Jenukal Gudda-Sakleshpur | Ettina Bhuja, Mudigere Trek-tales Part 2 | ಜೇನುಕಲ್ಲು ಗುಡ್ಡ – ಎತ್ತಿನ ಭುಜ ಚಾರಣ…ಕಥನ -2

[ಚಾರಣ-ಕಥನದ ಮೊದಲ ಭಾಗ ಓದಿ..] ನಂತರ ಮುಂದುವರೆಯಿರಿ

ನಮ್ಮೆಲ್ಲರಿಗೂ ನಾವೆಂಥ ಹುಚ್ಚುತನಕ್ಕೆ ಕೈ ಹಾಕಿದ್ದೇವೆ ಎಂಬುದರ ಅರಿವಾಗಿ ಹೋಗಿತ್ತು. ಮೇಲೆ ಹತ್ತಿದ ಮೇಲೆ ಕೆಳಗೆ ಇಳಿಯಲೇ ಬೇಕು ಎಂಬುವುದು ಜಗದ ನಿಯಮ 🙂 ತೆವಳುತ್ತ, ಕುಂಟುತ್ತ ಇಳಿಯಲು ಪ್ರಾರಂಭಿಸಿದೆವು. ‘ಕಾಲಿಟ್ಟಲ್ಲಿ ಕಾಲುದಾರಿ’ ಎಂದೆನ್ನುತ್ತ ಇಳಿಯುತ್ತಿದ್ದರೆ, ಕೆಳಗೆ ಮುಟ್ಟುತ್ತೇವೆಂಬ ಭರವಸೆ ಕೂಡ ಇರಲಿಲ್ಲ. ಕಾಲು ಜಾರಿ ಯಾರ್ ಯಾರು ಎಷ್ಟು ಸಾರಿ ಬಿದ್ದರು ಎಂಬ ಲೆಕ್ಕವಿಡುವುದು ಸಾಧ್ಯವಿರಲಿಲ್ಲ.

ಪುಟ್ಟಿ, ಮಂಜು ಮತ್ತು ಉಪ್ಪಿಯರೊಂದಿಗೆ ಎಲ್ಲರಿಗಿಂತ ಮುಂದೆ ಇಳಿಯುತ್ತಾ, ಅಲ್ಲಿಂದ ಮನುಷ್ಯ ಮಾತ್ರರು ಇಳಿಯಬಹುದು ಎಂಬ ಭರವಸೆ ಹುಟ್ಟಿಸುತ್ತಿದ್ದರು 🙂 ಆವರಿಸಿಕೊಂಡಿದ್ದ ಮಂಜು ಒಮ್ಮೆ ನಮ್ಮ ದಾರಿ ತಪ್ಪಿಸಿ ಪ್ರಪಾತದ ಅಂಚಿನಲ್ಲಿ ತಂದು ನಿಲ್ಲಿಸಿತ್ತು! ಮತ್ತೆ ಅಲ್ಲಿಂದ ಹಿಂತಿರುಗಿ ದೀಪದ ಗುಡ್ಡದ ಕಡೆಗೆ ಇಳಿಯ ತೊಡಗಿದೆವು. ಮಂಜು ಮತ್ತು ಅಭಿ ಅವರೇ ದಾರಿಯನ್ನು ಹುಡುಕ ತೊಡಗಿದಾಗ, ಆವಾಗಲೇ ನಡೆದೂ ನಡೆದೂ ಸುಸ್ತಾಗಿದ್ದ ಗೋಪಿ ಚೆನ್ನಾಗಿ ಅವರನ್ನೊಮ್ಮೆ ಬಯ್ದಿದ್ದೂ ಆಯಿತು.

