್ಥಿಕ ಬದುಕು ಸಕತ್ ಥ್ರಿಲ್ಲಿಂಗ್

ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೂ ಚೆಕ್ ನೀಡಿ ಅದನ್ನು ವೃತ್ತಾಕಾರದ ಹಣಕಾಸು ವ್ಯವಹಾರಕ್ಕೆ ಬಳಸಿ, ಸಾಲಗಳನ್ನು ಎವರ್ ಗ್ರೀನಿಂಗ್ ಮಾಡಿ ಚೆಕ್ ಕ್ಲಿಯರ್ ಮಾಡುತ್ತಿದ್ದ ರೀತಿ ನೋಡಿದರೆ ಸಿದ್ದಾರ್ಥ ಎಂಥ ಮೋಡಿಗಾರ ಎಂಬುದು ಅರಿವಾಗುತ್ತದೆ. ಒಂದೇ ಬಾರಿಗೆ ಹತ್ತಾರು ಚೆಂಡುಗಳನ್ನು ಜಗಲಿಂಗ್ ಮಾಡುತ್ತಾ ,ಮಾತಿನ ಮೋಡಿ, ಸಭ್ಯ ನಡೆ ಮೂಲಕ ಸಿದ್ದಾರ್ಥರು ನಡೆಸಿದ ಆರ್ಥಿಕ ಬದುಕು ಸಕತ್ ಥ್ರಿಲ್ಲಿಂಗ್ ಎನಿಸಿಬಿಟ್ಟಿತು.

ಬಹುಶಃ ಮುಂಬೈನಲ್ಲಿ ಆರಂಭಿಕವಾಗಿ ಷೇರು ಪೇಟೆ ವ್ಯವಹಾರ ಕಲಿತು ಬಂದಿದ್ದು ಕಾಫಿ ಹಾಗೂ ಐಟಿ ಕ್ಷೇತ್ರದ ಕಂಪನಿಗಳನ್ನು ಹೂಡಿಕೆ ಹಾಗೂ ಸಂಸ್ಥೆ ಬೆಳೆಸುವ ಬಗ್ಗೆ ಯೋಚಿಸಲು ಸಾಧ್ಯವಾಯಿತು ಎನ್ನಬಹುದು. ಈ ಬಗ್ಗೆ ವಿವರವಾಗಿ ಪುಸ್ತಕದಲ್ಲಿ ಓದಬಹುದು, ಷೇರುಪೇಟೆ, ಸರಕು ಸೇವೆ, ರಫ್ತು, ವಾಣಿಜ್ಯ ಬೆಳೆ, ಹೊಸ ಉದ್ಯಮ ಸ್ಥಾಪನೆ, ಬ್ಯಾಂಕ್ ಸಾಲದ ಬಗ್ಗೆ ಬೇಕಾದ ಅರಿವು ಎಲ್ಲವೂ ಇಲ್ಲಿ ಅಲ್ಲಲ್ಲಿ ನಿಮ್ಮ ಗಮನಕ್ಕೆ ಬರುತ್ತದೆ. ಆದರೆ, ಒಂದೇ ಕೊರಗೆಂದರೆ, ಸಿದ್ದಾರ್ಥರ ಆರ್ಥಿಕ ಆಟದ ಬಗ್ಗೆ ತಿಳಿದಿದ್ದ ಕೆಲವು ಕೆಲವು ಮಂದಿ ಈ ಬಗ್ಗೆ ಅವರನ್ನು ಏಕೆ ಎಚ್ಚರಿಸಲಿಲ್ಲ, ಅದ್ಯಾಕೆ ಅಷ್ಟು ಉದಾಸೀನ ಮಾಡಿದರು. ಈಗ ಅವರು ಪಶ್ಚಾತ್ತಾಪ ಪಡುತ್ತಿರಬಹುದೇ? ‘ಸಿದ್ದಾರ್ಥ ಇದ್ದಾರೆ ಎಲ್ಲಾ ನೋಡ್ಕೋತ್ತಾರೆ’ ಎಂಬ ಮಾತು ಅಂಧನಂಬಿಕೆಯೇ ಮುಳುವಾಯಿತೆ? ಎಂಬ ಪ್ರಶ್ನೆ ಮೂಡುತ್ತದೆ.