ಎಲ್ಲಿ ಕಾಲು ಎಡವಿತೋ, ಎಲ್ಲಿ ಕೈ ತರಚಿತೋ ಯಾರಿಗೂ ಪರಿವೆಯಿರಲಿಲ್ಲ. ಹೊಟ್ಟೆ ಬೇರೆ ತಾಳ ಹಾಕುತ್ತಿತ್ತು. ಅಷ್ಟೊತ್ತಿಗೆ ದೂರದಲ್ಲೆಲ್ಲೋ ಕೆಳಗಡೆ ಓಡಾಡುವ ಜನ ಕಾಣಿಸಿದರು. ನಮ್ಮ ಊಟ ಅಲ್ಲಿದೆ ಎಂದು ಗೊತ್ತಾದದ್ದೆ ಹಸಿವು ಕಾಲನ್ನು ಆ ಕಡೆ ಎಳೆಯ ತೊಡಗಿತು. ಅಂತೂ ಏಳುತ್ತ ಬೀಳುತ್ತ ಊಟವಿರುವ ಜಾಗ ತಲುಪಿದ್ದಾಯಿತು.

ಹಸಿದ ಹೊಟ್ಟೆಗೆ ಸ್ವಾದಿಷ್ಟ ಚಿತ್ರಾನ್ನ, ಮೊಸರನ್ನ, ಉಪ್ಪಿನಕಾಯಿಗಳು ಬಿದ್ದಮೇಲೆ ಹೊಸ ಹುಟ್ಟು ಪಡೆದಂತೆ 🙂 ಮೂರು ಕಿಲೋ ಮೀಟರ್ ಎಂದು ಪ್ರಾರಂಭವಾದ ಚಾರಣ ಸುಮಾರು ಇಪ್ಪತ್ತು ಕಿಲೋ ಮೀಟರ್ ಗಳಿಗಿಂತ ಹೆಚ್ಚು ಉದ್ದವಾಗಿ ಹೋಗಿತ್ತು!

ಅಲ್ಲಿಂದ ಗುಂಡ್ಯದ ಕಡೆಗೆ ಹೋಗಬೇಕಿದ್ದ ನಮ್ಮ ಉದ್ದೇಶವನ್ನು ಆನೆ ಹಾವಳಿ ವಾಪಸ್ಸು ಭೈರವೇಶ್ವರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕುವಂತೆ ಮಾಡಿತು. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಮ್ಮ ಗುಡಾರಗಳನ್ನು ನಿಲ್ಲಿಸಲು ತೊಡಗಿದಾಗ ಹೊತ್ತು ಕಂತುತ್ತಿತ್ತು, ಇನ್ನೊಂದೆಡೆ ಬಿಸಿ ಬಿಸಿ ಕಾಫಿ ತಯಾರಾಗಿತ್ತು. ಶಿಬಿರದ ಮಧ್ಯೆ ಬೆಂಕಿ ಹತ್ತಿಸುವ ಹೊತ್ತಿಗೆ ಊಟದ ಸಮಯ. ನಡುಗುವ ಛಳಿಯಲ್ಲಿ ಉರಿಯುವ ಬೆಂಕಿಯ ಮುಂದೆ ಕುಳಿತು ರುಚಿಕರವಾದ ಚಪಾತಿ, ಚಟ್ನಿ, ಚಿತ್ರಾನ್ನಗಳನ್ನು ಸವಿಯುವ ಸುಖದ ಮುಂದೆ ಉಳಿದೆಲ್ಲವೂ ಶೂನ್ಯವಾಗಿಬಿದುತ್ತದೆ.

ನಾನು ರವಿ ಮತ್ತು ಸುಂಡಿ ಒಂದು ಗುಡಾರ ಸೇರಿಕೊಂಡೆವು. ರವಿ ಮತ್ತು ಸುಂಡಿಯ ಶೃತಿ ಸೇರಿದ ಗೊರಕೆ ಕಾಡುಪ್ರಾಣಿಗಳಿಂದ ನಮ್ಮನ್ನು ಕಾವಲು ಕಾಯುತ್ತಿದ್ದರೆ ಉಪ್ಪಿಯ ಆಲಾರಾಂ ಸೂರ್ಯೋದಯವನ್ನು ನೋಡಲು ನಮ್ಮೆಲ್ಲರನ್ನೂ ಎಬ್ಬಿಸಿತು. ಇನ್ನೂ ಬಿಸಿಯಿದ್ದ ಉರಿಯನ್ನು ಇನ್ನೊಮ್ಮೆ ಹೊತ್ತಿಸಿ ಆ ಛಳಿಯಲ್ಲಿ ಅಶ್ವಲ್ ಮಾಡಿದ ಕಾಫಿಯನ್ನು ಕುಡಿಯುತ್ತಾ ಸೂರ್ಯೋದಯವನ್ನು ವೀಕ್ಷಿಸುವ ಸುಖವನ್ನು ವರ್ಣಿಸಲು ಸಾಧ್ಯವಿಲ್ಲ! ಬೆಟ್ಟ, ಮೋಡಗಳ ಮರೆಯಿಂದ ಎದ್ದು ಬರುವ ಸೂರ್ಯನ ಹೊಂಗಿರಣಗಳು ಮಂಜಿನಲ್ಲಿ ಕುತ್ತಿಗೆಯವರೆಗೂ ಹೂತು ಹೋದ ಶೃಂಗಗಳನ್ನು ಬೆಳಗುವ ಪ್ರಕೃತಿಯ ಸೊಬಗು ಕಣ್ಣಿಗೆ ಹಬ್ಬ.

ಸ್ವಲ್ಪ ಹೊತ್ತಿಗೇ ನಮ್ಮನ್ನು ಎತ್ತಿನ ಭುಜವನ್ನು ಹತ್ತುವ ದಾರಿಯವರೆಗೆ ಬಿಡಲು ‘ಮರೆಯಲಾಗದ ಓಮ್ನಿ’ಯ ಆಗಮನವಾಯಿತು 🙂 ಹತ್ತು ಜನ ಒಂದು ಓಮ್ನಿಯೊಳಗೆ ಉಪ್ಪಿನಕಾಯಿಯಂತೆ ಸೇರಿಕೊಂಡೆವು! ಕಡಿದಾದ ಏರು ರಸ್ತೆಯಲ್ಲಿ ಮೇಲೇರುತ್ತಿರುವಾಗ ಎದುರಿಗೆ ಬಂದ ದನದ ಹಿಂಡನ್ನು ನೋಡಿ ಡ್ರೈವರ್ ಬ್ರೇಕ್ ಹಾಕಿದ್ದಷ್ಟೇ ಗೊತ್ತು, ಓಮ್ನಿ ಹಿಂದೆ ಹೋಗಲು ತೊಡಗಿತು!

ಅದನ್ನು ಹೇಗೋ ಸಂಭಾಳಿಸಿದ ಡ್ರೈವರ್ ಬಲಗಡೆ ಇದ್ದ ಗುಡ್ಡದ ಬದಿಯ ಚಿಕ್ಕ ಕಾಲುವೆಯಲ್ಲಿ ನಿಲ್ಲಿಸುವುದರಲ್ಲಿ ಸಫಲನಾದ. ಎಡಗಡೆ ಹೋದಲ್ಲಿ ಗುಡ್ಡದ ಆಳಕ್ಕೆ ಓಮ್ನಿ ಉರುಳು ಸೇವೆ ಮಾಡಬೇಕಿತ್ತು ಎಂಬುದು ಇಳಿದ ಮೇಲೇ ನಮಗೆಲ್ಲ ಅರಿವಾಗಿದ್ದು! ಎಂಟೂ ಜನ ಹುಡುಗರು ಕೂಡಿ ಇದ್ದ ಬಿದ್ದ ಶಕ್ತಿಯನ್ನೆಲ್ಲ ಹಾಕಿ ಒಮ್ನಿಯನ್ನು ಬಿದ್ದಲ್ಲಿಂದ ರಸ್ತೆಗೆ ಎತ್ತಿದ್ದಾಯಿತು. ಹೆಚ್ಚಿಗೆ ಏನೂ ಅನಾಹುತವಾಗದೆ ಓಮ್ನಿ ಪುರಾಣ ತಮಾಷೆಯಲ್ಲೇ ಮುಕ್ತಾಯವಾದದ್ದು ನಮ್ಮ ಪುಣ್ಯ! ದೇವರ ದಯೆ 🙂