ಸಿಎಫ್ಒ, ಆಡಿಟರ್, ನಿರ್ದೇಶಕ ಮಂಡಳಿ ಸದಸ್ಯರು, ಕುಟುಂಬ ಸದಸ್ಯರನ್ನು ಮಂಕಾಗಿಸಿಬಿಟ್ಟು, ಸಿದ್ದಾರ್ಥರು ಅಷ್ಟು ಸಹಜವಾಗಿ ಇದ್ದಿದ್ದು ಹೇಗೆ? ಕಾಲ ಬದಲಾದಂತೆ ಬ್ಯಾಂಕಿಂಗ್ ಹಾಗೂ ಸರ್ಕಾರವು ಹೊಸ ಆರ್ಥಿಕ ನೀತಿ ತರುವ ಮೂಲಕ ‘ಆರ್ಥಿಕವಾಗಿ ದಿವಾಳಿ’, ಉದ್ದೇಶಪೂವಕ ಸುಸ್ತಿದಾರ ಅಥವಾ ಮತ್ತೊಂದು ಹೆಸರಿನ ಟ್ಯಾಗ್ ಹಾಕಿಕೊಳ್ಳಲು ಸಿದ್ದಾರ್ಥ ಹಿಂಜರಿಯಲು ಕಾರಣವೇನು? ಐಟಿ ದಾಳಿ ಅಧಿಕಾರಿಗಳಿಗೂ ಭಾರಿ ಪ್ರಮಾಣದ ಅವ್ಯವಹಾರದ ದಾಖಲೆ ಸಿಗದಿದ್ದಾಗ, ಸಿದ್ದಾರ್ಥ ವಿಚಲಿತರಾಗಿದ್ದೇಕೆ? ಅತಿಯಾದ ಆತ್ಮ ವಿಶ್ವಾಸ, ತನ್ನಮೇಲೆ ತಾನೇ ಹಾಕಿಕೊಂಡ ಆರ್ಥಿಕ ಮಾನಸಿಕ ಒತ್ತಡದ ಭಾರ ಹೆಚ್ಚಾಗಿಬಿಟ್ಟಿತೇ? ಗೊತ್ತಿಲ್ಲ. ಫೋರೆನ್ಸಿಕ್ ಆಡಿಟಿಂಗ್ ತನಿಖೆ ಏಕೆ ನಡೆಸಲಿಲ್ಲ ಎಂಬ ಪ್ರಶ್ನೆಯನ್ನು ಪುಸ್ತಕದಲ್ಲಿ ಕೇಳಲಾಗಿದೆ. ಒಂದು ವೇಳೆ ಈ ಅಡಿಟಿಂಗ್ ನಡೆದು ಮೂಲ ಸಂಅತ್ತಿನ ಮೌಲ್ಯ ತಿಳಿದು ಬಂದರೂ, ಸಾವು ನೋವಿನ ಮುಂದೆ ಎಲ್ಲವೂ ಗೌಣ ಎನಿಸಿಬಿಡುತ್ತದೆ.

ಕಾಫಿ ಕೆಫೆ ಸಂಸ್ಕೃತಿ ಹರಿಕಾರ

ಒಟ್ಟಾರೆ, A lot can happen over a coffee ಕೆಫೆ ಕಾಫಿ ಡೇ (ಸಿಸಿಡಿ) ಯ ಪ್ರಚಾರ ಸ್ಲೋಗನ್ ಹಿಂದೆ ಎಷ್ಟೆಲ್ಲ ಶ್ರಮವಿದೆ. ಯಾವೆಲ್ಲ ರೀತಿ ಸಣ್ಣ ಸಣ್ಣ ಅಂಶಗಳು ಒಂದು ಬ್ರ್ಯಾಂಡ್ ಮೌಲ್ಯವನ್ನು ನಿರ್ಧರಿಸುತ್ತವೆ ಎಂಬುದನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ತಿಳಿದಂತಾಯಿತು. ಭಾರತದಲ್ಲಿ ಹೊಸ ಕಾಫಿ ಸಂಸ್ಕೃತಿ ಹುಟ್ಟು ಹಾಕಿ, ಸಿಸಿಡಿ ಎಂಬುದು ಬರೀ ಕಾಫಿ ಮಳಿಗೆಯಲ್ಲ, ಅನೇಕರ ಭವಿಷ್ಯದ ಕನಸು ಹಂಚಿಕೊಳ್ಳುವ ತಾಣವಾಗಿ ಮಾರ್ಪಾಡಿಸಿದ ರೀತಿ ಅನನ್ಯ. ಬದುಕು ಸಿಹಿಕಹಿ ಸ್ಮರಣೀಯ ಕ್ಷಣಗಳ ಆಗರ ಎನ್ನುವುದಾದರೆ, ಇಂಥ ಅನೇಕ ಕ್ಷಣಗಳಿಗೆ ಸಿಸಿಡಿ ಹಾಗೂ ಕಾಫಿ ಸಾಕ್ಷಿಯಾಗಿದೆ.