ಜೇನುಕಲ್ಲು ಗುಡ್ಡವನ್ನು ಹಿಂದಿನ ದಿನವಷ್ಟೇ ಹತ್ತಿಳಿದಿದ್ದ ನಮಗೆ ದೊಡ್ಡ ಸವಾಲೆನಿಸಲಿಲ್ಲ

ಇನ್ನೊಂದು ಬಾರಿ ಗಡದ್ದಾಗಿ ಚಪಾತಿ, ಚಟ್ನಿ, ಚಟ್ನಿಪುಡಿಗಳ ಸಮಾರಾಧನೆಯಾಯಿತು. ‘ಎತ್ತಿನ ಭುಜ’ ಪರ್ವತವನ್ನು ಕತ್ತೆತ್ತಿ ನೋಡಿದ ಮೇಲೆ, ಹತ್ತಲು ಮನಸ್ಸು ಮಾಡಿದ್ದು ನಾವೈದೇ ಜನ. ನಾನು, ಮಹೇಶ, ಸುಂಡಿ, ಅಶ್ವಲ್ ಮತ್ತು ಲತಾ ದಾರಿ ತುಳಿಯ ತೊಡಗಿದೆವು. ಆರಂಭದ ಸ್ವಲ್ಪ ಭಾಗ ಕಾಡಿನೊಳಗೆ ಸಾಗುವ ದಾರಿ ನಮ್ಮನ್ನು ಕಡಿದಾಗಿರುವ ಎತ್ತಿನ ಭುಜದ ಶೃಂಗದ ಬುಡಕ್ಕೆ ತಂದು ನಿಲ್ಲಿಸುತ್ತದೆ. ಕತ್ತೆತ್ತಿ ನೋಡಿದರೆ ಹತ್ತುವುದು ಅಸಾಧ್ಯ ಎನಿಸುವ ಎತ್ತಿನ ಭುಜ, ಜೇನುಕಲ್ಲು ಗುಡ್ಡವನ್ನು ಹಿಂದಿನ ದಿನವಷ್ಟೇ ಹತ್ತಿಳಿದಿದ್ದ ನಮಗೆ ದೊಡ್ಡ ಸವಾಲೆನಿಸಲಿಲ್ಲ.

YouTube video player

ಅಂದುಕೊಂಡದ್ದಕ್ಕಿಂತ ಬೇಗನೆ ತುದಿ ಮುಟ್ಟಿ ಎಲ್ಲೆಡೆಯೂ ಪ್ರತಿಧ್ವನಿಸುವಂತೆ ಕಿರುಚಿದ್ದಾಯಿತು. ಸ್ವಲ್ಪ ವಿಶ್ರಮಿಸಿ ವಾಪಸ್ಸು ಹೊರಟೆವು. ಹಿಂತಿರುಗಿ ದಾರಿ ಸವೆಸುತ್ತಾ ಉಪ್ಪಿಯ ಆಕ್ಸಿಡೆಂಟ್ ಕಥೆಗಳು… ಮಹೇಶನ ಫುಟ್ಬಾಲ್ ಪುರಾಣ… ಶಾಲೆ-ಕಾಲೇಜಿನ ದಿನಗಳು… ತೇಜಸ್ವಿಯವರ ಪುಸ್ತಕಗಳು … ದಾರಿ ಖರ್ಚಿಗಾದವು. ವಾಪಸ್ಸು ತಲುಪುವ ಹೊತ್ತಿಗೆ, ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ಗಣ ಬಂದಿದ್ದನ್ನು ನೋಡಿ ಬಂದು ಕುಳಿತಿದ್ದ ಉಳಿದವರು ಸ್ವಾರಸ್ಯಕರ ಚರ್ಚೆ ಪ್ರಾರಂಭಿಸಿದ್ದರು. ಸ್ವಲ್ಪ ಹೊತ್ತು ತಮಾಷೆ, ನಗುಗಳು ಓಡಾಡಿದ ಮೇಲೆ, ಅಲ್ಲೇ ಇದ್ದ ಕೆರೆಯ ಪಕ್ಕದಲ್ಲಿ ಮ್ಯಾಗಿ, ನಿಂಬೆ ಮಿಶ್ರಿತ ಚಹ ಹಸಿವು ತಣಿಸಿದವು.

ಅಲ್ಲಿಂದ ವಾಪಸ್ಸು ಬಸ್ಸು ಸಿಗುವಲ್ಲಿಗೆ ನಡೆದು ಬಂದು, ಬಸ್ಸು ಹತ್ತಿ ಮೂಡಿಗೆರೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಅಲ್ಲಿ ವಿಚಾರಿಸಿದಾಗ ಬೆಂಗಳೂರಿಗೆ ನೇರವಾಗಿ ಬಸ್ಸು ಇಲ್ಲವೆಂದೂ, ಬೇಲೂರಿಗೋ ಇಲ್ಲ ಚಿಕ್ಕಮಗಳೂರಿಗೋ ಹೋಗಬೇಕೆಂದರು. ಅಲ್ಲಿಂದ ಚಿಕ್ಕಮಗಳೂರಿಗೆ ಬಂದು, ಟೌನ್ ಕ್ಯಾಂಟೀನ್ ನಲ್ಲಿ ಪ್ರಸಿದ್ಧವಾದ ದೋಸೆ ತಿಂದಿದ್ದಾಯಿತು.

ಗುಡಾರವೊಂದನ್ನು ರಿಕ್ಷಾದಲ್ಲೇ ಬಿಟ್ಟು ಬಂದು ಚಿಕ್ಕಮಗಳೂರನ್ನೆಲ್ಲ ಸುತ್ತಿದ್ದೂ ಆಯಿತು. ಬೆಂಗಳೂರನ್ನು ತಲುಪಲು ನಮ್ಮೆಲ್ಲರ ಪ್ರೀತಿಯ ಕರ್ನಾಟಕ ಸಾರಿಗೆ ಬಸ್ಸಿಗೆ ಕಾಯುತ್ತಿರುವಾಗ, ಪುಟ್ಟಿ, ಫೇಲಾಗುತ್ತಲೇ ಪಾಸಾದ ಹುಡುಗನ ಸ್ವಾರಸ್ಯಕರ ಕಥೆ ಹೇಳುತ್ತಿದ್ದಳು 🙂 ಮರುದಿನ ಬೆಳಗಿನ ಜಾವ ಬಸ್ಸು ನಮ್ಮನ್ನು ಪ್ರಕೃತಿಯ ಮಡಿಲಿಂದ, ಬದುಕಿನ ಹೋರಾಟದ ರಣರಂಗವಾದ ಬೆಂಗಳೂರಿಗೆ ವಾಪಸ್ಸು ತಂದು ಎಸೆದಿತ್ತು.

ಚಾರಣ ಯಶಸ್ವಿಯಾಗಲು ಮೊದಲ ಕಾರಣ ನಮ್ಮ ಅದ್ಭುತ ತಂಡ. ಗೋಪಿ ಮತ್ತು ಮಹೇಶ ಚಾರಣಕ್ಕೆ ಮಾಡಿದ ಪೂರ್ವತಯಾರಿ ಮತ್ತು ಏರ್ಪಾಡುಗಳನ್ನು ನೆನೆಯಲೇ ಬೇಕು. ಎರಡು ದಿನ ಜೊತೆಯಲ್ಲಿ ಇಟ್ಟ ಹೆಜ್ಜೆ ನನಗೆ ಒಳ್ಳೆಯ ಗೆಳೆಯರನ್ನು ಒದಗಿಸುವುದರ ಜೊತೆಗೆ ಸುಂದರ ನೆನಪುಗಳನ್ನೂ ಉಳಿಸಿ ಹೋಯಿತು.