ಕಾಫಿ ಡೇ ಚೆನ್ನಾಗಿ ನಡೆಯುತ್ತಿದ್ದ  ಕಾಲದಲ್ಲೂ ಪ್ರತ್ಯೇಕ ಕಿಚನ್ ಹೊಂದದೆ ಹೊರಗಿನ ಫುಡ್ ವೆಂಡರ್ಸ್ ವ್ಯವಸ್ಥೆ ಬಳಸಿದ್ದು ಅಚ್ಚರಿ ಮೂಡಿಸಿದರೂ, ಫುಡ್ ಲ್ಯಾಬ್, ಚಿಕ್ಕಮಗಳೂರಿನಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ತಯಾರಾಗುವ ಹೊಸ ಬಗೆಯ ಫ್ಲೇವರ್, ಪೇಯಗಳು ಅದೆಲ್ಲವನ್ನು ಸಿದ್ದಾರ್ಥರೇ ಖುದ್ದು ಗಮನಿಸುತ್ತಿದ್ದರು ಎಂಬುದು ಹುಬ್ಬೇರಿಸುವಂತೆ ಮಾಡುತ್ತದೆ. ಕಾಫಿ ಕೂಡಾ ರಫ್ತು ಮಾತ್ರಕ್ಕೆ ಅಲ್ಲದೇ ಈ ರೀತಿ ಕೆಫೆ ಮೂಲಕವೂ ಬ್ರ್ಯಾಂಡ್ ಆಗಿ ಬೆಳೆಯಬಹುದು ಅದರ ಸುತ್ತಾ ಇನ್ನೂ ಅನೇಕ ಸಣ್ಣ ಪುಟ್ಟ ಸ್ಥಳೀಯ ಸಂಸ್ಥೆಗಳು ಬೆಳೆಯಬಹುದು ಎಂಬುದನ್ನು ಓದಿಯೇ ತಿಳಿಯಬೇಕು.

ಚಹಾ ಉದ್ಯಮದತ್ತ ಹೆಚ್ಚಿನ ಆಸ್ಥೆ ವಹಿಸಿದ್ದ ಟಾಟಾ ಕೂಡಾ ಕಾಫಿಯತ್ತ ತಿರುಗುವಂತೆ ಮಾಡುವಲ್ಲಿ ಸಿದ್ದಾರ್ಥ ಪರೋಕ್ಷವಾಗಿ ನೆರವಾದರು ಎನ್ನಬಹುದು, ಸ್ಟಾರ್ ಬಕ್ಸ್ ಅಲ್ಲದೆ ಇಂದು ಕಾಣುವ ಅನೇಕ ದೊಡ್ಡ ದೊಡ್ಡ ಕಾಫಿ ಕೆಫೆಗಳಿಗೆ ರಹದಾರಿ ಹೆದ್ದಾರಿ ನಿರ್ಮಿಸಿದ್ದೇ ಸಿಸಿಡಿ ಎನ್ನಬಹುದು.

Trekking Tips Kannada | ಟ್ರೆಕ್ಕಿಂಗ್ ಸಲಹೆ: ಚಾರಣಕ್ಕೆ ಹೊರಡುವ ಮುನ್ನ ಈ ವಿಷಯಗಳು ತಿಳಿದಿರಲಿ!

ಕೆಫೆ ಕಾಫಿಡೇ ಬಗ್ಗೆ ಅಷ್ಟೇ ಅಲ್ಲದೆ ಈ ಕೃತಿಯಲ್ಲಿ ಮೈಂಡ್ ಟ್ರೀ, ಇನ್ಫೋಸಿಸ್ ಐಪಿಒ ದಿನಗಳು, ಗ್ಲೋಬಲ್ ಟೆಕ್ ಪಾರ್ಕ್, ಸೆರಾಯ್ ಮುಂತಾದ ಜನ ಸಾಮಾನ್ಯರು ಕೇಳಿರಬಹುದಾದ ಬ್ರ್ಯಾಂಡ್ ಗಳ ಹುಟ್ಟು ಹಾಗೂ ಬೆಳವಣಿಗೆ ಹೇಗೆ ಸಿದ್ದಾರ್ಥದ ವ್ಯವಹಾರದ ಭಾಗವಾಗಿದ್ದವು ಎಂಬುದನ್ನು ಓದುವುದೇ ಮಜಾ. ನರೇಶ್ ಮಲ್ಹೋತ್ರಾ ಹಾಗೂ ಸಿದ್ದಾರ್ಥ ನಡುವಿನ ಅಧ್ಯಾಯಗಳು ಚೆನ್ನಾಗಿ ಮೂಡಿ ಬಂದಿದೆ.

ಈ ಕೃತಿಯಲ್ಲಿ ಸಿದ್ದಾರ್ಥರ ಮೇಲಿನ ಆರೋಪಗಳ ಬಗ್ಗೆ ಕೂಡಾ ಬೆಳಕು ಚೆಲ್ಲಲಾಗಿದೆ. ಮುಖ್ಯವಾಗಿ ಡಾ. ರಾಜ್ ಕುಮಾರ್ ಅಪಹರಣ ಸಂದರ್ಭದಲ್ಲಿ ಸಿದ್ದಾರ್ಥರ ಮಾವ ಅಂದಿನ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಬೇಕಿದ್ದ ಆರ್ಥಿಕ ಸಹಾಯ ಸಿಕ್ಕಿದ್ದು ಹೇಗೆ, ವೀರಪ್ಪನ್ ಕಡೆಯವರಿಗೆ ಹಣ ಸಂದಾಯವಾಗಿದ್ದು ಹೇಗೆ ಎಂಬುದನ್ನು ವಿಸ್ತಾರವಾಗಿ ಬರೆಯಲಾಗಿದೆ, ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಛಾಪಾ ಕಾಗದ ಹಗರಣದ ರುವಾರಿ ಕರೀಂ ಲಾಲ್ ತೆಲಗಿ ಜೊತೆ ಸಿದ್ದಾರ್ಥರಿಗೆ ನಂಟಿತ್ತು, ಕೊಪ್ಪ ಬಳಿ 600 ಎಕರೆ ಸರ್ಕಾರಿ ಜಾಗವನ್ನು ಸಿದಾರ್ಥ ಅಕ್ರಮಿಸಿದ್ದಾರೆ, ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್ ಅರ್ ಹಿರೇಮಠ ಆರೋಪಿಸಿದ್ದನ್ನು ದಾಖಲಿಸಲಾಗಿದೆ. ಸಿದ್ದಾರ್ಥರ ಕೊನೆ ದಿನಗಳಲ್ಲಿ ನಡೆದ ಐಟಿ ದಾಳಿ, ಡಿಕೆ ಶಿವಕುಮಾರ್ ಜೊತೆಗಿನ ಅರ್ಥಿಕ ನಂಟು, ಐಟಿ ಕ್ಷೇತ್ರಗಳಲ್ಲಿನ ಹೂಡಿಕೆ ಎಲ್ಲದರ ಬಗ್ಗೆ ವಿವರಣೆ ಇದೆ.

ಕೆಫೆ ಕಾಫಿ ಡೇ, ಮೈಂಡ್ ಟ್ರೀ, ಬ್ಯಾಂಕಿನಿಂದ ಸಾಲ ಮಾಡುವ ಹೊಸ ವಿಧಾನ, ಷೇರುಪೇಟೆ, ಅಂಗ ಸಂಸ್ಥೆಗಳ ನಿರ್ವಹಣೆ ಹೇಗೆ ಎಂಬ ಎಲ್ಲ ವಿಷಯಗಳ ಬಗ್ಗೆ ಆಸಕ್ತಿ ಇದ್ದರೆ, ಅಧ್ಯಯನಯೋಗ್ಯ ವಿಷಯ ವಸ್ತು ನಿಮಗೆ ಈ ಪುಸ್ತಕದಲ್ಲಿ ಸಿಗುತ್ತದೆ, ಒಟ್ಟಾರೆ, ‘ಕಾಫಿ ಕಿಂಗ್’ ಉತ್ತಮ ಪ್ರಯತ್ನ.

-ಮಲೆನಾಡಿಗ

Leave a Reply

Your email address will not be published. Required fields are marked *