YouTube video player

ಉಪ್ಪಿ ಮತ್ತು ಶೃತಿಯ ಬೆಕ್ಕಿನ ಜಗಳಗಳು…ಅದನ್ನು ಬಿಡಿಸಲು ಉಪ್ಪಿಯ ಕಾಲರ್ ಹಿಡಿದು ಎಳಕೊಂಡು ಹೋದ ಪುಟ್ಟಿ…ಬಾಕಿ ಇರುವ ಬಿರ್ಯಾನಿಗಾಗಿ ಶೃತಿಯೊಡನೆ ಜಗಳ ತೆಗೆದ ಅಶ್ವಲ್…ಮೂರ್ತಿ ಚಿಕ್ಕದಾದರೂ ಇದ್ದ ಬಿದ್ದ ಗುಡ್ದಗಳನ್ನೆಲ್ಲ ಹತ್ತಿಳಿದ ಲತಾ… ಕುಳಿತಲ್ಲೆಲ್ಲ ಗೊರಕೆ ಹೊಡೆದ ಸುಂಡಿ…ನಮ್ಮೆಲ್ಲರ ಮೆಚ್ಚಿನ ಮೂಡಿಗೆರೆ ಫರ್ನಾಂಡಿಸ್…ಇದ್ದ ಬಿದ್ದ ಸಾಮಾನುಗಳೆಲ್ಲವನ್ನು ಹೊತ್ತು ವಿರಾಗಿಯಂತೆ ಬೆಟ್ಟ ಹತ್ತುತ್ತಿದ್ದ ರವಿ… ನಡುಗುವ ಕಾಲುಗಳೊಡನೆ ಜೇನುಕಲ್ಲುಗುಡ್ಡವನ್ನು ಯಶಸ್ವಿಯಾಗಿ ಇಳಿದ ಪುಟ್ಟಿ…ನಮ್ಮೆಲ್ಲರಿಗೂ ಕುಟುಂಬದ ಮುಖ್ಯನಂತಿದ್ದ ಗೋಪಿ…ಕೊನೆಯವರೆಗೂ ನಕಾಶೆಯಲ್ಲಿ ತಪ್ಪಿದ ದಾರಿಯನ್ನು ಹುಡುಕುತ್ತಿದ್ದ ಮಹೇಶ ಮತ್ತು ಅಶ್ವಲ್…ಹೇಳುತ್ತ ಹೋದರೆ ಮುಗಿಯಲಾರದಷ್ಟು ಸಂತಸದ ಕ್ಷಣಗಳಿಗೆ ಸಾಕ್ಷಿಯಾದ ಈ ಚಾರಣ ಎಲ್ಲರಿಗೂ ಮನಸ್ಸು ತುಂಬ ಖುಷಿ ಕೊಟ್ಟದ್ದು ಸುಳ್ಳಲ್ಲ.

ಚಾರಣಗಳು ಯಾವಾಗಲೂ ನನಗೆ ಮಾನವ ನಿರ್ಮಿತ ಜಗತ್ತಿನಿಂದ ದೂರಾಗಿ, ಪ್ರಕೃತಿಯ ಮಡಿಲಲ್ಲಿ ಬದುಕುವ ಪಾಠವನ್ನು ಕಲಿಸುತ್ತವೆ. ಇನ್ನೊಂದು ಇಂಥದೇ ಸುಂದರ ಚಾರಣಕ್ಕೆ ಎದುರು ನೋಡುತ್ತಿರುವ…

ನಿಮ್ಮವ ಕಿರಣ್ ರಾಜ್ (ಅಂತರಾಳ ಬ್ಲಾಗ್ ಪುಟದ ಮೂಲ ಲೇಖನ)

Leave a Reply

Your email address will not be published. Required fields are marked *